ಇಂದು ರಾಜ್ಯಾದ್ಯಂತ ನಾಲ್ಕು ಕನ್ನಡ ಸಿನಿಮಾಗಳು ತೆರೆ ಕಾಣುತ್ತಿವೆ. ನಟ ಸೋನು ಸೂದ್ ಅಭಿನಯದ ‘ಶ್ರೀಮಂತ’ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತ ‘ಡೇರ್ ಡೆವಿಲ್ ಮುಸ್ತಾಫಾ’ ಮತ್ತು ಹಾಕಿ ಕ್ರೀಡೆಯ ಕುರಿತಾದ 'ಜರ್ಸಿ ನಂಬರ್ 10' ಸಿನಿಮಾ ಮತ್ತು ಧರ್ಮ ಕೀರ್ತಿ ಅಭಿನಯದ 'ಸುಮನ್' ಚಿತ್ರಗಳು ತೆರೆಗೆ ಬರುತ್ತಿವೆ.
ಶ್ರೀಮಂತ ಸಿನಿಮಾ ಬಗ್ಗೆ..: ರಮೇಶ್ ಹಾಸನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಶ್ರೀಮಂತ ಸಿನಿಮಾವು ಕಳೆದ ಏಪ್ರಿಲ್ ತಿಂಗಳಿನಲ್ಲಿ ತೆರೆಗೆ ಬರಬೇಕಿತ್ತು. ಆದ್ರೆ, ಹಿರಿಯ ರಾಜಕಾರಣಿಗಳಾದ ಹೆಚ್.ಡಿ.ದೇವೇಗೌಡ, ಬಿ.ಎಸ್.ಯಡಿಯೂರಪ್ಪ, ಬಸವರಾಜ್ ಹೊರಟ್ಟಿ, ಈಶ್ವರ ಖಂಡ್ರೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಚಿತ್ರ ಬಿಡುಗಡೆಗೆ ರಾಜ್ಯ ವಿಧಾನಸಭೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿತ್ತು. ಚಿತ್ರದಲ್ಲಿ ರೈತನೇ ನಿಜವಾದ ಶ್ರೀಮಂತ ಎಂಬ ಆಶಯ ಹೊಂದಲಾಗಿದ್ದು, ಹಳ್ಳಿಯ ಬದುಕನ್ನು ಚಿತ್ರಿಸಲಾಗಿದೆ. ನಟ ಕ್ರಾಂತಿ, ನಟಿ ಕಲ್ಯಾಣಿ, ವೈಷ್ಣವಿ ಚಂದ್ರನ್ ಮೆನನ್, ರಮೇಶ್ ಭಟ್, ರಾಜು ತಾಳಿಕೋಟೆ, ರವಿಶಂಕರ್ ಗೌಡ, ಚರಣ್ ರಾಜ್, ಸಾಧು ಕೋಕಿಲ, ಗಿರಿ ಸೇರಿದಂತೆ ಇನ್ನೂ ಹಲವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಹಂಸಲೇಖ ಸಂಗೀತ ಮತ್ತು ಸಾಹಿತ್ಯವಿದೆ. ರವಿಕುಮಾರ್ ಅವರ ಛಾಯಾಗ್ರಹಣ ಮತ್ತು ಕೆ.ಎಂ.ಪ್ರಕಾಶ್ ಸಂಕಲನವಿದೆ.
- " class="align-text-top noRightClick twitterSection" data="">
ಡೇರ್ ಡೆವಿಲ್ ಮುಸ್ತಾಫಾ : ಖ್ಯಾತ ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತ ಚಿತ್ರ ‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾ ಕೂಡ ಇಂದು ಬಿಡುಗಡೆಯಾಗುತ್ತಿದೆ. ಶಶಾಂಕ್ ಸೋಗಲ್ ಚಿತ್ರದ ನಿರ್ದೇಶಕರಾಗಿದ್ದು, ರಾಹುಲ್ ರಾಯ್ ಛಾಯಾಗ್ರಹಣ, ನವನೀತ್ ಶ್ಯಾಮ್ ಸಂಗೀತವಿದೆ. ಹಾಗೆಯೇ, ಎಂ.ಎಸ್.ಉಮೇಶ್, ಮಂಡ್ಯ ರಮೇಶ್, ಮೈಸೂರ್ ಆನಂದ್, ಸುಂದರ್ ವೀಣಾ, ನಾಗಭೂಷಣ್, ಪೂರ್ಣಚಂದ್ರ ಮೈಸೂರು ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ : 'ಡೇರ್ ಡೆವಿಲ್ ಮುಸ್ತಾಫಾ'ಗೆ ಡಾಲಿ ಸಾಥ್: ಮೇ. 19ಕ್ಕೆ ಚಿತ್ರ ತೆರೆಗೆ
ಜರ್ಸಿ ನಂಬರ್ 10 : ಈ ಚಿತ್ರವು ಹಾಕಿ ಮತ್ತು ಪ್ರೇಮಕಥೆಯ ಮಿಶ್ರಣ ಹೊಂದಿದೆ. ಇದು ರಾಜ್ಯ ಮಟ್ಟದ ಹಾಕಿ ಆಟಗಾರ ಆದ್ಯ ತಿಮ್ಮಯ್ಯ ಅವರ ಕಲ್ಪನೆಯ ಕೂಸು. ಕಥೆ ಮಾತ್ರವಲ್ಲದೇ, ಅವರು ಚಿತ್ರದ ನಾಯಕರಾಗಿಯೂ ನಟಿಸಿದ್ದಾರೆ. ಜರ್ಸಿ ನಂಬರ್ 10 ಸಿನಿಮಾವನ್ನು ಆದ್ಯ ತಿಮ್ಮಯ್ಯ, ಲಾಲು ತಿಮ್ಮಯ್ಯ ಮತ್ತು ರಾಶಿನ್ ಸುಬ್ಬಯ್ಯ ಜಂಟಿಯಾಗಿ ನಿರ್ಮಿಸಿದ್ದಾರೆ. ಸಿನಿಮಾವು ಮೂರು ವಿಭಿನ್ನ ವಯಸ್ಸಿನ ಪ್ರೇಮಕಥೆಯತ್ತ ಸುತ್ತ ಸುತ್ತುತ್ತದೆ. ಚಿತ್ರದಲ್ಲಿ ಹಿರಿಯ ನಟ ದತ್ತಣ್ಣ, ಚಂದನ್ ಮಂಜುನಾಥ್, ಮಂಡ್ಯ ರಮೇಶ್, ಚಂದನ್ ಆಚಾರ್, ಟೆನ್ನಿಸ್ ಕೃಷ್ಣ ಮೊದಲಾದವರು ತೆರೆ ಹಂಚಿಕೊಂಡಿದ್ದು, ಜುಬಿನ್ ಪೌಲ್ ಸಂಗೀತ ಸಂಯೋಜಿಸಿದ್ದಾರೆ. ಹಾಗೆಯೇ, ಉದಯ್ ಬಲ್ಲಾಳ್ ಅವರ ಛಾಯಾಗ್ರಹಣ ಮತ್ತು ಸುರೇಶ್ ಅರಸ್ ಸಂಕಲನವಿದೆ.
ಸುಮನ್ ಚಿತ್ರ : ಧರ್ಮ ಕೀರ್ತಿ ನಟನೆಯ ಸುಮನ್ ಸಿನಿಮಾ ಕೂಡ ಇಂದು ಬಿಡುಗಡೆಯಾಲಿದೆ. ಚಿತ್ರವನ್ನು ರವಿ ಸಾಗರ್ ನಿರ್ದೇಶಿಸಿದ್ದು, ಪಕ್ಕಾ ಮಾಸ್ ಮತ್ತು ಕಮರ್ಷಿಯಲ್ ಸಿನಿಮಾ ಇದಾಗಿದೆ. ನಿಮಿತ ರತ್ನಾಕರ್, ರಜನಿ ಭಾರದ್ವಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.