2023 ಮಗಿಯುವ ಸಮಯ ಬಂದಿದೆ. ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಹೇಳಿಕೊಳ್ಳುವಂತ ಸೂಪರ್ ಹಿಟ್ ಚಿತ್ರಗಳು ಪ್ರೇಕ್ಷಕರನ್ನು ಸೆಳೆಯಲಿಲ್ಲ. ಹೀಗಿದ್ದರೂ ಶುಕ್ರವಾರ ಬಂತೆಂದ್ರೆ ಸಾಕು ಸ್ಯಾಂಡಲ್ವುಡ್ನಲ್ಲಿ ಪೈಪೋಟಿಯಲ್ಲಿ 5 ರಿಂದ 10 ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ವಾರವೂ ಕೂಡ ಹೊಸಬರ 6 ಸಿನಿಮಾಗಳು ಬಿಡುಗಡೆ ಆಗುತ್ತಿವೆ.
ಕಳೆದ ವಾರ ಒಟ್ಟು ಐದು ಚಿತ್ರಗಳು ತೆರೆ ಕಂಡಿದ್ದವು. ಈ ಚಿತ್ರಗಳನ್ನೂ ಸೇರಿಸಿಕೊಂಡರೆ ಈ ವರ್ಷ ಬಿಡುಗಡೆಯಾದ ಚಿತ್ರಗಳ ಸಂಖ್ಯೆ 195. ಈ ವಾರ ಆರು ಚಿತ್ರಗಳು ಬಿಡುಗಡೆಯಾಗುವ ಮೂಲಕ ಪ್ರಸ್ತುತ ವರ್ಷ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆ 200 ದಾಟುತ್ತಿದೆ.
ಕಳೆದ ವಾರ ಅಭಿಷೇಕ್ ಅಂಬರೀಷ್ ಅಭಿನಯದ ಬ್ಯಾಡ್ ಮ್ಯಾನರ್ಸ್, ರಾಜ್ ಬಿ.ಶೆಟ್ಟಿ ನಟನೆಯ ಸ್ವಾತಿ ಮುತ್ತಿನ ಮಳೆ ಹನಿಯೇ ಹಾಗು ಡಾರ್ಲಿಂಗ್ ಕೃಷ್ಣ ಅಭಿನಯದ ಶುಗರ್ ಫ್ಯಾಕ್ಟರಿ ಮತ್ತು ಎಲೆಕ್ಟ್ರಾನಿಕ್ ಸಿಟಿ ಹಾಗು ಸ್ಕೂಲ್ ಡೇಸ್ ಚಿತ್ರಗಳು ರಿಲೀಸ್ ಆಗಿದ್ದವು. ಈ ಪೈಕಿ ಕೊನೆಯ ಎರಡು ಚಿತ್ರಗಳು ಹೆಚ್ಚು ಸದ್ದು ಮಾಡಲಿಲ್ಲ.
ಇನ್ನುಳಿದಂತೆ, ದುನಿಯಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಮಾಸ್ ಆಗಿತ್ತು. ಸಿನಿಮಾ ನೋಡಿದ ಪ್ರೇಕ್ಷಕರು ಟಗರು ಮತ್ತು ಪಾಪ್‍ಕಾರ್ನ್ ಮಂಕಿ ಟೈಗರ್ ಸಿನಿಮಾಗಳ ಮಾದರಿಯಲ್ಲೇ ಇವೆ ಎಂದು ಹೇಳಿದ್ದರು. ಚಿತ್ರವು ಮೂರು ದಿನಗಳಲ್ಲಿ 6.4 ಕೋಟಿ ರೂ ಗಳಿಸಿದೆ ಎಂದು ಸುದ್ದಿಯಾದರೂ, ಈ ಬಗ್ಗೆ ಬಹಳಷ್ಟು ಚರ್ಚೆಗಳಾದವು. ಅದೊಂದು ಎವರೇಜ್ ಚಿತ್ರ, ಅಷ್ಟೊಂದು ಗಳಿಕೆ ಸಾಧ್ಯವೇ ಇಲ್ಲ ಎಂದು ಗಾಂಧಿನಗರದ ಸಿನಿಮಾ ಪಂಡಿತರು ಹೇಳಿದ್ದರು.
ಡಾರ್ಲಿಂಗ್ ಕೃಷ್ಣ ಅವರ ಶುಗರ್ ಫ್ಯಾಕ್ಟರಿ ಹಾಗು ಸ್ವಾತಿ ಮುತ್ತಿನ ಮಳೆ ಹನಿಯೇ ಬಗ್ಗೆ ಪ್ರೇಕ್ಷಕರ ಅಭಿಪ್ರಾಯ ಚೆನ್ನಾಗಿತ್ತಾದರೂ, ಬಾಕ್ಸ್ ಆಫೀಸ್‍ನಲ್ಲಿ ಸುದ್ದಿ ಮಾಡಲಿಲ್ಲ. ಹೀಗಿರುವಾಗಲೇ, ಈ ವಾರ ಪ್ರಭು ಮುಂಡ್ಕೂರ್ ಅಭಿನಯದ ರಾಂಚಿ, ಅರವಿಂದ್ ಕೆ.ಪಿ. ಮತ್ತು ದಿವ್ಯಾ ಉರುಡುಗ ಅಭಿನಯದ ಅರ್ಧಂಬರ್ಧ ಪ್ರೇಮಕಥೆ, ಅರ್ಜುನ್ ಯೋಗಿ ಅಭಿನಯದ ಅನಾವರಣ, ದತ್ತಣ್ಣ, ಗೋಪಾಲಕೃಷ್ಣ ದೇಶಪಾಂಡೆ ನಟಿಸಿರುವ ಯಥಾಭವ, ಹೊಸಬರ ಗಾರುಡಿಗ ಮತ್ತು ಶೋಷಿತೆ ಎಂಬ ಚಿತ್ರಗಳು ರಿಲೀಸ್ ಆಗುತ್ತಿವೆ.
ಈ ಚಿತ್ರಗಳಲ್ಲಿ ಅರವಿಂದ್ ಕೆ.ಪಿ. ಮತ್ತು ದಿವ್ಯಾ ಉರುಡುಗ ಅಭಿನಯದ ಅರ್ಧಂಬರ್ಧ ಪ್ರೇಮಕಥೆ ಸಿನಿಮಾ ಗಾಂಧಿನಗರದಲ್ಲಿ ಒಂದು ಮಟ್ಟಿಗೆ ಸದ್ದು ಮಾಡುತ್ತಿದೆ. ಯಾಕೆಂದರೆ ಅರವಿಂದ್ ಕೌಶಿಕ್ ನಿರ್ದೇಶನವಿರುವ ಈ ಚಿತ್ರ ಟ್ರೇಲರ್ ವಿಚಾರವಾಗಿ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: ರೆಡ್ ಕಾರ್ಪೆಟ್ ಗಾಲಾ ಪ್ರೀಮಿಯರ್ನಲ್ಲಿ ವಿಜಯ ರಾಘವೇಂದ್ರ ಗ್ರೇ ಗೇಮ್ಸ್ ಪ್ರದರ್ಶನ