ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನದೇ ಕಾಮಿಡಿ ಮ್ಯಾನರಿಸಂನಿಂದ ಬಹುಬೇಡಿಕೆಯ ಹಾಸ್ಯ ನಟರಾಗಿ ಪ್ರಖ್ಯಾತಿ ಹೊಂದಿರುವ ನಟ ಬ್ರಹ್ಮಾನಂದಮ್. ಪುನೀತ್ ರಾಜ್‍ಕುಮಾರ್ ಅಭಿನಯದ ನಿನ್ನಿಂದಲೇ ಸಿನಿಮಾದಲ್ಲಿ ಬ್ರಹ್ಮಾನಂದಮ್ ಅವರು ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾ ಬಳಿಕ ನಟ ರಾಜೀವ್ ನಟನೆಯ ಉಸಿರೇ ಉಸಿರೇ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಮತ್ತೆ ಸ್ಯಾಂಡಲ್ವುಡ್ ಕಡೆ ಮುಖ ಮಾಡಿದ್ದಾರೆ.
ಈ ಸಿನಿಮಾದಲ್ಲಿ ಡ್ರಾಮಾ ಮೇಷ್ಟ್ರು ಪಾತ್ರ ಮಾಡುತ್ತಿರುವ ಬ್ರಹ್ಮಾನಂದಮ್ ಅವರು ಡಾ.ರಾಜ್‍ಕುಮಾರ್ ಹಾಗೂ ದಿವಂಗತ ಪುನೀತ್ ರಾಜ್‍ಕುಮಾರ್ ಜೊತೆ ಇದ್ದ ಒಡನಾಟವನ್ನ ಬಿಚ್ಚಿಟ್ಟರು. ಉಸಿರೇ ಉಸಿರೇ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತೆಲುಗು ನಟ ಬ್ರಹ್ಮಾನಂದಮ್ ಅವರು, ಕನ್ನಡದಲ್ಲಿ ಸಿನಿಮಾ ಮಾಡೋದಿಕ್ಕೆ ಡಾ.ರಾಜಕುಮಾರ್ ಕಾರಣ. ಯಾಕೆಂದರೆ ರಾಜಕುಮಾರ್ ಅವರು ನಟರಾಗಿ, ಗಾಯಕರಾಗಿ, ಸರಳತೆಯ ರಾಯಭಾರಿಯಾಗಿದ್ದರು. ಅವರ ಮೇಲೆ ಇದ್ದ ಗೌರವವೇ ನಾನು ಕನ್ನಡದಲ್ಲಿ ಸಿನಿಮಾ ಮಾಡೋದಕ್ಕೆ ಸ್ಫೂರ್ತಿ ಅಂದರು.
ನಾನು ಅಭಿನಯ ಮಾಡುವ ಕಾಮಿಡಿ ಸೆನ್ಸ್ ಅವರಿಗೆ ಬಹಳ ಇಷ್ಟ ಅನ್ನೋದು ನನಗೆ ಗೊತ್ತಿರಲಿಲ್ಲ. ನನಗೆ ಶಿವರಾಜ್ ಕುಮಾರ್ ಅವರು ಅವರ ಮನೆಗೆ ಹೋದಾಗ ಅಪ್ಪಾಜಿ ಪ್ರತಿದಿನ ನಿಮ್ಮ ಕಾಮಿಡಿಯನ್ನು ನೋಡ್ತಾ ಇದ್ದರು ಅಂತಾ ಹೇಳಿದಾಗ ನನಗೆ ದೊಡ್ಡ ಪ್ರಶಸ್ತಿ ಸಿಕ್ಕ ಹಾಗೇ ಆಯಿತು ಅಂದರು. ಇನ್ನು ಪುನೀತ್ ರಾಜ್‍ಕುಮಾರ್ ಬಗ್ಗೆ ಮಾತನಾಡಿದ ಬ್ರಹ್ಮಾನಂದಮ್, ನಾನು ಪುನೀತ್ ಅವ್ರನ್ನ, ಮೂರು ಬಾರಿ ಭೇಟಿ ಮಾಡಿದ್ದೇನೆ. ಎಂಥಾ ಸಿಂಪಲ್ ವ್ಯಕ್ತಿ. ಅದ್ಭುತ ನಟನನ್ನ ಕಳೆದುಕೊಂಡಿದ್ದೀವಿ ಅಂತಾ ಮರುಗಿದರು.
ಇದನ್ನೂ ಓದಿ: ಹೊಸ ದಾಖಲೆ ಬರೆದ ಕೆಜಿಎಫ್ ಚಾಪ್ಟರ್-2.. 12 ಸಾವಿರ ಪರದೆಗಳಲ್ಲಿ ರಾಕಿ ದರ್ಶನ!