ನವದೆಹಲಿ: ಇಂದು ವೀಕೆಂಡ್. ನಿಮ್ಮ ಸಂಗಾತಿಯೊಂದಿಗೆ ಅಥವಾ ಏಕಾಂಗಿಯಾಗಿ ವೆಬ್ ಸರಣಿ ಅಥವಾ ಚಲನಚಿತ್ರಗಳನ್ನು ವೀಕ್ಷಿಸುವ ಸಮಯ. ಆದ್ದರಿಂದ ಈ ವಾರಾಂತ್ಯದಲ್ಲಿ ವೀಕ್ಷಿಸಲು ಉತ್ತಮವಾಗಿರುವ ಚಲನಚಿತ್ರಗಳ ಪಟ್ಟಿ ಇಲ್ಲಿದೆ.
'ಲಾಸ್ಟ್': ಇದೊಂದು ಅನ್ವೇಷಣೆಯ ಚಲನಚಿತ್ರ. ಸಹಾನುಭೂತಿ, ಸಮಗ್ರತೆ, ಕಳೆದುಹೋದ ಮೌಲ್ಯಗಳ ಹುಡುಕಾಟ. ನೈಜ ಘಟನೆಗಳಿಂದ ಪ್ರೇರಿತವಾದ 'ಲಾಸ್ಟ್' ಯುವ ರಂಗಭೂಮಿ ಕಲಾವಿದ ಹಠಾತ್ ಕಣ್ಮರೆಯಾದ ಹಿಂದಿನ ಸತ್ಯದ ನಿರಂತರ ಹುಡುಕಾಟದಲ್ಲಿ ಯುವ ಅಪರಾಧ ವರದಿಗಾರನ ಕಥೆ ಹೊಂದಿದೆ. ಅನಿರುದ್ಧ ರಾಯ್ ಚೌಧರಿ ನಿರ್ದೇಶಿಸಿದ ಈ ಚಲನಚಿತ್ರ ಫೆ.16, 2023 ರಿಂದ ಒಟಿಟಿ ಪ್ಲಾಟ್‌ಫಾರ್ಮ್ Zee5 ನಲ್ಲಿ ಪ್ರಸಾರವಾಗುತ್ತಿದೆ.
'ದಿ ನೈಟ್ ಮ್ಯಾನೇಜರ್': ಈ ಸರಣಿಯು ಜಾನ್ ಲೆ ಕ್ಯಾರೆ ಅವರ ಕಾದಂಬರಿ 'ದಿ ನೈಟ್ ಮ್ಯಾನೇಜರ್' ನ ಅಧಿಕೃತ ಹಿಂದಿ ರೂಪಾಂತರವಾಗಿದೆ. ಇದನ್ನು ದಿ ಇಂಕ್ ಫ್ಯಾಕ್ಟರಿ ಮತ್ತು ಬನಿಜಯ್ ಏಷ್ಯಾ ನಿರ್ಮಿಸಿದೆ. ಸಂದೀಪ್ ಮೋದಿ ನಿರ್ದೇಶನದ 'ದಿ ನೈಟ್ ಮ್ಯಾನೇಜರ್' ನಲ್ಲಿ ಅನಿಲ್ ಕಪೂರ್, ಆದಿತ್ಯ ರಾಯ್ ಕಪೂರ್, ಸೋಭಿತಾ ಧೂಳಿಪಾಲ, ತಿಲೋಟಮಾ ಶೋಮ್, ಶಾಶ್ವತ ಚಟರ್ಜಿ ಮತ್ತು ರವಿ ಬೆಹ್ಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಒಟಿಟಿ ಪ್ಲಾಟ್‌ಫಾರ್ಮ್ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಪ್ರತ್ಯೇಕವಾಗಿ ಪ್ರಸಾರ ಮಾಡಲಾಗುತ್ತಿದೆ.
'ಫರ್ಜಿ': ಮೊದಲ ಬಾರಿಗೆ ತಮಿಳು ನಟ ವಿಜಯ್ ಸೇತುಪತಿ ಅವರು 'ಫರ್ಜಿ' ಮೂಲಕ ವೆಬ್ ಸಿರೀಸ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸರಣಿ ಮಾಡಿ ಸಖತ್ ಫೇಮಸ್ ಆಗಿದ್ದ ರಾಜ್ ಮತ್ತು ಡಿಕೆ ಈಗ 'ಫರ್ಜಿ' ವೆಬ್ ಸಿರೀಸ್ ಮಾಡಿದ್ದಾರೆ. ವಿಶೇಷವೆಂದರೆ, ಈ ವೆಬ್ ಸಿರೀಸ್‌ನಲ್ಲಿ ವಿಜಯ್ ಸೇತುಪತಿ ಜತೆಗೆ ಶಾಹಿದ್ ಕಪೂರ್ ಕಾಣಿಸಿಕೊಂಡಿದ್ದಾರೆ. ಇಡೀ ಸಿರೀಸ್ ಕಥೆಯು ಖೋಟಾ ನೋಟಿನ ಸುತ್ತ ಸಾಗುತ್ತದೆ. ಇದರಲ್ಲಿ ಖೋಟಾ ನೋಟು ತಯಾರಿಸುವ ವ್ಯಕ್ತಿಯಾಗಿ ನಟ ಶಾಹಿದ್ ಕಪೂರ್ ಕಾಣಿಸಿಕೊಂಡಿದ್ದರೆ, ಪೊಲೀಸ್ ಅಧಿಕಾರಿಯಾಗಿ ಮೈಕೇಲ್ ಆಗಿ ವಿಜಯ್ ಸೇತುಪತಿ ಬಣ್ಣ ಹಚ್ಚಿದ್ದಾರೆ.
'ಸರ್ಕಸ್': ರೋಹಿತ್ ಶೆಟ್ಟಿ ನಿರ್ದೇಶನದ 'ಸರ್ಕಸ್' ಡಿಸೆಂಬರ್ 23, 2022 ರಂದು ಬಿಡುಗಡೆಯಾಯಿತು. ಚಿತ್ರದಲ್ಲಿ ಜಾನಿ ಲಿವರ್, ವರುಣ್ ಶರ್ಮಾ, ಪೂಜಾ ಹೆಗ್ಡೆ, ಸಂಜಯ್ ಮಿಶ್ರಾ, ಅಶ್ವಿನಿ ಕಲ್ಸೇಕರ್, ಮುಖೇಶ್ ತಿವಾರಿ ಮತ್ತು ಸಿದ್ಧಾರ್ಥ್ ಜಾಧವ್ ಸೇರಿದಂತೆ ಹಲವರು ನಟಿಸಿದ್ದಾರೆ. ಫ್ಯಾಮಿಲಿ ಎಂಟರ್‌ಟೈನರ್‌ನಲ್ಲಿ ವರುಣ್ ಶರ್ಮಾ ಕೂಡ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಈಗ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದೆ.
'ದಿ ರೊಮ್ಯಾಂಟಿಕ್ಸ್': ಇದು ಖ್ಯಾತ ಹಿಂದಿ ಚಲನಚಿತ್ರ ನಿರ್ಮಾಪಕ ಯಶ್ ಚೋಪ್ರಾ ಮತ್ತು ಅವರ ನಿರ್ಮಾಣ ಸಂಸ್ಥೆಯಾದ ಯಶ್ ರಾಜ್ ಫಿಲ್ಮ್ಸ್ ಗೆ ಸಂಬಂಧಿಸಿದ್ದು. ಸಂಸ್ಥೆಯೊಂದಿಗೆ 50 ವರ್ಷಗಳ ಕಾಲ ನಿಕಟವಾಗಿ ಕೆಲಸ ಮಾಡಿದ ಬಾಲಿವುಡ್ನ 35 ಪ್ರಮುಖ ವ್ಯಕ್ತಿಗಳನ್ನು ಒಳಗೊಂಡಿರುವ ಡಾಕ್ಯುಮೆಂಟರಿ ಇದಾಗಿದೆ. ಇಂಡಿಯನ್ ಮ್ಯಾಚ್‌ಮೇಕಿಂಗ್ ಖ್ಯಾತಿಯ ಸ್ಮೃತಿ ಮುಂದ್ರಾ ಅವರು ಈ ಡಾಕ್ಯುಮೆಂಟ್ರಿ ನಿರ್ದೇಶಿಸಿದ್ದು ಪ್ರೇಮಿಗಳ ದಿನ ಫೆ.14ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಿತ್ತು. ಮೂರು ತಲೆಮಾರಿನ ನಟ ನಟಿರಾದ ರಿಷಿ ಕಪೂರ್, ಅಮಿತಾಭ್ ಬಚ್ಚನ್, ಶಾರುಖ್ ಖಾನ್, ರಾಣಿ ಮುಖರ್ಜಿ, ರಣಬೀರ್ ಕಪೂರ್, ಅಭಿಷೇಕ್ ಬಚ್ಚನ್, ಭೂಮಿ ಪೆಡ್ನೇಕರ್ ಮತ್ತು ರಣವೀರ್ ಸಿಂಗ್, ದಿವಂಗತ ಚಿತ್ರನಿರ್ಮಾಪಕ ಯಶ್ ಚೋಪ್ರಾ ಅವರ ಬಗ್ಗೆ ಮಾತನಾಡುವುದು ಕಿರುಚಿತ್ರದಲ್ಲಿದೆ.
ಇದನ್ನೂ ಓದಿ: 'ದಿ ರೊಮ್ಯಾಂಟಿಕ್ಸ್'ನಲ್ಲಿ ಹಿಂದಿ ಚಿತ್ರರಂಗದ ತಾರೆಯರ ಸಮಾಗಮ
ಒಟಿಟಿಯಲ್ಲಿ ದಾಖಲೆ ಬರೆದ ವೇದ: ಶಿವರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ ಸಿನಿಮಾ ವೇದ ಫೆ.10 ರಂದು ZEE 5 ಒಟಿಟಿಗೆ ಎಂಟ್ರಿ ಕೊಟ್ಟಿತ್ತು. ಹ್ಯಾಟ್ರಿಕ್ ಹೀರೋ ಸಿನಿ ಕೆರಿಯರ್‌ನ ವಿಶೇಷ ಚಿತ್ರಗಳಲ್ಲಿ ಒಂದಾದ ಈ ಸಿನಿಮಾ ಪ್ರೇಕ್ಷಕರ ಮನಗೆದ್ದು ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದೆ. ಶಿವಣ್ಣ ಅವರ 125ನೇ ಸಿನಿಮಾ ಹಾಗೂ ಗೀತಾ ಶಿವರಾಜ್ ಕುಮಾರ್ ನಿರ್ಮಾಣದ ಮೊದಲ ಚಿತ್ರವಾಗಿರುವ 'ವೇದ' ಒಟಿಟಿಯಲ್ಲಿ ಕೂಡ ದಾಖಲೆ ಬರೆದಿದೆ.
ಕನ್ನಡ ಟೆಲಿವಿಷನ್ ಲೋಕದ ಜನಪ್ರಿಯ ವೀಕೆಂಡ್ ಶೋಗಳು: ಟಿವಿ ಚಾನೆಲ್ಗಳ ನಡುವೆ ರಿಯಾಲಿಟಿ ಶೋ ವಾರ್ ನಡೆಯುತ್ತಿದೆ. ಹೆಚ್ಚಿನ ಪ್ರೇಕ್ಷಕರು ಧಾರಾವಾಹಿಗಳಿಗಿಂತ ಹೆಚ್ಚಾಗಿ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾರೆ. ಅದರಲ್ಲಿಯೂ ವಾರಾಂತ್ಯದಲ್ಲಿ ಪ್ರಸಾರವಾಗುವ ವಿಭಿನ್ನ ಕಾರ್ಯಕ್ರಮ ಹೆಚ್ಚು ಪ್ರೇಕ್ಷಕರನ್ನು ಸೆಳೆಯುತ್ತಿವೆ. ಕನ್ನಡದ ಜನಪ್ರಿಯ ವೀಕೆಂಡ್ ಟಿವಿ ಶೋಗಳ ಪಟ್ಟಿ ಇಲ್ಲಿದೆ..
ವೀಕೆಂಡ್ ವಿತ್ ರಮೇಶ್: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮ ಜನಪ್ರಿಯ ಕಾರ್ಯಕ್ರಮಗಳಲ್ಲೊಂದು. ಸಾಧಕರ ಸಾಧನೆಯ ಹಾದಿಯ ಬಗ್ಗೆ ಪ್ರೇಕ್ಷಕರ ಮುಂದಿಟ್ಟು, ಯುವಜನತೆಗೆ ಸ್ಫೂರ್ತಿ ತುಂಬುತ್ತಿದ್ದ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್. ಎವರ್ ಗ್ರೀನ್ ಹೀರೋ ರಮೇಶ್ ಅರವಿಂದ್ ಅವರು ನಡೆಸಿಕೊಡುವ ಈ ಕಾರ್ಯಕ್ರಮ ನೋಡಲು ಎಲ್ಲರೂ ಕಾತುರದಿಂದ ಕಾಯುತ್ತಿರುತ್ತಾರೆ. ರಮೇಶ್ ಅರವಿಂದ್ ಅವರ ಕನ್ನಡ ಭಾಷೆಯ ಮೇಲಿನ ಹಿಡಿತ, ಅವರು ಹೋಸ್ಟ್ ಮಾಡುವ ರೀತಿ ಎಲ್ಲದಕ್ಕೂ ಒಂದು ಅಭಿಮಾನಿ ವರ್ಗವೇ ಇದೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ಎಲ್ಲರೂ ಬಹಳ ಇಷ್ಟಪಟ್ಟು ನೋಡುತ್ತಾರೆ. ಇಷ್ಟು ಫೇಮಸ್ ಆಗಿದ್ದ ಶೋ ಕಳೆದ ಮೂರು ವರ್ಷಗಳಿಂದ ಪ್ರಸಾರವಾಗಿಲ್ಲ. ಇದು ವೀಕ್ಷಕರ ಬೇಸರಕ್ಕೆ ಕಾರಣವಾಗಿತ್ತು. ಇದೀಗ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮತ್ತೆ ಈ ಕಾರ್ಯಕ್ರಮ ಪ್ರಸಾರವಾಗಲಿದ್ದು, ಈ ಬಾರಿ ಕೂಡ ರಮೇಶ್ ಅವರೇ ಪ್ರೇಕ್ಷಕರಿಗೆ ಸಾಧಕರ ಪರಿಚಯ ಮಾಡಿಸಲಿದ್ದಾರೆ.
ಇದನ್ನೂ ಓದಿ: ಈ ಬಾರಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಆರು ಮಂದಿ ಅತಿಥಿಗಳು ಇವರೇ!
ಸರಿಗಮಪ ಲಿಟಲ್ ಚಾಂಪ್ಸ್: ಜೀ ಕನ್ನಡದಲ್ಲಿ ಪ್ರಸಾರವಾಗುವ ಕನ್ನಡದ ಮ್ಯೂಸಿಕಲ್ ರಿಯಾಲಿಟಿ ಶೋ ಸರಿಗಮಪ ಲಿಟಲ್ ಚಾಂಪ್ಸ್. ಇದು ಈಗಾಗಲೇ ಯಶಸ್ವಿ 18 ಶೋಗಳನ್ನು ಪೂರೈಸಿದೆ. ಎಷ್ಟೋ ಜನ ಮಕ್ಕಳು ಈ ಕಾರ್ಯಕ್ರಮದಿಂದ ಬದುಕು ಕಟ್ಟಿಕೊಂಡಿದ್ದು, ಜನಪ್ರಿಯರಾಗಿದ್ದಾರೆ. ಕ್ರಾಯಕ್ರಮದಲ್ಲಿ ಹಂಸಲೇಖ, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ ತೀರ್ಪುಗಾರರಾಗಿದ್ದಾರೆ. ಅನುಶ್ರೀ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದಾರೆ. ಇದು ಮಕ್ಕಳಿಗಾಗಿಯೇ ಇರುವ ವೇದಿಕೆ. ಮಕ್ಕಳು ಇದರ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುತ್ತಿದ್ದಾರೆ.
ಕಾಮಿಡಿ ಕಿಲಾಡಿಗಳು: ಕನ್ನಡ ಟೆಲಿವಿಷನ್ ಲೋಕದಲ್ಲಿ ತನ್ನದೇ ಛಾಪು ಮೂಡಿಸಿದ ಕಾರ್ಯಕ್ರಮ ಕಾಮಿಡಿ ಕಿಲಾಡಿಗಳು. ವಾರಾಂತ್ಯ ಬಂತು ಅಂದರೆ ಕರುನಾಡಿನ ಜನತೆ ಮಿಸ್ ಮಾಡದೇ ನೋಡುವ ಕಾರ್ಯಕ್ರಮ ಕಾಮಿಡಿ ಕಿಲಾಡಿಗಳು. ಕಾರ್ಯಕ್ರಮದ ತೀರ್ಪುಗಾರರಾಗಿ ನವರಸ ನಾಯಕ ಜಗ್ಗೇಶ್, ಯೋಗರಾಜ್ ಭಟ್ ಹಾಗೂ ಕ್ರೇಜಿ ಕ್ವೀನ್ ರಕ್ಷಿತಾ ಕಾಣಿಸಿಕೊಳ್ಳುತ್ತಾರೆ.
ಇದನ್ನೂ ಓದಿ: 'ವೇಶ್ಯೆಯರು ರಾಣಿಯರಾಗಿದ್ದ ಜಗತ್ತು..': ಹೀರಾಮಂಡಿಯಲ್ಲಿ ಮಿನುಗಿದ ಸೋನಾಕ್ಷಿ, ಕೊಯಿರಾಲಾ