ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ಅಭಿನಯದ ಬಹು ನಿರೀಕ್ಷಿತ ವೇದ ಚಿತ್ರ ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿ ಗೀತಾ ಶಿವರಾಜ್ ಕುಮಾರ್ ನಿರ್ಮಾಣದಲ್ಲಾದ ವೇದ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬೆಂಗಳೂರಿನ ಸಿದ್ದೇಶ್ವರ, ಪ್ರಸನ್ನ, ಶ್ರೀನಿವಾಸ ಸಾಕಷ್ಟು ಚಿತ್ರಮಂದಿರಗಳಲ್ಲಿ 5.30ಕ್ಕೆ ಶೋ ಆರಂಭಗೊಂಡಿದೆ. ರಾಜ್ಯಾದ್ಯಂತ 1,250ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ವೇದ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ.
ವೇದ ರಿಲೀಸ್ ಹಿನ್ನೆಲೆ ಪ್ರಸನ್ನ ಚಿತ್ರಮಂದಿರದಲ್ಲಿ ಅಭಿಮಾನಿಗಳು ಹೋಮ ಹವನ ಮಾಡಿಸಿದ್ದರು. ಅಭಿಮಾನಿಗಳು ಪಟಾಕಿ ಸಿಡಿಸುವ ಮೂಲಕ ವೇದ ಚಿತ್ರದ ಬಿಡುಗಡೆ ಸಂಭ್ರಮವನ್ನು ಹಬ್ಬದಂತೆ ಆಚರಣೆ ಮಾಡಿದ್ದಾರೆ. ವೇದ ಸಿನಿಮಾ ಮಹಿಳಾ ಪ್ರಧಾನ ಸಿನಿಮಾವೇ ಎಂದು ಬಹಳಷ್ಟು ಜನರು ಚರ್ಚಿಸುತ್ತಿದ್ದಾರೆ. ನಾಲ್ವರು ಮಹಿಳೆಯರು ಪ್ರಧಾನ ಪಾತ್ರ ಮಾಡಿರುವ ಸಿನಿಮಾವಿದು. ಈ ಮೊದಲ ಸಂದರ್ಶನದಲ್ಲೂ ಮಹಿಳೆಯರು ಸಖತ್ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಳ್ಳಿದ್ದಾರೆಂದು ನಟ ಶಿವರಾಜ್ಕುಮಾರ್ ತಿಳಿಸಿದ್ದರು.
ಗೀತಾ ಶಿವ ರಾಜ್ಕುಮಾರ್ ಹಾಗೂ ಜೀ ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರವನ್ನು ಎ.ಹರ್ಷ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರಕ್ಕೆ ಸ್ವಾಮಿ ಜೆ ಗೌಡ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ ಹಾಗೂ ರವಿವರ್ಮ, ವಿಕ್ರಮ್ ಮೋರ್, ಚೇತನ್ ಡಿಸೋಜ , ಅರ್ಜುನ್ ರಾಜ್ ಸಾಹಸ ನಿರ್ದೇಶನವಿದೆ. ರವಿ ಸಂತೆಹಕ್ಲು ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.
ಇದನ್ನೂ ಓದಿ: ನಾನು ಬಣ್ಣ ಹಚ್ಚಿದರೆ ಸಿನಿ ಕಾರ್ಮಿಕರಿಗೆ ಕೆಲಸ ಸಿಗುತ್ತೆ: ನಟ ಶಿವ ರಾಜ್ಕುಮಾರ್
ಇನ್ನು ಶಿವರಾಜಕುಮಾರ್ ಜೊತೆ ಗಾನವಿ ಲಕ್ಷ್ಮಣ್, ಉಮಾಶ್ರೀ, ಅದಿತಿ ಸಾಗರ್, ಶ್ವೇತ ಚಂಗಪ್ಪ, ಚೆಲುವರಾಜು, ರಾಘು ಶಿವಮೊಗ್ಗ, ವಿನಯ್ ಬಿದ್ದಪ್ಪ, ಪ್ರಸನ್ನ, ಕುರಿ ಪ್ರತಾಪ್, ಲಾಸ್ಯ ನಾಗರಾಜ್, ಭರತ್ ಸಾಗರ್, ಸಂಜೀವ್, ಚಾರ್ವಿ ಗೌಡ, ಜಗಪ್ಪ, ಚೇತನ ಹರಿ ಸೇರಿದಂತೆ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.