ಕನ್ನಡ ಚಿತ್ರರಂಗದಲ್ಲಿ ಜೇಮ್ಸ್, ಕೆಜಿಎಫ್ 2 , ಚಾರ್ಲಿ 777, ವಿಕ್ರಾಂತ್ ರೋಣ ಸಿನಿಮಾಗಳು ಭರ್ಜರಿ ಯಶಸ್ಸು ಕಂಡು ಕನ್ನಡ ಫಿಲ್ಮ್ ಇಂಡಸ್ಟ್ರಿಯನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದೆ. ಇದೀಗ ಗಾಳಿಪಟ 2 ಸಿನಿಮಾ ಹಿಟ್ ಸಿನಿಮಾಗಳ ಸಾಲಿಗೆ ಸೇರ್ಪಡೆ ಆಗುತ್ತಿದೆ. ನಟ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಜೋಡಿ ಮತ್ತೊಮ್ಮೆ ಉತ್ತಮ ಕಾಂಬಿನೇಶನ್ ಅಂತಾ ಪ್ರೂವ್ ಮಾಡಿದೆ.
ಗಾಳಿಪಟ 2 ಸಕ್ಸಸ್: ಆಗಸ್ಟ್ 12ರಂದು ಕರ್ನಾಟಕ ಅಲ್ಲದೇ ವಿಶ್ವಾದ್ಯಂತ ತೆರೆಕಂಡ ಗಾಳಿಪಟ 2 ಸಿನಿಮಾ, ಎಲ್ಲಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುವ ಮೂಲಕ ನಿರ್ಮಾಪಕ ಎಂ ರಮೇಶ್ ರೆಡ್ಡಿ ಅವರ ಜೇಬು ತುಂಬಿಸಿದೆ. ಈ ಸಿನಿಮಾ ಸಕ್ಸಸ್ ಕಂಡಿರುವ ಹಿನ್ನೆಲೆಯಲ್ಲಿ ಗಾಳಿಪಟ 2 ಚಿತ್ರತಂಡ ಖಾಸಗಿ ಹೋಟೆಲ್ನಲ್ಲಿ ಈ ಚಿತ್ರದ ಜರ್ನಿ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದೆ.
ಗಾಳಿಪಟ 2 ಸಿನಿಮಾದಲ್ಲಿ ಗಣೇಶ್ ತಂದೆ ಪಾತ್ರ ಮಾಡಿರುವ ರಂಗಾಯಣ ರಘು ಮಾತನಾಡಿ, ಪ್ಯಾನ್ ಇಂಡಿಯಾ ಸಿನಿಮಾಗಳ ಮಧ್ಯೆ ನಮ್ಮ ಕನ್ನಡದ ಸಿನಿಮಾ ಗಾಳಿಪಟ 2 ಸಕ್ಸಸ್ ಆಗಿರೋದು ನಮ್ಮ ಹೆಮ್ಮೆ. ನಮ್ಮ ನಿರ್ಮಾಪಕರಿಗೆ ಲಾಭ ತಂದುಕೊಟ್ಟಿದೆ. ಈಗಾಗಲೇ ತಮಿಳುನಾಡಿಗೆ ಕಾವೇರಿ ಹರಿದು ಹೋಗುತ್ತಿದೆ. ಮಹಾರಾಷ್ಟ್ರಕ್ಕೆ ಮಹಾದಾಯಿ ಹೋಗುತ್ತಿದೆ. ಹೀಗೆ ಇರಬೇಕಾದ್ರೆ, ಭಟ್ರು, ಗಣೇಶ್ ಸೇರಿ ಮತ್ತೆ ಕನ್ನಡ ಚಿತ್ರರಂಗಕ್ಕೆ ಭರವಸೆಯ ಸಿನಿಮಾ ಕೊಟ್ಟಿದ್ದಾರೆ. ಇದು ಹೊಸಬರಿಗೆ ಹಾಗು ನಮ್ಮ ತಂತ್ರಜ್ಞನರಿಗೆ ಕೆಲಸ ಸಿಗುವಂತೆ ಮಾಡಿದೆ ಎಂದರು.
ಗಾಳಿಪಟ 2 ಚಿತ್ರದಲ್ಲಿ ಕನ್ನಡ ಮೇಷ್ಟ್ರು ಪಾತ್ರ ಮಾಡಿರೋ ಅನಂತ್ ನಾಗ್ ಮಾತನಾಡಿ, ಈ ಸಿನಿಮಾ ಹಿಟ್ ಆಗುತ್ತೆ ಅಂತಾ ನಾನು ಆವಾಗಲೇ ನಿರ್ಮಾಪಕ ರಮೇಶ್ ರೆಡ್ಡಿಗೆ ಹೇಳಿದ್ದೆ. ಈಗ ಯಶಸ್ಸಿನ ದಾರಿಯಲ್ಲಿ ಗಾಳಿಪಟ 2 ಸಿನಿಮಾ ಇದೆ ಎಂದರು.
ನಿರ್ಮಾಪಕ ಎಂ ರಮೇಶ್ ಮಾತನಾಡಿ, ಇದೇ ಮೊದಲ ಬಾರಿಗೆ ನಾನು ಅಂದುಕೊಂಡಂತೆ ಈ ಸಿನಿಮಾ ಆಗಿದೆ ಎಂದು ತಿಳಿಸಿದರು. ಗಾಂಧಿನಗರದ ಸಿನಿಮಾ ಪಂಡಿತರು ಹೇಳುವ ಹಾಗೆ ಒಂದು ವಾರಕ್ಕೆ 20 ಕೋಟಿ ಕಲೆಕ್ಷನ್ ಆಗಿದೆ. ಇದರಲ್ಲಿ ಥಿಯೇಟರ್ ಬಾಡಿಗೆ, ವಿತರಣೆ ವೆಚ್ಚದ ಶೇರ್ ಕಳೆದು ನಿರ್ಮಾಪಕ ಎಂ ರಮೇಶ್ ರೆಡ್ಡಿಗೆ 5 ರಿಂದ 9 ಕೋಟಿ ಲಾಭ ಬರುತ್ತದೆ ಅಂತಾ ಹೇಳಲಾಗುತ್ತಿದೆ. ಹೀಗಾಗಿ ನಿರ್ಮಾಪಕ ಎಂ ರಮೇಶ್ ರೆಡ್ಡಿ ಮುಖದಲ್ಲಿ ಮಂದಹಾಸ ಮೂಡಿದ್ದು, ಅನಂತ್ ನಾಗ್ ಸಾರ್ ಹೇಳಿದ ಮಾತು ನಿಜವಾಯಿತು ಅಂದ್ರು.
ಇದನ್ನೂ ಓದಿ: ಕನ್ನಡತಿ ಖ್ಯಾತಿಯ ಕಿರಣ್ ರಾಜ್ ಅಭಿನಯದ ಶೇರ್ ಸಿನಿಮಾ ಮುಹೂರ್ತ.. ಆ. 22ರಿಂದ ಚಿತ್ರೀಕರಣ
ನಟ ಗಣೇಶ್, ಪವನ್ ಕುಮಾರ್, ನಟಿ ವೈಭವಿ ಶಾಂಡಿಲ್ಯ, ನಿರ್ದೇಶಕ ಯೋಗರಾಜ್ ಭಟ್, ಕ್ಯಾಮರಾಮ್ಯಾನ್ ಸಂತೋಷ್ ರೈ ಪಾತಾಜೇ, ಪದ್ಮಜಾ ರಾವ್ ಸೇರಿದಂತೆ ಇಡೀ ಗಾಳಿಪಟ 2 ಚಿತ್ರತಂಡ ಈ ಚಿತ್ರದ ಹಿಂದೆ ಕೆಲಸ ಮಾಡಿದವರು ಉಪಸ್ಥಿತರಿದ್ದರು.