ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಕಾಂತಾರ ಧೂಳೆಬ್ಬಿಸುತ್ತಿದೆ. ತಮ್ಮ ಸಿನಿಮಾ ಈ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂದು ಚಿತ್ರತಂಡವೇ ಊಹಿಸಿರಲಿಲ್ಲ. ಎಲ್ಲಾ ದಾಖಲೆಗಳನ್ನು ಪುಡಿಗಟ್ಟಿ ಯಶಸ್ಸಿನ ಮಾರ್ಗದಲ್ಲಿ ಪಯಣ ಮುಂದುವರಿಸಿದೆ ಕಾಂತಾರ.
ಕಾಂತಾರ ಸೀಕ್ವೆಲ್ ಬರಬೇಕೆನ್ನೋದು ಸಿನಿಪ್ರಿಯರ ಆಸೆ. ಜೊತೆಗೆ ಹಿಂದಿ ಚಿತ್ರರಂಗಕ್ಕೆ ರಿಷಬ್ ಎಂಟ್ರಿ ಕೊಡ್ತಾರಾ ಅನ್ನೋದು ಪ್ರೇಕ್ಷಕರ ಪ್ರಶ್ನೆ. ಚಿತ್ರ ತಂಡವಾಗಲಿ, ರಿಷಬ್ ಶೆಟ್ಟಿ ಆಗಲಿ ಈವರೆಗೆ ಸ್ಪಷ್ಟವಾಗಿ ಯಾವ ವಿಚಾರವನ್ನೂ ಹಂಚಿಕೊಂಡಿಲ್ಲ. ಆದ್ರೆ ಕಾಂತಾರ ಕ್ಲೈಮಾಕ್ಸ್ ನೋಡಿದರೆ ಕಾಂತಾರ ಮುಂದುವರಿದ ಭಾಗ ಬರಬಹುದು ಎಂಬುದು ಹಲವರ ಅಭಿಪ್ರಾಯ.
ಸಂದರ್ಶನವೊಂದರಲ್ಲಿ ರಿಷಬ್ ಶೆಟ್ಟಿ ಮಾತನಾಡಿ, "ನನಗೆ ಬಾಲಿವುಡ್ ಚಲನಚಿತ್ರ ನಿರ್ಮಾಪಕರಿಂದ ಆಫರ್‌ಗಳು ಬಂದಿವೆ. ಆದರೆ ಇದೀಗ ನಾನು ಕನ್ನಡದಲ್ಲಿ ಮಾತ್ರ ಚಲನಚಿತ್ರಗಳನ್ನು ಮಾಡಲು ಬಯಸುತ್ತೇನೆ. ನಾನು ಬಚ್ಚನ್ ಅವರನ್ನು ಆರಾಧಿಸುತ್ತೇನೆ, ನಾನು ಅವರನ್ನು ನಿಜವಾಗಿಯೂ ಇಷ್ಟಪಡುತ್ತೇನೆ ಮತ್ತು ಯುವ ಪೀಳಿಗೆಯ ನಟರಾದ ಶಾಹಿದ್ ಕಪೂರ್ ಅಥವಾ ಸಲ್ಮಾನ್ ಭಾಯ್ ಸೇರಿದಂತೆ ಇನ್ನೂ ಅನೇಕರನ್ನು ನಾನು ಇಷ್ಟಪಡುತ್ತೇನೆ" ಎಂದು ತಿಳಿಸಿದ್ದಾರೆ.
ಕಾಂತಾರ ಚಿತ್ರದ ಮುಂದುವರಿದ ಭಾಗದ ಬಗ್ಗೆ ಮಾತನಾಡಿರುವ ರಿಷಬ್ ಶೆಟ್ಟಿ, "ನಾನು ಅದರ ಬಗ್ಗೆ ಇನ್ನೂ ಯೋಚಿಸಿಲ್ಲ. ಕಾಂತಾರ-2 ಮಾಡೋದಾದರೆ ನಾವು ಅದನ್ನು ಘೋಷಿಸುತ್ತೇವೆ" ಎಂದು ಹೇಳಿದ್ದಾರೆ.
ರಿಷಬ್ ಶೆಟ್ಟಿ ಅವರ ಕಾಂತಾರ ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿದ್ದು, ಅದರ ಕಥಾಹಂದರ ಮತ್ತು ಅದ್ಭುತ ದೃಶ್ಯಗಳಿಗಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಇತ್ತೀಚೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ದಕ್ಷಿಣದ ಸೂಪರ್ ಸ್ಟಾರ್ ರಜನಿಕಾಂತ್ ಅವರು ರಿಷಬ್ ಶೆಟ್ಟಿ ಅವರ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಭಿಮಾನಿಗಳಲ್ಲದೇ ಸ್ಟಾರ್ ನಟರು ಸಹ ಚಿತ್ರಕ್ಕೆ ಫುಲ್ ಮಾರ್ಕ್ ನೀಡಿದ್ದಾರೆ. ಬಾಲಿವುಡ್ ಸಿನಿಮಾ ವಿಮರ್ಶಕ ತರಣ್ ಆದರ್ಶ್ ಪ್ರಕಾರ, ಚಿತ್ರ ಬಿಡುಗಡೆಯಾದ ಮೂರನೇ ವಾರದ ನಂತರ ಹಿಂದಿ ಮಾರುಕಟ್ಟೆಯಲ್ಲಿ 50 ಕೋಟಿ ರೂ ಗಳಿಸಿದೆ. ಈ ಮೂಲಕ ಅನೇಕ ಸೂಪರ್ ಹಿಟ್ ಸಿನಿಮಾಗಳ ದಾಖಲೆಗಳನ್ನು ಹಿಂದಿಕ್ಕಿದೆ.
ಇದನ್ನೂ ಓದಿ: ಮುಂದುವರಿದ ಕಾಂತಾರ ಅಬ್ಬರ... ಕಲೆಕ್ಷನ್ ಕಂಡು ಬಾಲಿವುಡ್ ಬೆರಗು
ಸಿನಿಮಾ ಸಕ್ಸಸ್ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು #KantaraForOscars ಟ್ರೆಂಡ್ ಅನ್ನು ಪ್ರಾರಂಭಿಸಿದ್ದರು. ಚಲನಚಿತ್ರವನ್ನು ಆಸ್ಕರ್ ಪ್ರಶಸ್ತಿಗೆ ಪರಿಗಣಿಸಬೇಕೆಂದು ಒತ್ತಾಯಿಸಿದ್ದರು. ಕಳೆದ ಕೆಲ ಸಮಯಗಳಿಂದ ಬಾಹುಬಲಿ, ಕೆಜಿಎಫ್, ಪುಷ್ಪ, ಕಾರ್ತಿಕೇಯ 2, ಕಾಂತಾರಂತಹ ಅನೇಕ ದಕ್ಷಿಣ ಭಾರತದ ಚಲನಚಿತ್ರಗಳು ವಿಶ್ವಾದ್ಯಂತ ಮೆಚ್ಚುಗೆಯನ್ನು ಪಡೆದಿರೋದು ಹೆಮ್ಮೆಯ ವಿಚಾರ.