ಗೇಮಿಂಗ್ ಆ್ಯಪ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹಿಂದಿ ಚಿತ್ರರಂಗದ ಖ್ಯಾತ ನಟ ರಣ್ಬೀರ್ ಕಪೂರ್ ಅವರಿಗೆ ಜಾರಿ ನಿರ್ದೇಶನಾಲಯ ಇಂದು ಸಮನ್ಸ್ ಜಾರಿ ಮಾಡಿದೆ.
ಈಟಿವಿ ಭಾರತ್ ಸ್ವೀಕರಿಸಿರುವ ಆರಂಭಿಕ ಮಾಹಿತಿಗಳ ಪ್ರಕಾರ, ಆನ್‌ಲೈನ್ ಬೆಟ್ಟಿಂಗ್ ಆ್ಯಪ್ನೊಂದಿಗೆ ಸಂಬಂಧ ಹೊಂದಿರುವ ಆರೋಪದಡಿ ಜಾರಿ ನಿರ್ದೇಶನಾಲಯ ತನಿಖೆ ಕೈಗೆತ್ತಿಕೊಂಡಿದೆ. ಇಡಿ ಗುರಿಯಲ್ಲಿ ರಣ್ಬೀರ್ ಕಪೂರ್ ಸೇರಿ 15 ಸೆಲೆಬ್ರಿಟಿಗಳು ಇದ್ದಾರೆ.
ಸುಮಾರು 15 ಸೆಲೆಬ್ರಿಟಿಗಳು ಯುಎಇಯಲ್ಲಿ ಮಹಾದೇವ್ ಬೆಟ್ಟಿಂಗ್ ಆ್ಯಪ್‌ನ ಪ್ರಚಾರಕ ಸೌರಭ್ ಚಂದ್ರಕರ್ ಅವರು ಆಯೋಜಿಸಿದ್ದ ಮ್ಯಾರೇಜ್ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಹಾಗಾಗಿ ಈ ಪ್ರಕರಣದಲ್ಲಿ ಟೈಗರ್ ಶ್ರಾಫ್, ರಾಹತ್ ಫತೇಹ್ ಅಲಿ ಖಾನ್, ಅತೀಫ್ ಅಸ್ಲಾಂ, ಕೃಷ್ಣ ಅಭಿಷೇಕ್, ನುಶ್ರತ್ ಭರುಚಾ, ಸನ್ನಿ ಲಿಯೋನ್ ಸೇರಿದಂತೆ 15 ಜನ ಖ್ಯಾತನಾಮರ ಹೆಸರು ಕೇಳಿಬಂದಿದೆ.
ಆನಲೈನ್ ಬೆಟ್ಟಿಂಗ್ ಆ್ಯಪ್ ಆದ ಮಹಾದೇವ್ ಬುಕ್ ಆ್ಯಪ್‌ನ ಸಂಸ್ಥಾಪಕರನ್ನು ಹಲವು ರಾಜ್ಯಗಳಲ್ಲಿ ಪೊಲೀಸರು ಮತ್ತು ಇಡಿ ಸೇರಿ ತನಿಖೆ ನಡೆಸುತ್ತಿದೆ. ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯೊಂದಕ್ಕೆ ಹವಾಲಾ ಮೂಲಕ 100 ಕೋಟಿ ರೂ.ಗೂ ಹೆಚ್ಚು ಹಣ ವರ್ಗಾವಣೆಯಾಗಿದೆ ಎಂಬುದರ ಕುರಿತು ಪುರಾವೆಗಳನ್ನು ಸಹ ಇಡಿ ಸಂಗ್ರಹಿಸಿದೆ ಎಂದು ವರದಿಗಳು ತಿಳಿಸಿವೆ.
ಬೆಟ್ಟಿಂಗ್ ಆ್ಯಪ್‌ನ ಪ್ರಚಾರಕ ಸೌರಭ್ ಚಂದ್ರಕರ್ ಅವರ ಅದ್ಧೂರಿ ವಿವಾಹ ಸಮಾರಂಭದಲ್ಲಿ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಹಣಕಾಸು ತನಿಖಾ ಸಂಸ್ಥೆಯು ಕಳೆದ ತಿಂಗಳು ನಡೆಸಿದ ತನಿಖೆಯಲ್ಲಿ, ಹೋಟೆಲ್‌ಗಳ ಬಿಲ್, ಟ್ರಾನ್ಸ್ಪೋರ್ಟ್ ಬಿಲ್ಗಳ ಮಾಹಿತಿ ಪಡೆದುಕೊಂಡಿವೆ. ದೊಡ್ಡ ಮೊತ್ತದಲ್ಲಿ ವ್ಯವಹಾರ ನಡೆದಿದೆ.
ಮಹಾದೇವ್ ಬುಕ್ ಆ್ಯಪ್‌ನ ಸಂಸ್ಥಾಪಕರ ತನಿಖೆ ನಡೆಯುತ್ತಿದೆ. ನಾಗ್ಪುರದಿಂದ ಯುಎಇಗೆ ಕುಟುಂಬ ಸದಸ್ಯರನ್ನು ಕರೆದೊಯ್ಯಲು ಖಾಸಗಿ ಜೆಟ್ ಬಳಸಲಾಗಿದೆ. ದುಬೈನಲ್ಲಿ ಅದ್ಧೂರಿ ಮದುವೆ ಸಮಾರಂಭಕ್ಕಾಗಿ ಮಹದೇವ್ ಬುಕ್ ಆ್ಯಪ್ ಸುಮಾರು 200 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಆರೋಪಿಸಲಾಗಿದೆ. ಮದುವೆಯ ಮೆರುಗು ಹೆಚ್ಚಿಸಲು ಸೆಲೆಬ್ರಿಟಿಗಳನ್ನು ನೇಮಿಸಿಕೊಳ್ಳಲಾಗಿತ್ತು ಎಂಬುದು ಇಡಿ ತನಿಖೆಯಿಂದ ತಿಳಿದುಬಂದಿದೆ. ವೆಡ್ಡಿಂಗ್ ಪ್ಲಾನರ್‌ಗಳು, ಡ್ಯಾನ್ಸರ್‌ಗಳು, ಡೆಕೋರೇಟರ್‌ಗಳು ಸೇರಿದಂತೆ ಹಲವರನ್ನು ಮುಂಬೈನಿಂದಲೇ ನೇಮಿಸಲಾಗಿತ್ತು. ಹವಾಲಾ ಮೂಲಕ ಹಣ ಪಾವತಿ ಮಾಡಲಾಗಿದೆ ಎಂಬ ಆರೋಪಗಳಿವೆ.
ಇದನ್ನೂ ಓದಿ: 'ರಾಮಾಯಣ'ದಲ್ಲಿ ಯಶ್, ಸಾಯಿ ಪಲ್ಲವಿ, ರಣ್ಬೀರ್ ಕಪೂರ್: 2024ರ ಫೆಬ್ರವರಿಯಲ್ಲಿ ಸೆಟ್ಟೇರಲಿದೆ ಸಿನಿಮಾ
ಯೋಗೇಶ್ ಪೋಪಟ್ ಅವರ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ಆರ್ 1 ಇವೆಂಟ್ಸ್ ಪ್ರೈವೆಟ್ ಲಿಮಿಟೆಡ್ಗೆ ಹವಾಲಾ ಮೂಲಕ 112 ಕೋಟಿ ರೂಪಾಯಿ ವರ್ಗಾಯಿಸಲಾಗಿದೆ. ಹೋಟೆಲ್ ಬುಕ್ಕಿಂಗ್ಗಾಗಿ 42 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಇಡಿ ಹೇಳಿದೆ. ಸಾಕ್ಷಿಗಳಿಗೆ ಪೋಪಟ್, ಮಿಥಿಲೇಶ್ ಮತ್ತು ಇತರೆ ಸಂಬಂಧಿತ ಸಂಘಟಕರ ತನಿಖೆ ನಡೆಸಿದಾಗ 112 ಕೋಟಿ ರೂ. ಹವಾಲಾ ಹಣಕ್ಕೆ ಸಂಬಂಧಿಸಿದಂತೆ ಪುರಾವೆಗಳು ಸಿಕ್ಕಿವೆ ಎಂದು ಇಡಿ ತಿಳಿಸಿವೆ.
ಇದನ್ನೂ ಓದಿ: ಇಟಲಿಯಲ್ಲಿ ಕಾರು ಅಪಘಾತಕ್ಕೊಳಗಾದ ಶಾರುಖ್ ಖಾನ್ ಅಭಿನಯದ ಸ್ವದೇಸ್ ಚಿತ್ರನಟಿ - ಈಗ ಪರಿಸ್ಥಿತಿ ಹೇಗಿದೆ?!
"ಪೋಪಟ್ ಹೆಸರಿನ ಖಾತೆಗಳ (angadias) ತನಿಖೆ ನಡೆಸಲಾಗಿದ್ದು, 2.37 ಕೋಟಿ ರೂ. ಹಣವನ್ನು ವಶಪಡಿಸಿಕೊಳ್ಳಲಾಯಿತು" ಎಂದು ಇಡಿ ಹೇಳಿಕೊಂಡಿದೆ. ಮುಂದಿನ ದಿನಗಳಲ್ಲಿ, ದುಬೈನಲ್ಲಿ ಸೌರಭ್ ಚಂದ್ರಕರ್ ಅವರ ಸಮಾರಂಭದಲ್ಲಿ ಭಾಗವಹಿಸಿದ್ದ ಅನೇಕ ಸೆಲೆಬ್ರಿಟಿಗಳನ್ನು ಹಣಕಾಸು ತನಿಖಾ ಸಂಸ್ಥೆಗಳು ಪ್ರಶ್ನಿಸಲಿದೆ ಎಂದು ಮೂಲಗಳು ತಿಳಿಸಿವೆ.