ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್' ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿದೆ. ಬಾಕ್ಸ್ ಆಫೀಸ್ ಸಂಖ್ಯೆಗಳು ಎಲ್ಲರ ಹುಬ್ಬೇರುವಂತೆ ಮಾಡಿದೆ. ರಣ್ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಸೇರಿದಂತೆ ಸಂಪೂರ್ಣ ಚಿತ್ರತಂಡ ಯಶಸ್ಸಿನಲೆಯಲ್ಲಿ ತೇಲುತ್ತಿದೆ. 'ಅನಿಮಲ್' ಸಿನಿಮಾದ ಈವರೆಗಿನ ಒಟ್ಟು ಕಲೆಕ್ಷನ್ ಸರಿಸುಮಾರು 900 ಕೋಟಿ ರೂ. ಎನ್ನಲಾಗಿದ್ದು, ಆದ್ರೆ ಚಿತ್ರತಂಡ ಇನ್ನೂ ಸಕ್ಸಸ್ ಪಾರ್ಟಿ ಆಯೋಜಿಸಿಲ್ಲ. ಇದೀಗ 'ಅನಿಮಲ್ ಸಕ್ಸಸ್ ಸೆಲೆಬ್ರೇಶನ್'ಗೆ ಸಿದ್ಧತೆ ನಡೆಯುತ್ತಿದ್ದು, ನಟಿ ರಶ್ಮಿಕಾ ಮಂದಣ್ಣ ತಮ್ಮ ಮುಂದಿನ ಚಿತ್ರಗಳಿಂದ ಬ್ರೇಕ್ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಅನಿಮಲ್ ಸಿನಿಮಾ 2023ರ ಡಿಸೆಂಬರ್ 21ರಂದು ತೆರೆಗಪ್ಪಳಿಸಿತ್ತು. ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರ ಸ್ಯಾಮ್ ಬಹದ್ದೂರ್ ಸಹ ಅಂದೇ ಬಿಡುಗಡೆ ಆಗಿತ್ತು. ಬಾಕ್ಸ್ ಆಫೀಸ್ ಪೈಪೋಟಿ ನಡುವೆಯೂ, ಅನಿಮಲ್ ಅಬ್ಬರಿಸಿ ಸರಿಸುಮಾರು 900 ಕೋಟಿ ರೂ. ಸಂಗ್ರಹಿಸುವಲ್ಲಿ ಯಶ ಕಂಡಿದೆ. ಈ ಹಿನ್ನೆಲೆ ಚಿತ್ರತಂಡ ಸಮಾರಂಭ ಆಯೋಜಿಸಲು ಸಜ್ಜಾಗಿದೆ. ಹಾಗಾಗಿ, ಚಿತ್ರದಲ್ಲಿ ರಣ್ಬೀರ್ ಕಪೂರ್ ಅವರ ಪತ್ನಿ ಪಾತ್ರ ನಿರ್ವಹಿಸಿದ್ದ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಪುಷ್ಪ 2 ಚಿತ್ರೀಕರಣದಿಂದ ವಿರಾಮ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಶ್ರೀವಲ್ಲಿ ಕೈಯಲ್ಲಿ ಪುಷ್ಪ ಸೀಕ್ವೆಲ್ ಅಲ್ಲದೇ ದಿ ಗರ್ಲ್ಫ್ರೆಂಡ್, ರೈನ್ಬೋ ಸಿನಿಮಾ ಕೂಡ ಇವೆ.
2024ರ ಬಹುನಿರೀಕ್ಷಿತ ಸಿನಿಮಾ 'ಪುಷ್ಪ 2'ರ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಮುಖ್ಯ ಭೂಮಿಕೆಯ ಪುಷ್ಪ ಸೀಕ್ವೆಲ್ನ ಹಲವು ಶೂಟಿಂಗ್ ಶೆಡ್ಯೂಲ್ಗಳು ಈಗಾಗಲೇ ಪೂರ್ಣಗೊಂಡಿವೆ. ಪ್ರಸ್ತುತ ರಶ್ಮಿಕಾ ಮಂದಣ್ಣ ಅವರ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಪುಷ್ಪ- 2ಗಾಗಿ ರಶ್ಮಿಕಾ ಮಂದಣ್ಣ ಟೈಟ್ ಶೂಟಿಂಗ್ ಶೆಡ್ಯೂಲ್ ಹೊಂದಿದ್ದಾರೆ. ಹಾಗಾಗಿ 'ಅನಿಮಲ್' ಸಕ್ಸಸ್ ಪಾರ್ಟಿಯಲ್ಲಿ ಪಾಲ್ಗೊಳ್ಳಲು ರಶ್ಮಿಕಾ ಅವರು ಚಿತ್ರದ ನಿರ್ಮಾಪಕರಿಂದ ಅನುಮತಿ ಪಡೆದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ರಾಗಿಣಿ ಅಭಿನಯದ 'ಇ-ಮೇಲ್'ಗೆ ಪ್ರಜ್ವಲ್ ದೇವರಾಜ್ ಸಾಥ್
'ಅನಿಮಲ್' ಚಿತ್ರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಶ್ಮಿಕಾ ನಾಳೆ ಮುಂಬೈಗೆ ತೆರಳಲಿದ್ದಾರೆ. ಹೆಚ್ಚು ಸಮಯ ತೆಗೆದುಕೊಳ್ಳದೇ ಶೀಘ್ರವೇ ಹೈದರಾಬಾದ್‌ಗೆ ವಾಪಸ್ ಆಗಿ ಚಿತ್ರೀಕರಣದಲ್ಲಿ ಪುನಃ ಭಾಗವಹಿಸಲಿದ್ದಾರಂತೆ. ಈ ಬಹುನಿರೀಕ್ಷಿತ ಚಿತ್ರ ಇದೇ 2024ರ ಆಗಸ್ಟ್ 15ರಂದು ತೆರೆ ಕಾಣಲಿದೆ. ಫಹಾದ್ ಫಾಸಿಲ್, ಜಗಪತಿ ಬಾಬು, ಪ್ರಕಾಶ್ ರಾಜ್, ಸುನೀಲ್ ಸೇರಿದಂತೆ ಹಲವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಇದನ್ನೂ ಓದಿ: 2024ರಲ್ಲಿ ಮದುವೆಯಾಗಲಿರುವ ನಟಿಮಣಿಯರು ಇವರೇ ನೋಡಿ