ದಕ್ಷಿಣ ಭಾರತದ ಚಿತ್ರರಂಗದಲ್ಲಿ ಟ್ವೀಟ್, ವಿಭಿನ್ನ ಹೇಳಿಕೆ ಹಾಗೂ ಚಿತ್ರಗಳ ಮೂಲಕ ಸದಾ ಸುದ್ದಿಯಲ್ಲಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸದ್ಯ ಸಮರ ಕಲೆಯಾಧಾರಿತ Ladki: Enter The Girl Dragon ಎಂಬ ಪ್ಯಾನ್ ಇಂಡಿಯಾ ಸಿನೆಮಾ ಮಾಡಿದ್ದಾರೆ. ಈ ಚಿತ್ರವು ಜುಲೈ 15ರಂದು 'ಹುಡುಗಿ' ಎಂಬ ಶೀರ್ಷಿಕೆಯಡಿ ಕನ್ನಡದಲ್ಲೂ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಆರ್ಜಿವಿ ಹಾಗೂ ಚಿತ್ರದ ನಾಯಕಿ ಪೂಜಾ ಭಾಲೇಕರ್ ಬೆಂಗಳೂರಿನಲ್ಲಿ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವರ್ಮಾ, ಇದು ತುಂಬಾ ವಿಶೇಷವಾದ ಸಿನೆಮಾ. ನಾನು ಚಿಕ್ಕವನಿದ್ದಾಗ 'ಎಂಟರ್ ದಿ ಡ್ರ್ಯಾಗನ್' ನೋಡಿದ್ದೆ. ಆ ಕಥೆಯ ನಾಯಕ ಬ್ರೂಸ್ಲಿಯಿಂದ ಸ್ಫೂರ್ತಿಗೊಂಡು ಈ ಸಿನೆಮಾ ಮಾಡಿದ್ದು, ಮಾರ್ಷಲ್ ಆರ್ಟ್ಸ್ಗೆ ಸಂಬಂಧಪಟ್ಟದ್ದಾಗಿದೆ. ಈ ಕಲೆ ಕರಗತ ಮಾಡಿಕೊಂಡವರ ಸಂಖ್ಯೆ ತೀರ ವಿರಳ. ಅದರಲ್ಲೂ ಹೆಣ್ಣು ಮಕ್ಕಳು ಮಾಡುವುದು ತುಂಬಾ ಕಡಿಮೆ. 12 ವರ್ಷದಿಂದ ಪೂಜಾ ಭಾಲೇಕರ್ ಸಮರಕಲೆ ಕಲಿಯುತ್ತಿದ್ದು, ಹೀಗಾಗಿ ಅವರನ್ನೇ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಚಿತ್ರದಲ್ಲಿ ತ್ರಿಕೋನ ಲವ್ ಸ್ಟೋರಿಯೂ ಇದೆ ಎಂದರು.
'ಹುಡುಗಿ' ಮಹಿಳಾ ಪ್ರಧಾನ ಸಿನೆಮಾ ಆಗಿದೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಮಾರ್ಷಲ್ ಆರ್ಟ್ಸ್ ಜೊತೆಗೆ ಪೂಜಾರ ಬೋಲ್ಡ್ ಅವತಾರಗಳಿಂದ ಪಡ್ಡೆಗಳ ನಿದ್ದೆಗೆಡಿಸಿದೆ. ಚಿತ್ರ Ladki: Enter The Girl Dragon ಭಾರತವಲ್ಲದೆ ಚೀನಾದಲ್ಲೂ ಕೂಡ ಬಿಡುಗಡೆಯಾಗುತ್ತಿದೆ. ಆರ್ಟ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನಿರ್ಮಿಸಿರುವ ಚಿತ್ರವು ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಜುಲೈ 15ಕ್ಕೆ ಬಿಡುಗಡೆ ಆಗುತ್ತಿದೆ.
ಇದನ್ನೂ ಓದಿ: ಆ್ಯಕ್ಷನ್ ಮೂಡ್ನಲ್ಲಿ 'ವಾಮನ' ಅವತಾರ ತಾಳಿದ ಧನ್ವೀರ್: ಮೇಕಿಂಗ್ ವಿಡಿಯೋ