ಬಹುಭಾಷಾ ನಟ, ಚಂದನವನದ ಎವರ್ಗ್ರೀನ್ ಹೀರೋ, ನಿರ್ದೇಶಕ, ನಿರೂಪಕ ರಮೇಶ್ ಅರವಿಂದ್ ನಟನೆಯ ಬಹು ನಿರೀಕ್ಷಿತ ಚಿತ್ರ "ಶಿವಾಜಿ ಸುರತ್ಕಲ್ 2" ಟ್ರೇಲರ್ ಬಿಡುಗಡೆ ಆಗಿದೆ. ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಚಿತ್ರದ ಟ್ರೇಲರ್ ನಿನ್ನೆ ಆನಂದ್ ಆಡಿಯೋ ಮೂಲಕ ರಲೀಸ್ ಆಗಿದ್ದು, ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- " class="align-text-top noRightClick twitterSection" data="">
35 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ರಮೇಶ್ ಅರವಿಂದ್ ಸುಮಾರು 140 ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. 2018ರ ಬಳಿಕ ಅವರ ನಟನೆಯ ಸಿನಮಾ ಬೆರಳೆಣಿಕೆಯಷ್ಟು. ಆದ್ರೆ ಕನ್ನಡದ ಜನಪ್ರಿಯ ಶೋ ವೀಕೆಂಡ್ ವಿತ್ ರಮೇಶ್ ಮೂಲಕ ಸದ್ದು ಮಾಡುತ್ತಿದ್ದಾರೆ.
2020ರಲ್ಲಿ ತೆರೆಕಂಡ ಅವರ ಶಿವಾಜಿ ಸುರತ್ಕಲ್ ಚಿತ್ರ ಮೆಚ್ಚುಗೆ ಪಡೆದುಕೊಂಡಿತ್ತು. ಚಿತ್ರದ ಸೀಕ್ವೆಲ್ "ಶಿವಾಜಿ ಸುರತ್ಕಲ್ 2" ಬರುತ್ತಿದೆ. ಥ್ರಿಲ್ಲಿಂಗ್, ತಂದೆ ಮಗಳ ಬಾಂಧವ್ಯದ ಕಥೆಯಿರುವ ಚಿತ್ರವಿದು. ಕಳೆದ ಸೆಪ್ಟೆಂಬರ್ 10ರಂದು ಅಂದರೆ ರಮೇಶ್ ಅರವಿಂದ್ ಅವರ ಜನ್ಮದಿನದಂದು ಈ ಚಿತ್ರದ ಟೀಸರ್ ರಿಲೀಸ್ ಆಗಿತ್ತು. ಇದೀಗ ಶಿವಾಜಿ ಸುರತ್ಕಲ್ 2 ಟ್ರೇಲರ್ ಬಿಡುಗಡೆ ಆಗುವ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ.
ಚಿತ್ರದ ಬಗ್ಗೆ ನಿರ್ದೇಶಕ ಆಕಾಶ್ ಶ್ರೀವತ್ಸ ಮಾತನಾಡಿ, ಲಾಕ್ ಡೌನ್ ಸಂದರ್ಭದಲ್ಲಿ ಹುಟ್ಟಿದ ಕಥೆಯೇ "ಶಿವಾಜಿ ಸುರತ್ಕಲ್ 2". ನಾನು ಮತ್ತು ರಮೇಶ್ ಅರವಿಂದ್ ಸರ್ ಶಿವಾಜಿ ಸುರತ್ಕಲ್ ಸೀಕ್ವೆಲ್ ಕಥೆಯನ್ನು ವಾಟ್ಸಪ್ ಮೂಲಕ ಚರ್ಚಿಸಿದೆವು. ಲಾಕ್ಡೌನ್ನಿಂದ ಬಹುತೇಕರಿಗೆ ತೊಂದರೆ ಆದರೆ, ನಮಗೆ ಮಾತ್ರ ಈ ಚಿತ್ರದ ಕಥೆ ಬರೆಯಲು ಅನುಕೂಲ ಆಯಿತು. ನಮ್ಮ ಚಿತ್ರ ತಂಡದ ಪೂರ್ಣ ಸಹಕಾರದಿಂದ ಈ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ. ಈಗ ಟ್ರೇಲರ್ ಅನಾವರಣಗೊಂಡಿದೆ. ಇದೇ ಏಪ್ರಿಲ್ 14ರಂದು ನಮ್ಮ ಶಿವಾಜಿ ಮತ್ತೆ ಹೊಸ ಕೇಸ್ ಹೊತ್ತು ಬರಲಿದ್ದಾರೆ. ಎಲ್ಲರಲ್ಲೂ ಮನೆ ಮಾಡಿರುವ "ಮಾಯಾವಿ" ಯಾರು? ಎಂಬ ಪ್ರಶ್ನೆಗೆ ಅಂದೇ ಉತ್ತರ ಸಿಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಮೇಕಪ್ ಇಲ್ಲದೇ ನಟಿಸುವುದರಿಂದ ಪ್ರೇಕ್ಷಕರು ನನ್ನನ್ನು ಇಷ್ಟಪಡುತ್ತಾರೆ : ಸಾಯಿ ಪಲ್ಲವಿ
ಉತ್ತಮ ತಂಡದ ಜೊತೆ ಕೆಲಸ ಮಾಡಿರುವ ಬಗ್ಗೆ ನನಗೆ ಖುಷಿ ಇದೆ. ಶಿವಾಜಿ ಸುರತ್ಕಲ್ 2 ಟ್ರೇಲರ್ ಚೆನ್ನಾಗಿ ಮೂಡಿ ಬಂದಿದೆ. ಇದೇ ಏಪ್ರಿಲ್ 14ರಂದು ಚಿತ್ರಮಂದಿರಗಳಲ್ಲಿ ನಮ್ಮ ಈ ಸಿನಿಮಾ ತೆರೆಕಾಣಲಿದೆ. ನಾನು ಪ್ರತೀ ವೀಕೆಂಡ್ನಲ್ಲಿ ನಿಮ್ಮ ಮನೆಗೆ ಬರುತ್ತೇನೆ. ನೀವು ಕುಟುಂಬ ಸಮೇತ ನಮ್ಮ ಚಿತ್ರ ನೋಡಲು ಚಿತ್ರಮಂದಿರಕ್ಕೆ ಬನ್ನಿ ಎಂದರು ನಾಯಕ ನಟ ರಮೇಶ್ ಅರವಿಂದ್.
ಇದನ್ನೂ ಓದಿ: ರಾಜಕೀಯ ಎಂಟ್ರಿ ಬಗ್ಗೆ ವದಂತಿ... April 1st ಹೀಗೆ ಹೇಳಿ ಎಂದ ರಿಷಬ್ ಶೆಟ್ಟಿ
ನನ್ನ ಮಿತ್ರರ ಸಹಕಾರದಿಂದ ಈ ಶಿವಾಜಿ ಸುರತ್ಕಲ್ 2 ನಿರ್ಮಾಣ ಮಾಡಿದ್ದೇನೆ. ಒಂದೊಳ್ಳೆ ಕಥೆ, ಸದಭಿರುಚಿಯ ಸಿನಿಮಾ ನಿರ್ಮಾಣ ಮಾಡಿದ ಹೆಮ್ಮೆ ಇದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲ ಇರಲಿ ಎಂದರು ನಿರ್ಮಾಪಕ ಅನೂಪ್ ಗೌಡ. ಚಿತ್ರದಲ್ಲಿ ಪಾತ್ರ ವಹಿಸಿರುವ ರಾಧಿಕಾ ಚೇತನ್, ಮೇಘನಾ ಗಾಂವ್ಕರ್, ಸಂಗೀತಾ ಶೃಂಗೇರಿ, ರಘು ರಮಣಕೊಪ್ಪ, ವಿನಾಯಕ ಜೋಶಿ, ವಿದ್ಯಾಮೂರ್ತಿ ಮುಂತಾದವರು ತಮ್ಮ ಪಾತ್ರ ಹಾಗೂ ಚಿತ್ರದ ಬಗ್ಗೆ ಮಾತನಾಡಿದರು.