ಅಜಯ್ ಸರ್ಪೇಷ್ಕರ್ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ಸೈನ್ಸ್ ಫಿಕ್ಷನ್ ಸಿನಿಮಾ ‘ಮಂಡಲ’ ಬೆಳ್ಳಿ ಪರದೆ ಮೇಲೆ ಬರಲು ಸಜ್ಜಾಗಿದೆ. ಈ ಸಿನಿಮಾದಲ್ಲಿ ದೊಡ್ಡ ತಾರಗಣವೇ ಇದ್ದು, ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ಕಿರಣ್ ಶ್ರೀನಿವಾಸ್, ಶರ್ಮಿಳಾ ಮಾಂಡ್ರೆ, ಸಂಯುಕ್ತ ಹೊರನಾಡು ಮುಖ್ಯ ಭೂಮಿಕೆಯಲ್ಲಿರೋ ಮಂಡಲ ಸಖತ್ ಕ್ಯೂರಿಯಾಸಿಟಿ ಹುಟ್ಟಿಸುವ ಟ್ರೇಲರ್ ಬಿಡುಗಡೆ ಮಾಡಿ ಗಮನ ಸೆಳೆದಿದೆ. ಹಾಗೂ ಟ್ರೇಲರ್ ಬಿಡುಗಡೆ ಮುಖಾಂತರ ಚಿತ್ರತಂಡ ಈ ಚಿತ್ರದ ವಿಶೇಷತೆ ಬಗ್ಗೆ ಹಂಚಿಕೊಂಡಿದೆ.
ಈ ವೇಳೆ ನಟ ಕಿರಣ್ ಶ್ರೀನಿವಾಸ್ ಮಾತನಾಡಿ ನಾನು ಬಾಲ್ಯದಿಂದಲೂ ಸೈನ್ಸ್ ಫಿಕ್ಷನ್ ಸಿನಿಮಾಗಳನ್ನು ನೋಡಿ ಬೆಳೆದಿದ್ದೇನೆ. ಅದರಿಂದ ಕನ್ನಡದಲ್ಲಿ ಇಂತಹ ಸಿನಿಮಾ ಬರುತ್ತಿದೆ ಎಂದಾಗ ನಾನು ಯೋಚನೆ ಮಾಡದೆ ಎರಡು ಕೈಯಿಂದ ಅವಕಾಶವನನ್ನು ಬಾಚಿಕೊಂಡೆ ಎಂದರು. ಚಿತ್ರದಲ್ಲಿರುವ ತಾರಾಬಳಗ ಕೂಡ ಈ ಕಾರಣದಿಂದಲೇ ಸಿನಿಮಾ ಒಪ್ಪಿಕೊಳ್ಳಲು ಮತ್ತೊಂದು ಕಾರಣ. ಪ್ರಕಾಶ್ ಬೆಳವಾಡಿ, ಸುಧಾ ಮೇಡಂ ಇವರ ಜೊತೆ ನಟಿಸಲು ನನಗೆ ಒಂದೊಳ್ಳೆ ಅವಕಾಶ ಸಿಕ್ಕಿತ್ತು. ನಾವು ಎಲ್ಲಾ ರೀತಿಯ ಸಿನಿಮಾ ಮಾಡಿದ್ದೇವೆ. ಇದೀಗ ‘ಮಂಡಲ’ ಮೂಲಕ ಸೈನ್ಸ್ ಫಿಕ್ಷನ್ ಸಿನಿಮಾದಲ್ಲಿ ನಟಿಸಿದ್ದೇನೆ. ಸಿನಿಮಾ ಬಹಳ ಡಿಫ್ರೆಂಟ್ ಆಗಿ ಮೂಡಿ ಬಂದಿದೆ ಎಂದು ತಿಳಿಸಿದರು.
ಇನ್ನು, ನಟಿ ಶರ್ಮಿಳಾ ಮಾಂಡ್ರೆ ಈ ಸಿನಿಮಾದ ಕುರಿತು ಮಾತನಾಡಿ, ನಾನು ಜಾಸ್ತಿ ಸೈನ್ಸ್ ಫಿಕ್ಷನ್ ಜಾನರ್ ಸಿನಿಮಾ ನೋಡುತ್ತಿದ್ದೆ, ಕನ್ನಡದಲ್ಲೂ ಈ ರೀತಿಯ ಜಾನರ್ ಸಿನಿಮಾ ಯಾಕೆ ಬರಲ್ಲ ಎಂದು ಯೋಚಿಸುತ್ತಿದ್ದೆ. ಆ ಸಮಯದಲ್ಲಿ ಸಿಕ್ಕ ಸಿನಿಮಾವಿದು. ಸಿನಿಮಾದಲ್ಲಿ ಏರೋಸ್ಪೇಸ್ ಇಂಜಿನಿಯರ್ ಪಾತ್ರದಲ್ಲಿ ಮಾಯಾ ಎಂಬ ಹೆಸರಿನಲ್ಲಿ ನಟಿಸಿದ್ದೇನೆ. ತುಂಬಾ ಸೀರಿಯಸ್ ಪಾತ್ರವಾಗಿದ್ದು, ಕ್ಯಾರೆಕ್ಟರ್ ತುಂಬಾ ಇಷ್ಟವಾಯ್ತು. ಬೇರೆ ಸಿನಿಮಾಗಳಿಗಿಂತ ತುಂಬಾ ಡಿಫ್ರೆಂಟ್ ಪಾತ್ರವಿದು ಎಂದು ಮಾಹಿತಿ ಹಂಚಿಕೊಂಡರು.
ಮಂಡಲ ಸಿನಿಮಾದ ನಿರ್ದೇಶಕ ಅಜಯ್ ಸರ್ಪೇಷ್ಕರ್ ಮಾತನಾಡಿ ಸೈನ್ಸ್ ಫಿಕ್ಷನ್ ಸಿನಿಮಾವಿದು. ಕನ್ನಡಲ್ಲಿ ಸೈನ್ಸ್ ಫಿಕ್ಷನ್ ಸಿನಿಮಾಗಳು ತುಂಬಾನೇ ಕಡಿಮೆ. ಆದರಿಂದ ಈ ರೀತಿಯ ಜಾನರ್ ಸಿನಿಮಾ ಮಾಡಲು ನಿರ್ಧರಿಸಿ ಕಥೆ ಬರೆದೆ ಎಂದು ಹೇಳಿದರು. ಫೋಟೋಗ್ರಫಿಯಲ್ಲಿ ಆಸಕ್ತಿ ಇತ್ತು, ಕಿರುಚಿತ್ರ ನಿರ್ದೇಶನ ಮಾಡಿದ್ದೇನೆ. ಇದರ ಅನುಭವ ಇಟ್ಟುಕೊಂಡು ಮೊದಲ ಬಾರಿ ಇಂಹತ ಸಿನಿಮಾ ನಿರ್ದೇಶನ ಮಾಡಿದ್ದೇನೆ. ವಿಶ್ಯುವಲ್ ಎಫೆಕ್ಟ್ಸ್ ಕೂಡ ತುಂಬಾನೇ ಚೆನ್ನಾಗಿ ಇದ್ದು, ಸಿನಿಮಾ ಒಳ್ಳೆ ರೀತಿಯಲ್ಲಿ ಮೂಡಿ ಬಂದಿದೆ. ಇಡೀ ಕುಟುಂಬ ಸಮೇತ ಕುಳಿತು ನೋಡಬಹುದಾದ ಸಿನಿಮಾವಿದು ಎಂದರು.
ಬಳಿಕ ಈ ಸಿನಿಮಾದಲ್ಲಿ ಖಡಕ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಮ್ಮ ಕನ್ನಡದ ನಟಿ ಸಂಯುಕ್ತ ಹೊರನಾಡು ಅವರು ತಮ್ಮ ಸಿನಿಮಾದಲ್ಲಿನ ಅನುಭದ ಬಗ್ಗೆ ಮಾತನಾಡಿದರು. ಮೊದಲು ನನಗೆ ಈ ಸಿನಿಮಾದ ಕಾನ್ಸೆಪ್ಟ್ ತುಂಬಾ ಕುತೂಹಲ ಎನಿಸಿತು ಅದಕ್ಕಾಗಿ ಸಿಕ್ಕ ಅವಕಾಶವನ್ನು ಒಪ್ಪಿಕೊಂಡೆ ಎಂದರು. ಎಲ್ಲರಿಗೂ ವಿಜ್ಞಾನದ ಬಗ್ಗೆ ತಿಳಿದುಕೊಳ್ಳಲು ಯಾವಾಗಲೂ ಒಂದು ಕುತೂಹಲವಂತು ಇದ್ದೆ ಇರುತ್ತದೆ. ಈ ಸಿನಿಮಾ ಕೂಡ ಪ್ರೇಕ್ಷಕರಲ್ಲಿ ಮುಗಿಯೊವರೆಗೆ ಕುತೂಹಲ ಮೂಡಿಸುತ್ತದೆ ಎಂದು ತಿಳಿಸಿದರು.
ಶರ್ಮಿಳಾ ಮಾಂಡ್ರೆ, ಕಿರಣ್ , ಸಂಯುಕ್ತ ಹೊರನಾಡು ಅಲ್ಲದೇ ಸುಧಾ ಬೆಳವಾಡಿ, ನೀನಾಸಂ ಅಶ್ವಥ್, ಮನ್ ದೀಪ್ ರಾಯ್, ಕಿರಣ್ ನಾಯಕ್, ಸಮನ್ವಿತಾ ಶೆಟ್ಟಿ, ನರೇಶ್ ನರಸಿಂಹನ್ ಒಳಗೊಂಡ ತಾರಾಬಳಗ ಚಿತ್ರದಲ್ಲಿದ್ದಾರೆ. ಸಿನಿಮಾದ ಹಾಡುಗಳಿಗೆ ಜೆಸ್ಸಿ ಕ್ಲಿಂಟನ್ ಸಂಗೀತ ನಿರ್ದೇಶನವಿದ್ದು, ರಾಮಿಶೆಟ್ಟಿ ಪವನ್ ಸಂಕಲನ, ಮನೋಹರ್ ಜೋಶಿ ಛಾಯಾಗ್ರಹಣ, ನಿತಿನ್ ಲುಕೋಸೆ ಅವರ ಅದ್ಬುತವಾದ ಸೌಂಡ್ ಡಿಸೈನ್, ಒಲಿವರ್ ಎಲ್ವಿಸ್ ಹಾಗೂ ಮನೋಜ್ ಬೆಳ್ಳೂರು ವಿಷುಯಲ್ ಎಫೆಕ್ಟ್ಸ್(VFX), ಪ್ರಕಾಶ್ ಬೆಳವಾಡಿ ಹಾಗೂ ಅಜಯ್ ಸರ್ಪೇಷ್ಕರ್ ಚಿತ್ರಕಥೆ 'ಮಂಡಲ' ಸಿನಿಮಾಗಿದೆ. ಸದ್ಯ ಟ್ರೈಲರ್ ನಿಂದಲೇ ಭಾರಿ ಕುತೂಹಲ ಮೂಡಿಸಿರುವ ಮಂಡಲ ಸಿನಿಮಾ ಇದೇ ಮಾರ್ಚ್ 10ರಂದು ತೆರೆ ಮೇಲೆ ಮ್ಯಾಜಿಕ್ ಕ್ರಿಯೇಟ್ ಮಾಡಲು ಸಿದ್ಧವಾಗಿದೆ.
ಇದನ್ನೂ ಓದಿ :'ಮಂಡಲ' ಬಿಡುಗಡೆಗೆ ಮುಹೂರ್ತ ನಿಗದಿ: ಸೈನ್ಸ್-ಫಿಕ್ಷನ್ ಸಿನಿಮಾ ಮೇಲೆ ಸಾಕಷ್ಟು ಕುತೂಹಲ