2023ರ ಬಹುನಿರೀಕ್ಷಿತ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ ಬಿಡುಗಡೆಯಾಗಿ ಥಿಯೇಟರ್ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವು ಭಾನುವಾರದಂದು 19 ಕೋಟಿ ರೂಪಾಯಿ ಗಳಿಸಿದೆ. ಮೊದಲೆರಡು ದಿನಗಳಿಗೆ ಹೋಲಿಸಿದರೆ ಮೂರನೇ ದಿನದ ಕಲೆಕ್ಷನ್ ಹೆಚ್ಚಾಗಿದೆ. ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ ಜುಲೈ 28 ರಂದು (ಶುಕ್ರವಾರ) ತೆರೆಗೆ ಅಪ್ಪಳಿಸಿತ್ತು. ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕ ಕರಣ್ ಜೋಹರ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ ಈ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
Sacnilk.com ಪ್ರಕಾರ, 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ ಬಿಡುಗಡೆಯಾದ ಮೂರನೇ ದಿನ ಭಾರತದಲ್ಲಿ 19 ಕೋಟಿ ರೂಪಾಯಿ ಸಂಗ್ರಹಿಸಿದೆ. ಮೊದಲ ದಿನ 11.1 ಕೋಟಿ ರೂ. ಮತ್ತು ಎರಡನೇ ದಿನ 16.05 ಕೋಟಿ ರೂ. ಗಳಿಸಿತ್ತು. ಇದೀಗ ಈ ಸಿನಿಮಾ ಮೂರೇ ದಿನದಲ್ಲಿ ಒಟ್ಟು 46 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಾರಾಂತ್ಯದ ಎರಡೂ ದಿನವೂ ಥಿಯೇಟರ್ನಲ್ಲಿ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರ ಧೂಳೆಬ್ಬಿಸಿದೆ.
ಸಿನಿಮಾ ನಿರ್ಮಾಣ ಮಾಡಿರುವ 'ಧರ್ಮ ಪ್ರೊಡಕ್ಷನ್ಸ್' ಸಾಮಾಜಿಕ ಮಾಧ್ಯಮದಲ್ಲಿ ಬಾಕ್ಸ್ ಆಫೀಸ್ ವಿಚಾರವಾಗಿ ಸಂತಸ ಹಂಚಿಕೊಂಡಿದೆ. "ಬಾಕ್ಸ್ ಆಫೀಸ್ನಲ್ಲಿ ಪ್ರೀತಿಯ ಆಚರಣೆಗಳು ದೊಡ್ಡದಾಗುತ್ತಿವೆ ಮತ್ತು ಜೋರಾಗುತ್ತಿವೆ. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಗಾಗಿ ನಿಮ್ಮ ಪ್ರೀತಿ ತಡೆಯಲಾಗದು" ಎಂದು ಪೋಸ್ಟ್ ಹಂಚಿಕೊಂಡಿದೆ.
ಇದನ್ನೂ ಓದಿ: ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ: ಮೊದಲ ದಿನ 10 ಕೋಟಿ ರೂ. ಕಲೆಕ್ಷನ್ ಸಾಧ್ಯತೆ!
ಚಿತ್ರತಂಡ ಹೀಗಿದೆ.. ಕರಣ್ ಜೋಹರ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿದ್ದಾರೆ. ಧರ್ಮೇಂದ್ರ, ಜಯಾ ಬಚ್ಚನ್, ಶಬಾನಾ ಅಜ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಾರಾ ಅಲಿ ಖಾನ್ ಮತ್ತು ಅನನ್ಯಾ ಪಾಂಡೆ ವಿಶೇಷ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಕಥೆ ಸಂಪೂರ್ಣವಾಗಿ ವಿಭಿನ್ನ ಹಿನ್ನೆಲೆ ಮತ್ತು ಸಂಸ್ಕೃತಿಯಿಂದ ಬಂದ ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ಜೋಡಿ ಸುತ್ತ ಸುತ್ತುತ್ತದೆ. ಈ ಜೋಡಿಯ ಪ್ರೇಮಕಥೆಯೇ ಚಿತ್ರದ ಕೇಂದ್ರಬಿಂದು. ಅವರ ವಿಭಿನ್ನ ಆಚರಣೆಗಳು, ಜೀವನ ಶೈಲಿಯಿಂದಾಗಿ ಉದ್ಭವಿಸುವ ಸವಾಲುಗಳು ಮತ್ತು ಸಂತೋಷಕರ ಕ್ಷಣಗಳನ್ನು ಈ ಸಿನಿಮಾ ಹೇಳುತ್ತದೆ.
ಕರಣ್ ಜೋಹರ್ 2016 ರಲ್ಲಿ ಕೊನೆಯದಾಗಿ 'ಏ ದಿಲ್ ಹೈ ಮುಷ್ಕಿಲ್' ಸಿನಿಮಾ ನಿರ್ದೇಶಿಸಿದ್ದರು. ಏಳು ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿದ್ದು, ಕಥೆ ಮತ್ತು ನಿರ್ದೇಶನ ಶೈಲಿಯನ್ನು ಪ್ರೇಕ್ಷಕರು ಮತ್ತು ವಿಮರ್ಶಕರು ಮೆಚ್ಚಿದ್ದಾರೆ.
ಇದನ್ನೂ ಓದಿ: RARKPK Release: ವಿಶ್ವಾದ್ಯಂತ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ರಿಲೀಸ್: ಪ್ರೇಕ್ಷಕರೇನಂದ್ರು ಗೊತ್ತಾ?