ಕಳೆದ ಸೆಪ್ಟೆಂಬರ್ನಲ್ಲಿ ಸಾಮಾನ್ಯ ಚಿತ್ರವಾಗಿ ತೆರೆಕಂಡ 'ಕಾಂತಾರ' ಅಭೂತಪೂರ್ವ ಯಶಸ್ಸು ಸಾಧಿಸಿದೆ. ಸುಮಾರು 15 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಂಪಾದಿಸಿದ್ದು 450 ಕೋಟಿ ರೂ.ಗೂ ಹೆಚ್ಚು. ಚಿತ್ರತಂಡದ ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿದೆ. ಇದೀಗ ಸೂಪರ್ ಹಿಟ್ ಕಾಂತಾರದ ಮತ್ತೊಂದು ಭಾಗ ತಯಾರಾಗುತ್ತಿದೆ. ಆದರೆ ಈ ಸಿನಿಮಾ ಸೀಕ್ವೆಲ್ ಅಲ್ಲ 'ಕಾಂತಾರ'ದ ಮೊದಲ ಭಾಗ ಪ್ರೀಕ್ವೆಲ್ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಈಗಾಗಲೇ ಘೋಷಿಸಿದ್ದಾರೆ.
ಕುದುರೆ ಸವಾರಿ ತರಬೇತಿ: ಈ ಮಧ್ಯೆ ಕಾಂತಾರ 2ಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಚಿತ್ರಕ್ಕಾಗಿ ನಿರ್ದೇಶಕ, ನಟ ರಿಷಬ್ ಶೆಟ್ಟಿ ಕುದುರೆ ಸವಾರಿ ತರಬೇತಿ ತೆಗೆದುಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇದು ಈ ಚಿತ್ರದ ಮೇಲಿನ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದೆ.
ಭೂತಾರಾಧನೆಯುಳ್ಳ ಕಾಂತಾರ 2 ಶೂಟಿಂಗ್ : ಆಗಸ್ಟ್ 27ರಿಂದ ಕಾಂತಾರ 2 ಸಿನಿಮಾದ ಶೂಟಿಂಗ್ ಶುರುವಾಗಲಿದೆ ಎನ್ನುವ ಮಾಹಿತಿ ಇದೆ. ಸದ್ಯ ಸ್ಕ್ರಿಪ್ಟಿಂಗ್ ಕೆಲಸ ಮುಂದುವರಿದಿದೆ. ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ ಕಾಂತಾರ ಭಾಗ 1 ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು. ಆದರೆ ಚಿತ್ರದ ಮತ್ತೊಂದು ಭಾಗಕ್ಕೆ ಭಾರಿ ಬಜೆಟ್ ಮೀಸಲಿಡಲಾಗಿದೆ ಎನ್ನುವ ಮಾಹಿತಿ ಇದೆ. ಅಲ್ಲದೇ ಭೂತಾರಾಧನೆಯನ್ನು ಸಿನಿಮಾದಲ್ಲಿ ಇನ್ನಷ್ಟು ಆಳವಾಗಿ ತೋರಿಸಲಾಗುವುದು. ಮುಂದಿನ ವರ್ಷ ಸಿನಿಮಾವನ್ನು ಪ್ರೇಕ್ಷಕರ ಮುಂದಿಡುವ ಯೋಚನೆ ಚಿತ್ರತಂಡದ್ದು.
ನಿರ್ದೇಶಕ, ನಟ ರಿಷಬ್ ಶೆಟ್ಟಿ ಈ ಹಿಂದೆ ಸಂದರ್ಶನವೊಂದರಲ್ಲಿ 'ಕಾಂತಾರ-2' ಚಿತ್ರಕ್ಕೆ ಸಂಬಂಧಿಸಿದ ಕೆಲ ವಿಷಯಗಳನ್ನು ಹಂಚಿಕೊಂಡಿದ್ದರು. ನಿಸರ್ಗದ ಹಿನ್ನೆಲೆಯಲ್ಲಿ ಚಿತ್ರೀಕರಣಗೊಂಡ ಮೊದಲ ಭಾಗದ ಕಥೆ ಎಲ್ಲಿ, ಹೇಗೆ ಆರಂಭವಾಯಿತು ಎಂದು 'ಕಾಂತಾರ' ಪ್ರೀಕ್ವೆಲ್ನಲ್ಲಿ ತೋರಿಸಲಾಗುವುದು ಎಂದು ತಿಳಿಸಿದ್ದರು. ಇನ್ನೂ ಚಿತ್ರದಲ್ಲಿ ಕರಾವಳಿ ಜನತೆ ಅಪಾರ ನಂಬಿಕೆ ಇಟ್ಟಿರುವ ದೈವ ಪಂಜುರ್ಲಿಗೆ ಸಂಬಂಧಿಸಿದ ದೃಶ್ಯಗಳೂ ಸಹ ಹೆಚ್ಚು ಇರಲಿದೆ ಎನ್ನಲಾಗಿದೆ.
ಇದನ್ನೂ ಓದಿ: 'ಓರ್ವ ನಟಿಯಾಗಿ ನಾನು ಯಾವ ಪಾತ್ರವನ್ನಾದರೂ ನಿಭಾಯಿಸಬಲ್ಲೆ': ತಮನ್ನಾ ಭಾಟಿಯಾ
ಕಳೆದ ವರ್ಷ ಸೆಪ್ಟೆಂಬರ್ 30ರಂದು ಕನ್ನಡದಲ್ಲಿ ಬಿಡುಗಡೆಯಾದ ಚಿತ್ರವು ಮೊದಲ ದಿನವೇ ಪಾಸಿಟಿವ್ ಟಾಕ್ ಪಡೆದು ಭರ್ಜರಿ ಕಲೆಕ್ಷನ್ ಮಾಡಿದೆ. ಅಲ್ಲದೇ ಈ ಸಿನಿಮಾದ ಜನಪ್ರಿಯವಾಗಿ ಇನ್ನಷ್ಟು ಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಮಾಡಬೇಕೆಂಬ ಬೇಡಿಕೆಗಳೂ ಬಂದವು ಎಂದರೆ ಪ್ರೇಕ್ಷಕರು ಈ ಸಿನಿಮಾವನ್ನು ಎಷ್ಟರ ಮಟ್ಟಿಗೆ ತಮ್ಮದಾಗಿಸಿಕೊಂಡಿದ್ದಾರೆ ಎಂಬುದನ್ನು ನೀವೇ ಅರ್ಥಮಾಡಿಕೊಳ್ಳಿ. ಈ ಹಿನ್ನೆಲೆ ನಿರ್ಮಾಪಕರು ಈ ಚಿತ್ರವನ್ನು ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಿದರು. ಬಿಡುಗಡೆಯಾದ ಎಲ್ಲ ಭಾಷೆಯಲ್ಲೂ ಚಿತ್ರ ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ. ಈ ಸಿನಿಮಾ ಕಲೆಕ್ಷನ್ ಮಾತ್ರವಲ್ಲದೇ ಪ್ರಶಸ್ತಿಯಲ್ಲೂ ಹೊಸ ದಾಖಲೆ ಸೃಷ್ಟಿಸಿದೆ. ಭಾರತದ ಪರವಾಗಿ ಆಸ್ಕರ್‌ಗೆ ನಾಮನಿರ್ದೇಶನಗೊಂಡ ಹತ್ತು ಚಿತ್ರಗಳಲ್ಲಿ ಕಾಂತಾರ ಕೂಡ ಒಂದು.
ಇದನ್ನೂ ಓದಿ: ವಿಡಿಯೋ: ತಂದೆಯಾದ ಖುಷಿ ವ್ಯಕ್ತಪಡಿಸಿ, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ರಾಮ್ ಚರಣ್