ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ತಾರೆಯರ, ತಂತ್ರಜ್ಞರ ಸಮಾಗಮದಲ್ಲಿ ನಡೆಯುವ ಪ್ರತಿಷ್ಠಿತ ಸೈಮಾ ಅವಾರ್ಡ್ಸ್ 2022 ಈ ಬಾರಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನೆನಪಿನೊಂದಿಗೆ ಸೆಪ್ಟೆಂಬರ್ 10 ಹಾಗೂ 11ರಂದು ಬೆಂಗಳೂರಿನ ಅರಮನೆ ಆವರಣದಲ್ಲಿ ಅದ್ಧೂರಿಯಾಗಿ ನಡೆಯಲಿದೆ.
ಈ ಕುರಿತು ಮಾತನಾಡಿರುವ ಸೈಮಾ ಅವಾರ್ಡ್ನ ಮುಖ್ಯಸ್ಥೆ ಬೃಂದಾ ಪ್ರಸಾದ್, ಸಮಾರಂಭವನ್ನು ಬೆಂಗಳೂರಿನಲ್ಲಿ ನಡೆಸಲು ಖುಷಿಯಾಗುತ್ತಿದೆ. ಇದು ಹತ್ತನೇ ವರ್ಷದ ಪ್ರಶಸ್ತಿ ಸಮಾರಂಭ. ಬೆಂಗಳೂರಿನಲ್ಲಿ ಸೈಮಾ ಅವಾರ್ಡ್ಸ್ ಪ್ರೋಗ್ರಾಮ್ ನಡೆಸಲು ಎರಡು ಪ್ರಮುಖ ಕಾರಣಗಳಿವೆ. ಒಂದು ನಮ್ಮೆಲ್ಲರ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ, ಮತ್ತೊಂದು ಕನ್ನಡ ಚಿತ್ರಗಳು ಈಗ ಪ್ಯಾನ್ ಇಂಡಿಯಾದಲ್ಲಿ ಸಾಕಷ್ಟು ಜನಪ್ರಿಯವಾಗುತ್ತಿರುವುದು. ಹಾಗಾಗಿ ಈ ಬಾರಿ ಬೆಂಗಳೂರನ್ನೇ ಆಯ್ಕೆ ಮಾಡಿಕೊಂಡಿದ್ದೇವೆ ಎಂದರು.
ನಂತರ ಮಾತನಾಡಿದ ಟಾಲಿವುಡ್ ನಟ ರಾಣಾ ದಗ್ಗುಬಾಟಿ, ಒಂದು ಪ್ರಶಸ್ತಿ ಸಮಾರಂಭವನ್ನು 10 ವರ್ಷಗಳ ಕಾಲ ನಡೆಸುವುದು ಸುಲಭವಲ್ಲ. ಆ ನಿಟ್ಟಿನಲ್ಲಿ ನಾನು ಮೊದಲು ಇದರ ಉಸ್ತುವಾರಿ ಬೃಂದಾ ಪ್ರಸಾದ್ ಮತ್ತು ತಂಡಕ್ಕೆ ಅಭಿನಂದನೆ ತಿಳಿಸುತ್ತೇನೆ. ಈ ಬಾರಿ ಹತ್ತನೇ ವರ್ಷದ ಸೈಮಾ ಅವಾರ್ಡ್ಸ್ ನನಗೆ ಪ್ರಿಯವಾದ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಖುಷಿಯ ವಿಚಾರ ಎಂದು ತಿಳಿಸಿದರು.
ನಟ ಡಾಲಿ ಧನಂಜಯ್ ಮಾತನಾಡಿ ನನಗೆ ಸೈಮಾ ಕೇವಲ ಪ್ರಶಸ್ತಿ ಅಲ್ಲ. ಅದೊಂದು ನೆನಪು. ನಾನು ಮೊದಲ ಬಾರಿ ಈ ಪ್ರಶಸ್ತಿ ಸ್ವೀಕರಿಸಲು ಮಲೇಷಿಯಾಗೆ ಹೋಗಿದ್ದು ನನ್ನ ಹೃದಯದಲ್ಲಿ ಇನ್ನೂ ಹಸಿರಾಗಿದೆ. ಈ ಬಾರಿ ನಮ್ಮ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿರುವುದು ಹೆಚ್ಚು ಖುಷಿ ತಂದಿದೆ. ನಿಮ್ಮೆಲ್ಲರಿಗೂ ನಮ್ಮೂರಿಗೆ ಆತ್ಮೀಯ ಸ್ವಾಗತ. ಪದೇ ಪದೇ ಬೆಂಗಳೂರಿನಲ್ಲೇ ಈ ಸಮಾರಂಭ ಮಾಡಬೇಕು ಅನಿಸಬೇಕು. ಆ ಮಟ್ಟದಲ್ಲಿ ಈ ಸಮಾರಂಭ ಯಶಸ್ವಿಯಾಗಲಿ ಎಂದರು.
ಇದನ್ನೂ ಓದಿ: Boycott Liger Movie .. ಭರ್ಜರಿ ಪ್ರಚಾರದ ವೇಳೆ ಲೈಗರ್ ಬಹಿಷ್ಕರಿಸುವಂತೆ ಟ್ವಿಟರ್ ಅಭಿಯಾನ
ಕನ್ನಡ ಹಾಗು ತೆಲುಗಿನಲ್ಲಿ ಮಿಂಚುತ್ತಿರುವ ಶಾನ್ವಿ ಶ್ರೀವಾಸ್ತವ್ ಮಾತನಾಡಿ, ನನಗೆ ಬೆಂಗಳೂರು ತುಂಬಾ ಇಷ್ಟ. ಸಾಕಷ್ಟು ಕನ್ನಡ ಚಿತ್ರಗಳಲ್ಲಿ ನಟಿಸಿದ್ದೇನೆ. ಚಿತ್ರೀಕರಣ ಸಮಯದಲ್ಲಿ ಹಲವು ದಿನಗಳನ್ನು ಇಲ್ಲೇ ಕಳೆದಿದ್ದೇನೆ. ಈ ಬಾರಿ ಅಪ್ಪು ಅವರ ಸ್ಮರಣೆಯೊಂದಿಗೆ ಈ ಸಮಾರಂಭ ನಡೆಯುತ್ತಿರೋದು ಖುಷಿಯಾಗುತ್ತಿದೆ ಅಂದರು. ಈ ಕಾರ್ಯಕ್ರಮಕ್ಕೆ ನಟಿಯರಾದ ಫರಿಯಾ ಅಬ್ದುಲ್ಲಾ, ಶ್ರೀಲೀಲ ಹಾಗೂ ಕೆಲವು ಪ್ರಾಯೋಜಕರು ಉಪಸ್ಥಿತರಿದ್ದರು.