ಹೈದರಾಬಾದ್ (ತೆಲಂಗಾಣ): ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಎರಡು ಕುಟುಂಬಗಳಲ್ಲಿ ಮದುವೆ ಸಂಭ್ರಮದ ತಯಾರಿಯೂ ಜೋರಾಗಿದೆಯಂತೆ. ಜೋಡಿ ಇನ್ನೇನು ಮದುವೆ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿರುವಾಗಲೇ ರಣಬೀರ್ ಹಾಗೂ ಆಲಿಯಾ ಮದುವೆ ಮುಂದೂಡಲ್ಪಟ್ಟಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಈ ಹಿಂದಿನ ಸುದ್ದಿಯಂತೆ ಏಪ್ರಿಲ್ 13 ಹಾಗೂ 14 ರಂದು ರಣಬೀರ್ ಹಾಗೂ ಆಲಿಯಾ ಭಟ್ ಮದುವೆ ನಡೆಯುತ್ತಿಲ್ಲ. ಆಲಿಯಾ ಅವರ ಸಹೋದರ ರಾಹುಲ್ ಭಟ್ ಈ ವಿಷಯ ಬಹಿರಂಗಪಡಿಸಿದ್ದಾರೆ. ಮದುವೆ ದಿನಾಂಕದ ಮಾಹಿತಿ ಮಾಧ್ಯಮಗಳಿಗೆ ಸೋರಿಕೆಯಾಗುತ್ತಿದ್ದಂತೆ, ಈ ತಾರಾ ಜೋಡಿ ತಮ್ಮ ಮದುವೆ ದಿನಾಂಕವನ್ನು ಬದಲಾಯಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಮದುವೆ ದಿನಾಂಕವನ್ನು ಮುಂದೂಡಲು ಮತ್ತೊಂದು ಕಾರಣವೆಂದರೆ ಭದ್ರತೆಯ ಕಾಳಜಿ. ಆಲಿಯಾ ಮತ್ತು ರಣಬೀರ್ ಮದುವೆ ಮತ್ತು ಇತರ ಹಬ್ಬಗಳಿಗಾಗಿ ಏಪ್ರಿಲ್ 14 ದಿನಾಂಕವನ್ನು ನಿಗದಿ ಮಾಡಿದ್ದರು ಎಂಬುದನ್ನು ರಾಹುಲ್ ಖಚಿತಪಡಿಸಿದ್ದಾರೆ. ರಣಬೀರ್-ಆಲಿಯಾ ವಿವಾಹವು ಏಪ್ರಿಲ್ 20ಕ್ಕೆ ನಡೆಯುವ ಸಾಧ್ಯತೆ ಇದೆ ಎಂದು ಎಂದು ಅವರು ಸುಳಿವು ನೀಡಿದ್ದಾರೆ.
ರಣಬೀರ್ ಮತ್ತು ಆಲಿಯಾ ಮದುವೆ ಆರ್‌ಕೆ ಮನೆಯಲ್ಲಿ 4 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ನಿಗದಿಯಾದ ದಿನಾಂಕದಲ್ಲಿ ಏಪ್ರಿಲ್ 13 ರಿಂದ ಮೆಹೆಂದಿ ಸಮಾರಂಭದೊಂದಿಗೆ ಮದುವೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಮರುದಿನ ಸಂಗೀತ ಸಮಾರಂಭ, ಏಪ್ರಿಲ್ 15 ರಂದು ಮದುವೆ ಹಾಗೂ 16ರಂದು ಔತಣಕೂಟ ನಡೆಯಲಿದೆ ಎಂಬ ಮಾಹಿತಿ ಹರಿದಾಡುತ್ತಿತ್ತು. ರಾಹುಲ್ ಮಾಧ್ಯಮಗಳಿಗೆ ನೀಡಿದ ಮಾಹಿತಿಯ ಪ್ರಕಾರ ಮದುವೆ ದಿನಾಂಕದೊಂದಿಗೆ ಮದುವೆ ಮುಂಚಿನ ಕಾರ್ಯಕ್ರಮಗಳಲ್ಲೂ ಬದಲವಾಣೆಯಾಗುತ್ತದೆ. ಸದ್ಯದಲ್ಲೇ ಮದುವೆ ದಿನಾಂಕ ಪ್ರಕಟಿಸಲಿದ್ದಾರೆ ಎಂದು ಹೇಳಿದ್ದಾರೆ.
ತಮ್ಮ ಮುಂಬರುವ ಚಿತ್ರ ಬ್ರಹ್ಮಾಸ್ತ್ರದ ಸೆಟ್‌ನಲ್ಲಿ ಆಲಿಯಾ ಮತ್ತು ರಣಬೀರ್ ಪರಸ್ಪರ ಪ್ರೀತಿಸಲು ಪ್ರಾರಂಭಿಸಿದ್ದರು. 2018ರಲ್ಲಿ ಸೋನಮ್ ಕಪೂರ್ ಅವರ ವಿವಾಹದ ಆರತಕ್ಷತೆಯಲ್ಲಿ ಈ ಜೋಡಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಜೋಡಿಯು ಅಯಾನ್ ಮುಖರ್ಜಿಯವರ ಬ್ರಹ್ಮಾಸ್ತ್ರದಲ್ಲಿ ಮೊದಲ ಬಾರಿಗೆ ತೆರೆಯ ಮೇಲೆ ಒಟ್ಟಿಗೆ ಕಾಣಿಸುತ್ತಿದೆ. ಚಿತ್ರ ಇದೇ ವರ್ಷ ಸೆಪ್ಟೆಂಬರ್ 9 ರಂದು ಬಿಡುಗಡೆಯಾಗಲಿದೆ. ಇದರಲ್ಲಿ ಅಮಿತಾಬ್ ಬಚ್ಚನ್ ಮತ್ತು ಮೌನಿ ರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ತಾಯಿಯಾಗುತ್ತಿದ್ದಾರೆ ಪ್ರಣೀತಾ : ವಿಭಿನ್ನವಾದ ಫೋಟೋ ಹಂಚಿಕೊಂಡ ನಟಿ