ಕಿಚ್ಚ ಸುದೀಪ್‌ಗಿಂದು 49ನೇ ಹುಟ್ಟುಹಬ್ಬದ ಸಂಭ್ರಮ: ಒಡಿಶಾ ಕಡಲ ತೀರದಲ್ಲಿ ಮರಳು ಶಿಲ್ಪ ಗೌರವ - Sudeep films
ಸಿನಿಮಾ ಕ್ಷೇತ್ರದ ವಿಶೇಷ ಸಾಧಕ, ಅಭಿನಯ ಚಕ್ರವರ್ತಿ, ಕಿಚ್ಚ, ಬಾದ್ ಷಾ, ಹೆಬ್ಬುಲಿ, ಪೈಲ್ವಾನ್.. ಹೀಗೆ ಹಲವು ಹೆಸರುಗಳಿಂದ ಕರೆಯಲ್ಪಡುವ ಸುದೀಪ್ ಅವರಿಗಿಂದು ಇಂದು 49ನೇ ಹುಟ್ಟುಹಬ್ಬದ ಸಂಭ್ರಮ.
ಕನ್ನಡ ಚಿತ್ರರಂಗ ಮಾತ್ರವಲ್ಲ, ಇಡೀ ಭಾರತೀಯ ಸಿನಿಮಾ ರಂಗದಲ್ಲೇ ವಿಶೇಷ ಛಾಪು ಮೂಡಿಸಿರುವವರು ನಟ ಕಿಚ್ಚ ಸುದೀಪ್. ಇಂದು ಅವರಿಗೆ 49ನೇ ಹುಟ್ಟುಹಬ್ಬದ ಸಂಭ್ರಮ. ಅಡುಗೆ, ಸಿನಿಮಾ, ಡೈರೆಕ್ಷನ್, ಆ್ಯಕ್ಟಿಂಗ್, ಸ್ಪೋರ್ಟ್ಸ್, ಸಮಾಜಸೇವೆ.. ಹೀಗೆ ಹಲವು ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಸುದೀಪ್.
ಮರಳುಶಿಲ್ಪದ ಮೂಲಕ ಶುಭಾಶಯ: ಕೋವಿಡ್ ಹಿನ್ನೆಲೆಯಲ್ಲಿ ಸೆಲೆಬ್ರಿಟಿಗಳು ಅಭಿಮಾನಿಗಳ ಜೊತೆ ಸುದೀಪ್ ಕಳೆದ ಎರಡು ವರ್ಷಗಳಿಂದ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಈ ವರ್ಷ ಕೊರೊನಾ ತಗ್ಗಿದೆ. ಅಭಿಮಾನಿಗಳ ಜೊತೆ ತಮ್ಮ ಹುಟ್ಟುಹಬ್ಬ ಆಚರಿಸುವ ಉತ್ಸಾಹ ತೋರಿದ್ದಾರೆ. ಹುಟ್ಟುಹಬ್ಬದ ಸಂಭ್ರಮವನ್ನು ದುಪ್ಪಟ್ಟುಗೊಳಿಸಲು ಹೆಸರಾಂತ ಮರಳು ಶಿಲ್ಪಿ ಮಾನಸ್ ಕುಮಾರ್ ಅವರು ಒಡಿಶಾದ ಸಮುದ್ರ ತೀರದಲ್ಲಿ ಸುದೀಪ್ ಅವರಿಗೆ ಮರಳು ಶಿಲ್ಪ ನಿರ್ಮಿಸುವ ಮೂಲಕ ಶುಭ ಕೋರಿದ್ದಾರೆ.
ಈ ಶಿಲ್ಪ 20 ಅಡಿ ಅಗಲ, 7 ಅಡಿ ಎತ್ತರವಿದೆ. ಸುಮಾರು 20 ಟನ್ ಮರಳು ಬಳಸಲಾಗಿದೆ. ಸುದೀಪ್ ಆಪ್ತರಾದ ವೀರಕಪುತ್ರ ಶ್ರೀನಿವಾಸ ಎಂಬುವರರು ಯಾವ ಫೋಟೋ ಬಳಸಬೇಕು ಮತ್ತು ಕನ್ನಡ ಬರವಣಿಗೆ ಹೇಗಿರಬೇಕು ಎಂಬ ಬಗ್ಗೆ ಅಗತ್ಯ ಮಾಹಿತಿಯನ್ನು ಇವರಿಗೆ ಒದಗಿಸಿದ್ದಾರೆ.
ಈ ಮೂಲಕ ದಕ್ಷಿಣ ಭಾರತದಲ್ಲಿ ಮರಳು ಶಿಲ್ಪ ಗೌರವಕ್ಕೆ ಪಾತ್ರವಾಗುತ್ತಿರುವ 2ನೇ ಕಲಾವಿದರಾಗಿ ಹೊರಹೊಮ್ಮಿದ ಕೀರ್ತಿ ಸುದೀಪ್ ಅವರದ್ದು. ಈ ಹಿಂದೆ 2020ರಲ್ಲಿ ಡಾ.ವಿಷ್ಣುವರ್ಧನ್ ಅವರ 70ನೇ ಜನ್ಮದಿನ ಪ್ರಯುಕ್ತ ಮರಳು ಶಿಲ್ಪದ ಗೌರವ ನೀಡಲಾಗಿತ್ತು. ಅದು ಬಿಟ್ಟರೆ ಈವರೆಗೆ ಯಾವುದೇ ದಕ್ಷಿಣ ಭಾರತದ ನಟರಿಗೆ ಈ ಗೌರವ ಸಿಕ್ಕಿಲ್ಲ.
ನಟ ಸುದೀಪ್ ಬದುಕಿನ ಪರಿಚಯ: 1973ರಲ್ಲಿ ಸೆಪ್ಟೆಂಬರ್ 2ರಂದು ಶಿವಮೊಗ್ಗದಲ್ಲಿ ಸಂಜೀವ್ ಮಂಜಪ್ಪ ಹಾಗೂ ಸರೋಜ ದಂಪತಿಯ ಪುತ್ರನಾಗಿ ಸುದೀಪ್ ಜನಿಸಿದರು. ಕನ್ನಡ, ಹಿಂದಿ, ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ್ದಾರೆ. ಚಿತ್ರರಂಗದಲ್ಲಿ ಸಾಕಷ್ಟು ಏಳು-ಬೀಳುಗಳನ್ನೂ ಕಂಡು ಸಾಧನೆಯ ಶಿಖರವನ್ನೇರಿದ್ದಾರೆ.
ಸಿನಿಮಾ ರಂಗ ಪ್ರವೇಶ: ಸುದೀಪ್ ಮೊದಲು ಬಣ್ಣ ಹಚ್ಚಿದ್ದು ಬ್ರಹ್ಮ ಚಿತ್ರಕ್ಕಾದರೂ ಈ ಸಿನಿಮಾ ಪೂರ್ತಿಯಾಗಿರಲಿಲ್ಲ. ನಂತರ 1997ರಲ್ಲಿ ತಾಯವ್ವ, ಪ್ರತ್ಯರ್ಥ ಸಿನಿಮಾ ಮಾಡಿದ್ದೂ ಯಶಸ್ವಿಯಾಗಲಿಲ್ಲ. ಆ ಸಮಯದಲ್ಲಿ ಅವರಿಗೆ ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಸ್ಪರ್ಶ ಸ್ವಲ್ಪಮಟ್ಟಿಗೆ ಹೆಸರು ನೀಡುತ್ತದೆ.
ಸುದೀಪ್ ತಂದೆ ಸಂಜೀವ್ ಸರೋವರ್ 1999ರಲ್ಲಿ ಸುಮಾರು ಒಂದೂವರೆ ಕೋಟಿ ರೂಪಾಯಿ ಬಜೆಟ್ನಲ್ಲಿ ಈ ಚಿತ್ರ ನಿರ್ಮಿಸಿದ್ದರು. ಕ್ಯೂಟ್ ಲವ್ ಸ್ಟೋರಿ ಜೊತೆ ಸುಂದರ ಹಾಡುಗಳು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿತ್ತು. ಸುದೀಪ್ ಮತ್ತು ರೇಖಾ ಕೆಮಿಸ್ಟ್ರಿ ವರ್ಕ್ ಔಟ್ ಆಗಿ ಸಿನಿಮಾ ಸಕ್ಸಸ್ ಆಯಿತು. ಆ ಕಾಲದಲ್ಲಿ ಸ್ಪರ್ಶ ಸುಮಾರು 4 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಕಿಚ್ಚನಿಗೆ ಸ್ಟಾರ್ ಪಟ್ಟ ತಂದು ಕೊಟ್ಟಿತು. ಅಲ್ಲಿಂದ ಕಿಚ್ಚನ ಸಿನಿಮಾ ಭವಿಷ್ಯ ಆರಂಭವಾಯಿತು.
ಓಂ ಪ್ರಕಾಶ್ ರಾವ್ ನಿರ್ದೇಶನದ ಹುಚ್ಚ ಸಿನಿಮಾ ಸುದೀಪ್ ಅವರನ್ನು ಸ್ಟಾರ್ ಹೀರೋ ಮಾಡಿತು. 2001ರಲ್ಲಿ ತೆರೆಕಂಡ ಸಿನಿಮಾವನ್ನು ರೆಹಮಾನ್ ಎಂಬ ನಿರ್ದೇಶಕ ಸುಮಾರು 2 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಿಸಿದ್ದರು. ಈ ಮೂಲಕ ಸುದೀಪ್ ಓರ್ವ ಅದ್ಭುತ ನಟ ಎಂಬ ಪರಿಚಯವಾಯಿತು. ಸಿನಿಮಾ 5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು.
ಇದನ್ನೂ ಓದಿ: ಅಭಿನಯ ಚಕ್ರವರ್ತಿ ಸುದೀಪ್ ಜನ್ಮದಿನಕ್ಕೆ ಅಭಿಮಾನಿಗಳಿಗೆ ಗಿಫ್ಟ್ - ಒಟಿಟಿಯಲ್ಲಿ ಪ್ರಸಾರವಾಗಲಿದೆ ವಿಕ್ರಾಂತ್ ರೋಣ ಸಿನಿಮಾ
ಚಂದು, ಧಮ್, ಸ್ವಾತಿಮುತ್ತು ಚಿತ್ರಗಳಲ್ಲಿ ವಿಭಿನ್ನ ಪಾತ್ರ ಮಾಡಿದ್ದ ಸುದೀಪ್ ನಟ ಮಾತ್ರವಲ್ಲ, ನಿರ್ದೇಶಕನಾಗಿ ಕೂಡಾ ಗುರುತಿಸಿಕೊಂಡಿದ್ದು ಮೈ ಆಟೋಗ್ರಾಫ್ ಚಿತ್ರದ ಮೂಲಕ. ಈ ಚಿತ್ರದ ಮೂಲಕ ಆ್ಯಕ್ಟರ್, ಡೈರೆಕ್ಟರ್ ಹಾಗೂ ಪ್ರೊಡ್ಯೂಸರ್ ಆಗಿ ಕೂಡಾ ಗುರುತಿಸಿಕೊಂಡರು. ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಮೂಲಕ ಸುದೀಪ್ ಈ ಚಿತ್ರವನ್ನು ತಾವೇ ನಿರ್ಮಿಸಿದ್ದರು. 2006ರಲ್ಲಿ ಸುಮಾರು 2 ಕೋಟಿ ರೂಪಾಯಿ ಬಜೆಟ್ನಲ್ಲಿ ತಯಾರಾದ ಮೈ ಆಟೋಗ್ರಾಫ್ ಸಿನಿಮಾ, 6 ಕೋಟಿ ರೂಪಾಯಿ ಲಾಭ ಮಾಡಿತು.
ಇದನ್ನೂ ಓದಿ: ಅಭಿನಯ ಚಕ್ರವರ್ತಿ ಸುದೀಪ್ ಸಾಧನೆಗೆ ಗೌರವ.. ಶೀಘ್ರದಲ್ಲೇ ವಿಶೇಷ ಅಂಚೆ ಲಕೋಟೆ ಬಿಡುಗಡೆ
ನಂತರ ಖಾಕಿ ತೊಟ್ಟು ಅಬ್ಬರಿಸಿದ ವೀರ ಮದಕರಿ, ಖಳನಟನಾಗಿ ನಟಿಸಿದ ವಾಲಿ, ಮಾಣಿಕ್ಯ, ರನ್ನ, ಪೈಲ್ವಾನ್ ನಂತಹ ಸಿನಿಮಾಗಳಲ್ಲಿ ಅದ್ಭುತ ನಟನೆ ಮಾಡಿದ ಸುದೀಪ್ ಈಗ ವಿಕ್ರಾಂತ್ ರೋಣ ಸಿನಿಮಾ ಯಶಸ್ಸಿನಲ್ಲಿದ್ದಾರೆ.