ಬಣ್ಣದ ಲೋಕದಲ್ಲಿ ಒಂದು ಸಿನಿಮಾ ಮಾಡಿ ಅದನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಆ ಚಿತ್ರದ ನಿರ್ದೇಶಕ ಹಾಗೂ ಚಿತ್ರತಂಡ ವಿಭಿನ್ನ ರೀತಿಯಲ್ಲಿ ಪ್ರಚಾರಕ್ಕೆ ಕೈ ಹಾಕುತ್ತಾರೆ. ಅದೇ ರೀತಿ ಯುವ ನಟ ನಿಶ್ಚಿತ್ ಕೊರೋಡಿ ಹಾಗೂ ದೀಪಿಕಾ ಆರಾಧ್ಯ ಅಭಿನಯದ 'ಸಪ್ಲೈಯರ್ ಶಂಕರ' ಚಿತ್ರತಂಡ ಸಿನಿಮಾ ಪ್ರೇಮಿಗಳಿಗೆ ಭರ್ಜರಿ ಆಫರ್ವೊಂದನ್ನು ನೀಡಿದೆ. ಇತ್ತೀಚೆಗೆ ಈ ಚಿತ್ರದ 'ಮಾಡೊ ಕೆಲಸವ ನೀನು ಮರೆಸಿದೆ..' ಹಾಡು ಬಿಡುಗಡೆ ಆಗಿತ್ತು. ಈ ಹಾಡಿನಲ್ಲಿ ದೀಪಿಕಾ ಆರಾಧ್ಯ ಜೊತೆ ನಿಶ್ಚಿತ್ ರೊಮ್ಯಾನ್ಸ್ ಮಾಡಿದ್ದಾರೆ.
ಪ್ರಮೋದ್ ಮರವಂತೆ ಬರೆದಿರುವ ಈ ಪ್ರೇಮಗೀತೆ ನಕುಲ್ ಅಭಯಂಕರ್ ಹಾಗೂ ಐಶ್ವರ್ಯ ರಂಗರಾಜನ್ ಅವರ ಕಂಠದಲ್ಲಿ ಸುಮಧುರವಾಗಿ ಮೂಡಿಬಂದಿದ್ದು, ಆರ್ ಬಿ ಭರತ್ ಸಂಗೀತ ನೀಡಿದ್ದಾರೆ. ಹಾಡು ಬಿಡುಗಡೆಯಾದ ತಕ್ಷಣದಿಂದಲೇ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.
ರೀಲ್ಸ್ ಮಾಡಿ, ಬಹುಮಾನ ಗೆಲ್ಲಿ: ಈಗ ಈ ಹಾಡಿಗೆ ಆಸಕ್ತರು ರೀಲ್ಸ್ ಮಾಡಬಹುದು. ಯಾರ ರೀಲ್ಸ್ಗೆ ಹೆಚ್ಚು ವೀಕ್ಷಣೆ ಹಾಗೂ ಮೆಚ್ಚುಗೆ ಬರುವುದೋ, ಅವರಿಗೆ ಚಿತ್ರತಂಡದಿಂದ I PHONE 15 ಮೊಬೈಲ್ ಸಿಗಲಿದೆ. ಯಾರು ಚೆನ್ನಾಗಿ ರೀಲ್ಸ್ ಮಾಡುತ್ತಾರೋ ಅವರಿಗೆ ಐಫೋನ್ ಸಿಗಲಿದೆ. ಹೊಸ ಜನರೇಷನ್ ಐಫೋನ್ ಇದಾಗಿದ್ದು ಒಂದೂವರೆ ಲಕ್ಷ ರೂಪಾಯಿ ಬೆಲೆ ಬಾಳುತ್ತೆ. ಆಸಕ್ತರು ಈ ಕೆಳಗಿನ ನಿಯಮಗಳನ್ನು ಅನುಸರಿಸಿ.
1. Create Reel using Audio from Instagram “Mado Kelasava Neenu”
2. Follow @trinethra_films Instagram page.
3. Subscribe to Trinethra films YouTube Channel.
4. Use hashtag #MaadoKelasavaNeenuMareside and #SupplierShankara and tag @trinethra_films @aanandaaudio
ಸಪ್ಲೈಯರ್ ಶಂಕರ ಚಿತ್ರಕಥೆ: ಇದು ಬಾರ್ ಸಪ್ಲೈಯರ್ ಸುತ್ತ ನಡೆಯುವ ಕಥೆಯಾಗಿದೆ. ನಿಶ್ಚಿತ್ ಕರೋಡಿ ಈ ಚಿತ್ರದಲ್ಲಿ ಸಪ್ಲೈಯರ್ ಶಂಕರನಾಗಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಆರಾಧ್ಯ ಈ ಚಿತ್ರದ ನಾಯಕಿ. ಗೋಪಾಲಕೃಷ್ಣ ದೇಶಪಾಂಡೆ, ನವೀನ್ ಪಡೀಲ್, ಜ್ಯೋತಿ ರೈ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ನಿರ್ದೇಶಕ ರಂಜಿತ್ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಲವ್, ಕಾಮಿಡಿ, ತಾಯಿ-ಮಗನ ಸೆಂಟಿಮೆಂಟ್ ಜೊತೆಗೆ ಸಸ್ಪೆನ್ ಥ್ರಿಲ್ಲರ್ ಕಥಾಹಂದರವನ್ನು ಚಿತ್ರ ಒಳಗೊಂಡಿದೆ. ಸತೀಶ್ ಕುಮಾರ್ ಛಾಯಾಗ್ರಹಣ , ಸತೀಶ್ ಚಂದ್ರಯ್ಯ ಅವರ ಸಂಕಲನ ಹಾಗೂ ಬಾಲಾಜಿ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ. ತ್ರಿನೇತ್ರ ಫಿಲಂಸ್ ಲಾಂಛನದಲ್ಲಿ ಎಂ.ಚಂದ್ರಶೇಖರ್ ಹಾಗೂ ಎಂ.ನಾಗೇಂದ್ರ ಸಿಂಗ್ ನಿರ್ಮಿಸಿದ್ದಾರೆ. ಚಿತ್ರವು ಈ ವರ್ಷ ತೆರೆ ಕಾಣಲಿದೆ.
ಇದನ್ನೂ ಓದಿ: 'ಸಪ್ಲೈಯರ್ ಶಂಕರ' ಪ್ರೇಮಗೀತೆಗೆ ದೀಪಿಕಾ ಜೊತೆ ನಿಶ್ಚಿತ್ ರೊಮ್ಯಾನ್ಸ್