ಅದ್ಧೂರಿ ಮೇಕಿಂಗ್ ಹಾಗೂ ಪ್ಯಾನ್ ಇಂಡಿಯಾ ಸಿನಿಮಾಗಳ ಮಧ್ಯೆ ಕಂಟೆಂಟ್ ಆಧಾರಿತ ಚಿತ್ರಗಳು ಸಿನಿಮಾ ಪ್ರಿಯರನ್ನ ಆಕರ್ಷಿಸುತ್ತಿವೆ. ಇಂಥದ್ದೇ ಕಂಟೆಂಟ್ ಹೊಂದಿರುವ 'ಸಾರಾಂಶ' ಶೀರ್ಷಿಕೆಯ ಸಿನಿಮಾವೊಂದು ಪ್ರೇಕ್ಷಕರೆದುರು ಬರುತ್ತಿದೆ. ಈ ಚಿತ್ರವನ್ನು ಬಹುಮುಖ ಪ್ರತಿಭೆ ಸೂರ್ಯ ವಸಿಷ್ಠ ನಿರ್ದೇಶಿಸಿದ್ದಾರೆ. ಶೀರ್ಷಿಕೆಯಲ್ಲಿಯೇ ವೈಶಿಷ್ಟ್ಯವೊಂದನ್ನು ಬಚ್ಚಿಟ್ಟುಕೊಂಡಂತಿರೋ ಈ ಸಿನಿಮಾ ಪ್ರೇಕ್ಷಕರೊಂದಿಗೆ ಮುಖಾಮುಖಿಯಾಗುವ ಕಾತರದಲ್ಲಿದೆ.
![Sruthi Hariharan will come with the Saramsha movie](https://etvbharatimages.akamaized.net/etvbharat/prod-images/13-01-2024/kn-bng-02-saramsha-movie-jothige-banda-sruthihariharan-7204735_13012024175727_1301f_1705148847_969.jpg)
ಬಹಳ ದಿನಗಳ ಬಳಿಕ ಶೃತಿ ಹರಿಹರನ್ ಮುಖ್ಯಭೂಮಿಕೆಯಲ್ಲಿರೋ ಸಾರಾಂಶ ಚಿತ್ರ ತನ್ನ ಶೀರ್ಷಿಕೆಯಿಂದಲೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಓರ್ವ ಕಥೆಗಾರ ತಾನು ಸೃಷ್ಟಿಸಿದ ಪಾತ್ರವನ್ನೇ ಎದುರುಗೊಳ್ಳುವ ರೋಮಾಂಚಕ ಕಥೆಯಿದು. ಆ ಪಾತ್ರವನ್ನು ಕಥೆಗಾರ ಬರೆದನೋ, ಆ ಪಾತ್ರವೇ ಕಥೆಗಾರನ ಮೂಲಕ ಬರೆಸಿಕೊಳ್ಳುತ್ತಿದೆಯೋ ಎಂಬಂಥ ಸೂಕ್ಷ್ಮ ಕದಲಿಕೆಯ ಸುತ್ತ ಈ ಸಿನಿಮಾ ಚಲಿಸುತ್ತದೆಯಂತೆ. ಸದ್ಯಕ್ಕೆ ನಿರ್ದೇಶಕರು ಇವಿಷ್ಟು ವಿಚಾರವನ್ನಷ್ಟೇ ಬಿಟ್ಟುಕೊಟ್ಟಿದ್ದಾರೆ. ಜೊತೆಗೆ, ಮೋಹಕ ವಾಸ್ತವಿಕತೆ ಅಥವಾ ಮ್ಯಾಜಿಕಲ್ ರಿಯಲಿಸಂ ಎಂಬ ವಿರಳ ಜಾನರ್ಗೆ ಈ ಸಿನಿಮಾ ಒಳಪಡಲಿದೆ ಎಂಬ ಸ್ಪಷ್ಟೀಕರಣವನ್ನೂ ಕೊಟ್ಟಿದ್ದಾರೆ.
![Sruthi Hariharan will come with the Saramsha movie](https://etvbharatimages.akamaized.net/etvbharat/prod-images/13-01-2024/kn-bng-02-saramsha-movie-jothige-banda-sruthihariharan-7204735_13012024175727_1301f_1705148847_813.jpeg)
ಇನ್ನುಳಿದಂತೆ, ಈ ಚಿತ್ರದ ಚಿತ್ರೀಕರಣವನ್ನು ಅಂದುಕೊಂಡಂತೆ ವ್ಯವಸ್ಥಿತವಾಗಿ ಚಿತ್ರತಂಡ ಮುಗಿಸಿಕೊಂಡಿದೆ. ಇಲ್ಲಿ ಬಹುಮುಖ್ಯವಾಗಿ ನಾಲ್ಕು ಪಾತ್ರಗಳ ಸುತ್ತ ಕಥೆ ಚಲಿಸುತ್ತದೆ. ಈ ಚಿತ್ರದಲ್ಲಿ ದೀಪಕ್ ಸುಬ್ರಹ್ಮಣ್ಯ, ಸೂರ್ಯ ವಸಿಷ್ಠ, ಶೃತಿ ಹರಿಹರನ್, ಶ್ವೇತಾ ಗುಪ್ತ ಕಾಣಿಸಿಕೊಳ್ಳಲಿದ್ದಾರೆ. ಸೂರ್ಯ ವಸಿಷ್ಠ ಮತ್ತು ಗಂಟುಮೂಟೆ ಖ್ಯಾತಿಯ ರೂಪಾ ರಾವ್ ಸಂಭಾಷಣೆ ಬರೆದಿದ್ದಾರೆ. ಆ ದಿನಗಳು, ತಮಸ್ಸು, ಮಠ ಸೇರಿದಂತೆ ಮೊದಲಾದ ಸಿನಿಮಾಗಳ ಮೂಲಕ ಖ್ಯಾತರಾಗಿರೋ ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಮುಂತಾದವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
![Sruthi Hariharan will come with the Saramsha movie](https://etvbharatimages.akamaized.net/etvbharat/prod-images/13-01-2024/kn-bng-02-saramsha-movie-jothige-banda-sruthihariharan-7204735_13012024175727_1301f_1705148847_768.jpeg)
ಇದನ್ನೂ ಓದಿ: ನಿರ್ದೇಶಕ ಅಶುತೋಷ್ ಗೋವಾರಿಕರ್ ಜೊತೆ ಕಾಣಿಸಿಕೊಂಡ ರಿಷಬ್ ಶೆಟ್ಟಿ!
'ಸಾರಾಂಶ' ಸಿನಿಮಾದಲ್ಲಿ ಒಟ್ಟು ಮೂರು ಹಾಡುಗಳಿವೆ. ಉದಿತ್ ಹರಿತಾಸ್ (ಅಜ್ಞಾತ) ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಮೋದ್ ಮರವಂತೆ ಮತ್ತು ಸೂರ್ಯ ವಸಿಷ್ಠ ಅವರ ಸಾಹಿತ್ಯವಿರೋ ಹಾಡುಗಳಿಗೆ ಮಾಧುರಿ ಶೇಷಾದ್ರಿ ಮತ್ತು ಪಂಚಮ್ ಜೀವಾ ಧ್ವನಿಯಾಗಿದ್ದಾರೆ. ಅಪರಾಜಿತ್ ಹಿನ್ನೆಲೆ ಸಂಗೀತ, ಭೀಮಸೇನ ನಳಮಹರಾಜ, ಗಂಟುಮೂಟೆ ಖ್ಯಾತಿಯ ಪ್ರದೀಪ್ ನಾಯಕ್ ಸಂಕಲನ ಈ ಚಿತ್ರಕ್ಕಿದೆ. ರವಿ ಕಶ್ಯಪ್ ಮತ್ತು ಆರ್ ಕೆ ನಲ್ಲಮ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶೀಘ್ರದಲ್ಲೇ ಸಿನಿಮಾವನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಚಿತ್ರತಂಡ ಕೆಲಸ ಮಾಡುತ್ತಿದೆ.
![Sruthi Hariharan will come with the Saramsha movie](https://etvbharatimages.akamaized.net/etvbharat/prod-images/13-01-2024/kn-bng-02-saramsha-movie-jothige-banda-sruthihariharan-7204735_13012024175727_1301f_1705148847_862.jpeg)
ಇದನ್ನೂ ಓದಿ: ಬೆಂಗಳೂರಿನಲ್ಲಿ ರಾಮ್ ಚರಣ್ - ಉಪಾಸನಾ: ಸಂಕ್ರಾಂತಿ ಸಂಭ್ರಮದಲ್ಲಿ ತಾರಾ ಕುಟುಂಬ