ಕಾಸ್ಟ್, ಟೈಟಲ್, ಟ್ರೇಲರ್ನಿಂದಲೇ ದಕ್ಷಿಣ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಕ್ರೇಜ್ ಕ್ರಿಯೇಟ್ ಮಾಡಿರುವ ಸಿನಿಮಾ 'ಘೋಸ್ಟ್'. ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಒರಿಜಿನಲ್ ಗ್ಯಾಂಗ್ಸ್ಟರ್ ಆಗಿ ಕಾಣಿಸಿಕೊಳ್ಳಲು ಸಜ್ಜಾಗಿರುವ ಚಿತ್ರ. ಬಹುನಿರೀಕ್ಷಿತ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಸಿನಿಮಾ ಕುರಿತು ಹ್ಯಾಟ್ರಿಕ್ ಹೀರೋ ಹಾಗೂ ಘೋಸ್ಟ್ ಚಿತ್ರತಂಡ ಕೆಲ ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಮೊದಲು ಮಾತು ಶುರು ಮಾಡಿದ ಶಿವಣ್ಣ, ಹೊಸತನದ ಕಥೆಯೇ ಈ ಚಿತ್ರ ಒಪ್ಪಿಕೊಳ್ಳಲು ಪ್ರಮುಖ ಕಾರಣ. ಒಂದೇ ರೀತಿಯ ಪಾತ್ರಗಳಿಂದ ಹೊರಬರಲು ಈ ಸಿನಿಮಾವನ್ನು ಒಪ್ಪಿಕೊಂಡೆ. ಕಥೆ ಕೇಳಿದ ದಿನವೇ ಈ ಚಿತ್ರದಲ್ಲಿ ನಟಿಸುವುದಾಗಿ ಗ್ರೀನ್ ಸಿಗ್ನಲ್ ಕೊಟ್ಟೆ. ಮೂರು ಶೇಡ್‍ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಕೇವಲ 48 ಗಂಟೆಗಳಲ್ಲಿ ನಡೆಯುವ ಕಥೆ ಇದು. ನನಗೆ ಕಥೆ ಇಷ್ಟವಾದಂತೆ, ಪ್ರೇಕ್ಷಕರಿಗೂ ಈ ಸಿನಿಮಾ ಇಷ್ಟ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಮೈಸೂರಿನ ಶಕ್ತಿಧಾಮದಲ್ಲಿದ್ದೆ. ಅಲ್ಲಿ ಬಂದು ಶ್ರೀನಿ ಅವರು ಈ ಕಥೆ ಹೇಳಿದ್ರು. ನನಗೆ ಒಂದು ಲೈನ್ ಕಥೆ ಕೇಳಿ ಸಖತ್ ಥ್ರಿಲ್ ಎನಿಸಿತು. ಹಾಗಾಗಿ, ಈ ಸಿನಿಮಾ ಮಾಡೋಣ ಅಂತಾ ಅಂದೇ ಗ್ರೀನ್ ಸಿಗ್ನಲ್ ಕೊಟ್ಟೆ. ನಾನು ಈವರೆಗೂ ಮಾಡಿರದ ಪಾತ್ರ ಇದು. ಈಗಾಗಲೇ ನನ್ನ ಲುಕ್ ಅಭಿಮಾನಿಗಳಿಗೆ ಇಷ್ಟ ಆಗಿದೆ. ಶ್ರೀನಿ ಅವರ ನಿರ್ದೇಶನ ಶೈಲಿ ಹಾಗೂ ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಸೇರಿ ಎಲ್ಲವೂ ಚೆನ್ನಾಗಿದೆ. ಘೋಸ್ಟ್ ಪಾರ್ಟ್ 2 ಕೂಡ ಬರಲಿದೆ. ಈ ಚಿತ್ರದಲ್ಲಿ ಅನುಪಮ್ ಖೇರ್, ಜಯರಾಮ್, ಸತ್ಯಪ್ರಕಾಶ್ ಅವರ ಜೊತೆ ಅಭಿನಯಿಸಿದ್ದು ಖಷಿಯಾಗಿದೆ. ಬಹು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರದ ಪ್ರಚಾರಕ್ಕಾಗಿ ಬೇರೆ-ಬೇರೆ ಊರುಗಳಿಗೆ ತೆರಳುತ್ತಿದ್ದೇನೆ. ಅಲ್ಲಿನ ಜನರು ಕೂಡ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದು ತಿಳಿಸಿದರು.
ಬಳಿಕ ನಿರ್ದೇಶಕ ಶ್ರೀನಿ ಮಾತನಾಡಿ, ಈ ಚಿತ್ರದ ಮುಕ್ಕಾಲು ಭಾಗ ಕಥೆ ಜೈಲಿನಲ್ಲೇ ನಡೆಯುತ್ತದೆ. ನಿರ್ಮಾಪಕರು ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರಿಂದಲೇ ಇಂಥದ್ದೊಂದು ಚಿತ್ರ ಮಾಡುವುದಕ್ಕೆ ಸಾಧ್ಯವಾಯಿತು. ಈ ವಾರ ನಾಲ್ಕು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ವಾರ ತೆಲುಗಿನಲ್ಲಿ ಎರಡು ದೊಡ್ಡ ಚಿತ್ರಗಳು ಬಿಡುಗಡೆ ಆಗುತ್ತಿರುವುದರಿಂದ ಮುಂದಿನ ವಾರ ಅಲ್ಲಿ ಬಿಡುಗಡೆ ಆಗಲಿದೆ. ಇದಲ್ಲದೇ ಅಮೆರಿಕ, ಕೆನಡಾ ಸೇರಿದಂತೆ ಮೊದಲಾದ ಕಡೆಗಳಲ್ಲಿ ಏಕಕಾಲಕ್ಕೆ ಚಿತ್ರ ಬಿಡುಗಡೆ ಆಗುತ್ತಿದೆ ಎಂದು ಮಾಹಿತಿ ಹಂಚಿಕೊಂಡರು.
ಈ ಚಿತ್ರ ಆಗಲು ಪ್ರಮುಖ ಕಾರಣ ಶಿವಣ್ಣ ಹಾಗೂ ಶ್ರೀನಿ ಎನ್ನುತ್ತಾರೆ ನಿರ್ಮಾಪಕ ಸಂದೇಶ್. ಶಿವಣ್ಣ ಬಳಿ ಆಗಲೇ ಏಳೆಂಟು ಚಿತ್ರಗಳಿದ್ದವು. ಆದರೆ, ಘೋಸ್ಟ್ ಕಥೆ ಕೇಳಿ ನಮಗೆ ಮೊದಲ ಆದ್ಯತೆ ಕೊಟ್ಟರು. ಈ ಚಿತ್ರದ ಶೂಟಿಂಗ್ ಹೇಗೆ ಮುಗಿಯಿತೋ ಗೊತ್ತಿಲ್ಲ. ಶಿವಣ್ಣ ಇದಕ್ಕೂ ಮುನ್ನ ನಮ್ಮ ಬ್ಯಾನರ್ನಡಿ ಎರಡು ಚಿತ್ರಗಳಲ್ಲಿ ನಟಿಸಿದ್ದರು. ಎರಡೂ ಚಿತ್ರಗಳು ಹಿಟ್ ಆಗಿದ್ದವು. ಈ ಚಿತ್ರದ ಮೂಲಕ ನಮಗೆ ಹ್ಯಾಟ್ರಿಕ್ ಯಶಸ್ಸು ಸಿಗುವ ನಂಬಿಕೆ ಇದೆ ಅಂತಾರೆ ನಿರ್ಮಾಪಕ ಸಂದೇಶ್.
ಘೋಸ್ಟ್ ಚಿತ್ರದ ಬಿಡುಗಡೆಗೆ ಇನ್ನೊಂದೇ ದಿನ ಬಾಕಿ. ಉತ್ತರ ಭಾರತದಲ್ಲಿ ಹಿಂದಿ ಭಾಷೆಯಲ್ಲಿ, ಕೇರಳ ಹಾಗೂ ತಮಿಳುನಾಡಿನಲ್ಲಿ ತಮಿಳಿನಲ್ಲಿ ಸೇರಿದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಕ್ಟೋಬರ್ 19ರಂದು ಘೋಸ್ಟ್ ಬಿಡುಗಡೆಯಾಗಲಿದೆ. ಆಂಧ್ರ ಹಾಗೂ ತೆಲಂಗಾಣದಲ್ಲಿ ಮಾತ್ರ ಮುಂದಿನ ವಾರ ಚಿತ್ರ ತೆರೆಗೆ ಬರಲಿದೆ. ಅಕ್ಟೋಬರ್ 18ರ ಮಧ್ಯರಾತ್ರಿ ಅಭಿಮಾನಿಗಳಿಗಾಗಿ ವಿಶೇಷ ಪ್ರದರ್ಶನವನ್ನು ಕೂಡ ಏರ್ಪಡಿಸಲಾಗಿದೆ.
ಇದನ್ನೂ ಓದಿ: ನಟಿ ಜಯಪ್ರದಾ ಕೇಸ್: ಕಾರ್ಮಿಕರಿಗೆ ಇಎಸ್‌ಐ ಪಾವತಿಸಿದರೆ ಜೈಲುಶಿಕ್ಷೆ ರದ್ದು- ಮದ್ರಾಸ್ ಹೈಕೋರ್ಟ್
ಟ್ರೇಲರ್ನಿಂದಲೇ ಸಖತ್ ಕ್ರೇಜ್ ಹುಟ್ಟಿಸಿರೋ ಘೋಸ್ಟ್ ಸಿನಿಮಾ ಬಿಡುಗಡೆಗೂ ಮುನ್ನ ಕೋಟಿ ಕೋಟಿ ವ್ಯವಹಾರ ಮಾಡುತ್ತಿದೆ. ಚಿತ್ರದ ಹಿಂದಿ ಸ್ಯಾಟಲೈಟ್ ಹಾಗೂ ಡಿಜಿಟಲ್, ಡಬ್ಬಿಂಗ್ ರೈಟ್ಸ್ ಸೇರಿದಂತೆ ಬರೋಬ್ಬರಿ 15 ಕೋಟಿ ರೂ.ನ ಬ್ಯುಸಿನೆಸ್ ಮಾಡಿದೆ. ನಿರ್ದೇಶಕ ಶ್ರೀನಿ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಂಭಾಷಣೆ ಮಾಸ್ತಿ ಹಾಗೂ ಪ್ರಸನ್ನ ಅವರದ್ದು. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ "ಘೋಸ್ಟ್" ಚಿತ್ರಕ್ಕಿದೆ. ಐದು ಸಾಹಸ ಸನ್ನಿವೇಶಗಳು ಸಿನಿಮಾದಲ್ಲಿದೆ.
ಇದನ್ನೂ ಓದಿ: ಮುಂಜಾನೆ 4 ಗಂಟೆಗೆ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಕೋರಿ ಕೋರ್ಟ್ ಮೊರೆ ಹೋದ 'ಲಿಯೋ' ನಿರ್ಮಾಪಕರು
ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಸೇರಿದಂತೆ ಮುಂತಾದವರು ತಾರಾಬಳಗದಲ್ಲಿದ್ದಾರೆ. ಈಗಾಗಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಹವಾ ಸೃಷ್ಟಿಸಿರೋ ಘೋಸ್ಟ್ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋನ ಆರ್ಭಟ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ..