'ದಿ ಕೇರಳ ಸ್ಟೋರಿ' ಸಿನಿಮಾ ಬಿಡುಗಡೆಯಾದಾಗಿನಿಂದ ವಿವಿಧ ಕಾರಣಗಳಿಗಾಗಿ ಸಾಕಷ್ಟು ಸದ್ದು ಮಾಡುತ್ತಿದೆ. ಅನೇಕರು ಚಲನಚಿತ್ರವನ್ನು ಟೀಕಿಸಿದರೆ, ಬಹುತೇಕರು ಮೆಚ್ಚಿ ಕೊಂಡಾಡುತ್ತಿದ್ದಾರೆ. ಗಲ್ಲಾಪೆಟ್ಟಿಗೆಯ ಅಂಕಿಅಂಶಗಳು ಸಿನಿಮಾ ಯಶಸ್ಸನ್ನು ಸೂಚಿಸಿದೆ. ಸುದಿಪ್ತೋ ಸೇನ್ ನಿರ್ದೇಶನದ ಚಿತ್ರವು ಉತ್ತಮ ಪ್ರದರ್ಶನವನ್ನು ಮುಂದುವರಿಸುತ್ತಿದ್ದು, 100 ಕೋಟಿ ಕ್ಲಬ್ ಸೇರಿದೆ.
ಅದಾ ಶರ್ಮಾ ಮುಖ್ಯಭೂಮಿಕೆಯ ಈ ಚಲನಚಿತ್ರವು ವಿವಾದಗಳಿಂದಲೇ ತೆರೆ ಕಂಡಿತು. ಮೊದಲ ದಿನ 81.15 ಕೋಟಿ ರೂ. ಗಳಿಸಿದ ಈ ಸಿನಿಮಾ, ಶನಿವಾರದಂದು 19.50 ರೂ. ಕಲೆಕ್ಷನ್ ಮಾಡಿ ಸದ್ದು ಮಾಡಿತು. ಎರಡನೇ ಶುಕ್ರವಾರ 12.23 ಕೋಟಿ ರೂ. ಗಳಿಸಿತು ಎಂದು ಸಿನಿಮಾ ಬ್ಯುಸಿನೆಸ್ ಟ್ರ್ಯಾಕರ್ ಸ್ಯಾಕ್ನಿಲ್ಕ್ ಹೇಳಿದ್ದಾರೆ. ಒಟ್ಟಾರೆ ಈವರೆಗೆ 112.87 ಕೋಟಿ ರೂ. ಗಳಿಸುವಲ್ಲಿ 'ದಿ ಕೇರಳ ಸ್ಟೋರಿ' ಯಶಸ್ವಿ ಆಗಿದೆ.
ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅಭಿನಯದ ಪಠಾಣ್, ಶ್ರದ್ಧಾ ಕಪೂರ್ ಮತ್ತು ರಣ್ಬೀರ್ ಕಪೂರ್ ನಟನೆಯ ತು ಜೂಟಿ ಮೇ ಮಕ್ಕರ್ ನಂತರ, ದಿ ಕೇರಳ ಸ್ಟೋರಿ ಸಿನಿಮಾ 2023ರ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ಒಂದಾಗಿದೆ. ಕೇವಲ 107.71 ಕೋಟಿ ರೂಪಾಯಿ ಗಳಿಸಿದ ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಅವರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾವನ್ನು 'ದಿ ಕೇರಳ ಸ್ಟೋರಿ' ಹಿಂದಿಕ್ಕಿದೆ.
ಇದನ್ನೂ ಓದಿ: Mothers Day: ಮಕ್ಕಳಾದರೂ ಮಾಸದ ಸೌಂದರ್ಯ.. ಯುವತಿಯರೂ ನಾಚುವಂತಹ ಸ್ಯಾಂಡಲ್ವುಡ್ ಮಮ್ಮಿಯರ ಚೆಲುವು
'ದಿ ಕೇರಳ ಸ್ಟೋರಿ' ಬಾಲಿವುಡ್ ದೂದ್ಪೇಡಾ ಖ್ಯಾತಿಯ ಕಾರ್ತಿಕ್ ಆರ್ಯನ್ ಅವರ ಶೆಹಜಾದಾ ಸಿನಿಮಾ ( 32.20 ಕೋಟಿ ರೂ.), ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರ ಸೆಲ್ಫಿ ಸಿನಿಮಾ (16.85 ಕೋಟಿ ರೂ.), ಮತ್ತು ಅಜಯ್ ದೇವಗನ್ ನಟಿಸಿದ ಭೋಲಾ (82.04 ಕೋಟಿ ರೂ.) ನಂತಹ ಸೂಪರ್ ಸ್ಟಾರ್ಗಳ ಚಲನಚಿತ್ರಗಳನ್ನು ಮೀರಿಸಿದೆ. ಅದಾಗ್ಯೂ, ವಿವೇಕ್ ಅಗ್ನಿಹೋತ್ರಿ ಅವರ ದಿ ಕಾಶ್ಮೀರ್ ಫೈಲ್ಸ್ ಸಂಗ್ರಹಗಳನ್ನು ಮೀರಿಸಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: ಮದರ್ಸ್ ಡೇಗೆ ವಿಶೇಷ ಫೋಟೋ ಹಂಚಿಕೊಂಡು ಶುಭಾಶಯ ಕೋರಿದ ವಿರಾಟ್..
ಈ ಶುಕ್ರವಾರ ಬೆಲ್ಲಂಕೊಂಡ ಶ್ರೀನಿವಾಸ್ ಅಭಿನಯದ ಛತ್ರಪತಿ ಸಿನಿಮಾ ಬಿಡುಗಡೆ ಕಂಡಿತು. ಆದರೆ ಥಿಯೇಟರ್‌ಗಳಿಗೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಅವರ ಹಿಂದಿ ಚಿತ್ರ ವಿಫಲವಾಗಿದೆ. ಕೇರಳ ಸ್ಟೋರಿ ಸಿನಿಮಾಗೆ ಸದ್ಯ ಪ್ರತಿಸ್ಪರ್ಧಿ ಚಿತ್ರವಿಲ್ಲ. ಹಾಗಾಗಿ ಬಾಕ್ಸ್ ಆಫೀಸ್ ಕಲೆಕ್ಷನ್ ಸಂಖ್ಯೆ ಏರುವ ಸಾಧ್ಯತೆ ಹೆಚ್ಚಿದೆ.
ಸುದಿಪ್ತೋ ಸೇನ್ ಆ್ಯಕ್ಷನ್ ಕಟ್ ಹೇಳಿರುವ ದಿ ಕೇರಳ ಸ್ಟೋರಿ ಸಿನಿಮಾ ಮೇ 5ರಂದು (ಶುಕ್ರವಾರ) ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ವಿವಾದದಿಂದಲೇ ಸದ್ದು ಮಾಡಿದ ಈ ಸಿನಿಮಾ ಕಥೆ ಕೇರಳ ಮಹಿಳೆಯರ ಸುತ್ತ ಸುತ್ತುತ್ತದೆ. ಮತಾಂತರ, ಭಯೋತ್ಪಾದಕ ಸಂಘಟನೆಗಳಿಗೆ ಒತ್ತಾಯಪೂರ್ವಕವಾಗಿ ಸೇರಿಸುವಿಕೆ ಕುರಿತಾಗಿದೆ ಈ ಚಿತ್ರ. ಇದು ನೈಜ ಘಟನೆಯನ್ನಾಧರಿಸಿದ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದ್ದು, ಹಲವರು ಇದನ್ನು ನಿರಾಕರಿಸಿದ್ದಾರೆ.