ಈ ಸಿನಿಮಾ ವ್ಯಾಮೋಹನೇ ಹಾಗೇ, ಇಂಜಿನಿಯರ್ಸ್, ಡಾಕ್ಟರ್, ಕ್ರಿಕೆಟರ್ ಆಗಬೇಕು ಅಂದುಕೊಂಡವರು, ಸಿನಿಮಾ ಇಂಡಸ್ಟ್ರಿಗೆ ಬರೋದು ಕಾಮನ್ ಆಗಿದೆ. ಈ ಮಾತಿಗೆ ಕನ್ನಡ ಚಿತ್ರರಂಗದ ಸಾಕಷ್ಟು ನಟರು, ನಿರ್ದೇಶಕರು ಸಿಗ್ತಾರೆ. ಈ ಮಾತು ರಾಮಾ ರಾಮಾ ರೇ ಸಿನಿಮಾ ಖ್ಯಾತಿಯ ನಟರಾಜ್.ಎಸ್ ಭಟ್ ಜೀವನದಲ್ಲಿ ನಡೆದಿದೆ. ಉನ್ನತ ಮಟ್ಟದ ಶಿಕ್ಷಣ ಮಾಡಬೇಕೆಂದು ಅಂದುಕೊಂಡಿದ್ದ ನಟರಾಜ್ ಸಿನಿಮಾಗೆ ಬಂದಿದ್ದು ಇಂಟ್ರಸ್ಟ್ರಿಂಗ್.
2016ರಲ್ಲಿ ಬಂದ ರಾಮಾ ರಾಮಾ ರೇ ಚಿತ್ರದಲ್ಲಿ, ಮರಣ ದಂಡನೆಗೊಳಗಾದ ಖೈದಿಯ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದ, ನಟರಾಜ್.ಎಸ್ ಭಟ್, ಈಗ ಕನ್ನಡ ಚಿತ್ರರಂಗದಲ್ಲಿ, ವಿಭಿನ್ನ ಶೈಲಿಯ ಪಾತ್ರಗಳನ್ನು ಮಾಡುತ್ತಾ ಗಮನ ಸೆಳೆಯುತ್ತಿದ್ದಾರೆ. ಸದ್ಯ ನಟರಾಜ್.ಎಸ್ ಭಟ್, ಸತ್ಯಪ್ರಕಾಶ್ ನಿರ್ದೇಶನದ ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾ ಓಟಿಟಿಯಲ್ಲಿ ಬಿಡುಗಡೆ ಆಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಚಿತ್ರದಲ್ಲಿ ವಿಚಿತ್ರ ಡೈರೆಕ್ಟರ್ ಪಾತ್ರ ಮಾಡಿರೋ ನಟರಾಜ್.ಎಸ್ ಭಟ್, ತಮ್ಮ ಸಿನಿಮಾ ಜರ್ನಿಯ ಬಗ್ಗೆ ಈಟಿವಿ ಭಾರತ ಜೊತೆ ಹಂಚಿಕೊಂಡರು.
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ, ಹೀರೋ ಆಗುವ, ಕನಸು ಕಂಡಿದ್ದ, ನಟರಾಜ್ ಕಳೆದ ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ರಂಗಭೂಮಿಯಲ್ಲಿ ನಾಟಕಗಳನ್ನು ಮಾಡುತ್ತಾ ಇದ್ದ, ನಟರಾಜ್ ರಾಮಾ ರಾಮಾ ರೇ ಸಿನಿಮಾ ಮೂಲಕ ಸಿನಿಮಾ ಇಂಡಸ್ಟ್ರಿಗೆ ಪ್ರವೇಶ ಪಡೆದರು ಎನ್ನಬಹುದಾಗಿದೆ.
ನಟರಾಜ್ ಹೇಳುವ ಹಾಗೆ, ನಿರ್ದೇಶಕ ಸತ್ಯ ಪ್ರಕಾಶ್ ಹಾಗೂ ನಾನು ಒಂದೇ ಊರಿನವರು. ಹೀಗಾಗಿ ಸತ್ಯ ಪ್ರಕಾಶ್ ನನಗೆ ರಾಮಾ ರಾಮಾ ರೇ ಚಿತ್ರದಲ್ಲಿ ಖೈದಿ ಪಾತ್ರ ಕೊಟ್ಟರು. ಈ ಪಾತ್ರಕ್ಕಾಗಿ ನಾನು ಒಂದೂವರೆ ವರ್ಷ ಮೇಕ್ ಓವರ್ ಮಾಡಿಕೊಂಡೆ, ಉದ್ದವಾದ ತಲೆ ಕೂದಲು, ಗಡ್ಡ ಬಿಟ್ಟು ಹತಾಶ ಖೈದಿಯಂತೆ ರೆಡಿಯಾದೆ. ಆದರೆ, ಆ ಸಿನಿಮಾ ಬಿಡುಗಡೆ ಆದಾಗ, ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಬಂದ ಪ್ರೇಕ್ಷಕರು, ಯಾರು ನನ್ನನ್ನ ಗುರುತು ಹಿಡಯಲಿಲ್ಲ, ಯಾಕೆಂದರೆ ಕೂದಲು ಕಟ್ ಮಾಡಿಸಿ, ಸಾಮಾನ್ಯ ವ್ಯಕ್ತಿ ತರ ಇದ್ದೆ. ಆಗ ಧರ್ಮಣ್ಣ ಆ ಖೈದಿ ಪಾತ್ರ ಮಾಡಿರೋ ವ್ಯಕ್ತಿ ಇವರು ಅಂತಾ ಹೇಳಿದರು. ಆಗ ಆ ಜನರು ತೋರಿಸಿದ್ದ ಪ್ರೀತಿ ಗೌರವ ನನಗೆ ಎಂದು ಮರೆಯೋದಿಕ್ಕೆ ಆಗೋಲ್ಲ ಎಂದರು.
ಈ ಸಿನಿಮಾದ ಬಳಿಕ, ಕಳ್ಬೆಟ್ಟದ ದರೋಡೆಕೋರರು, ಭಾಗ್ಯರಾಜ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟರಾಜ್ ಅಭಿನಯಿಸಿದ್ದಾರೆ. ಸದ್ಯ ಬಿಡುಗಡೆ ಆಗಿರುವ ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾದಲ್ಲಿ, ನಾನು ವಿಚಿತ್ರ ಡೈರೆಕ್ಟರ್ ಪಾತ್ರ ಮಾಡಿದ್ದೀನಿ. ಆದರೆ, ಈ ಪಾತ್ರ ಮಾಡೋದು ಚಾಲೆಂಜಿಂಗ್ ಆಗಿತ್ತು. ನಾನು ನಿಜ ಜೀವನದಲ್ಲಿ ರಫ್ ಇಲ್ಲಾ ಮೃದು ಸ್ವಭಾವದವನು ಹಾಗಾಗಿ ಅಲ್ಲಿ ಸ್ವಲ್ಪ ಕಷ್ಟ ಆಗಿತ್ತು ಎನ್ನುತ್ತಾರೆ.
ನಿರ್ದೇಶಕ ಸತ್ಯ ಜೊತೆ ಕೆಲಸ ಮಾಡೋದು ಅಂದ್ರೆ, ಎಕ್ಸೈಟ್ ಆಗಿರುತ್ತೆ. ಯಾಕೇ ಗೊತ್ತಾ ಸತ್ಯ ಪ್ರಕಾಶ್ ಶೂಟಿಂಗ್ ಸ್ಪಾಟ್ನಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡು ಚಿತ್ರೀಕರಣ ಮಾಡುತ್ತಾರೆ. ನನಗೆ ಸತ್ಯ ಪ್ರಕಾಶ್ ನಿರ್ದೇಶನ ಮಾಡಿದ್ದ ಒಂದಲ್ಲಾ ಎರಡೆಲ್ಲಾ ಸಿನಿಮಾವನ್ನು, ಎರಡು ಧರ್ಮದ ಬಗ್ಗೆ ತೋರಿಸಿದ ಪರಿ ತುಂಬಾನೇ ಇಷ್ಟ ಆಯಿತು. ನಾನು ಕೂಡ ಪ್ರತಿಭಾವಂತ ನಿರ್ದೇಶಕನ ತಂಡದಲ್ಲಿ ಇದ್ದೀನಿ ಅನ್ನೋದು ನನಗೆ ಹೆಮ್ಮೆ ಎಂದು ಹೇಳುತ್ತಾರೆ. ಒಟ್ಟಾರೆ ಕಮರ್ಷಿಯಲ್ ಹೀರೋ ಆಗಬೇಕು ಅಂತಾ ಯುವ ನಟರ ಮಧ್ಯೆ ನಟರಾಜ್.ಎಸ್ ಭಟ್ ವಿಭಿನ್ನವಾಗಿ ಕಾಣ್ತಾರೆ.
ಇದನ್ನೂ ಓದಿ: ಅಪ್ಪುಗೆ ಸಿನಿಮಾ ಡೈರೆಕ್ಷನ್ ಮಾಡುವ ಕನಸು ಈಡೇರಲಿಲ್ಲ: ನಿರ್ದೇಶಕ ಸತ್ಯಪ್ರಕಾಶ್