ಅಭಿಮಾನಿಗಳ ರಾಜರತ್ನ ಪುನೀತ್ ರಾಜ್‍ಕುಮಾರ್ ನಿಧನ ಹೊಂದಿ ಇಂದಿಗೆ ಎರಡು ವರ್ಷ. ಈ ಹಿನ್ನೆಲೆಯಲ್ಲಿ, ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸ್ಮಾರಕವನ್ನು ಶ್ವೇತ ವರ್ಣದ ಮಾರ್ಬಲ್ನಲ್ಲಿ ನಿರ್ಮಾಣ ಮಾಡಲಾಗಿದೆ. ಇಂದು ರಾಘವೇಂದ್ರ ರಾಜ್‍ಕುಮಾರ್ ಕುಟುಂಬ, ಅಶ್ವಿನಿ ಪುನೀತ್ ರಾಜ್‍ಕುಮಾರ್, ಮಗಳು ವಂದಿತಾ, ಪುನೀತ್ ಅಕ್ಕಂದಿರಾದ ಲಕ್ಷ್ಮೀ ಹಾಗೂ ಪೂರ್ಣಿಮಾ ಕುಟುಂಬದವರು ಸೇರಿ ರಾಜ್ ಕುಟುಂಬಸ್ಥರು ಪವರ್ ಸ್ಟಾರ್ಗೆ ಇಷ್ಟವಾದ ತಿಂಡಿ ತಿನಿಸುಗಳನ್ನಿಟ್ಟು ಪೂಜೆ ಸಲ್ಲಿಸಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್‍ಕುಮಾರ್ ಸಮಾಧಿಗೆ ನಮನ ಸಲ್ಲಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಆಗಮಿಸಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಸ್ಮಾರಕದ ದರ್ಶನ ಪಡೆಯುತ್ತಿದ್ದಾರೆ. ಪುಣ್ಯಸ್ಮರಣೆ ಹಿನ್ನೆಲೆ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಪುನೀತ್ ರಾಜ್‍ಕುಮಾರ್ ಅವರ ಅಕ್ಕ ಲಕ್ಷ್ಮೀ ಹಾಗೂ ಭಾವ ಗೋವಿಂದ ರಾಜ್ ಅವರು ಅಪ್ಪು ಬಗೆಗಿನ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಭಾವ ಗೋವಿಂದ ರಾಜ್ ಮಾತನಾಡಿ, ಪುನೀತ್ ಅಂದಾಕ್ಷಣ ಅವನ ನಗು ಹಾಗೂ ಪ್ರತಿಯೊಬ್ಬರಿಗೂ ಕೊಡುತ್ತಿದ್ದ ಗೌರವ ನೆನಪಾಗುತ್ತದೆ. ಅಪ್ಪು ಚಿಕ್ಕ ವಯಸ್ಸಿನಲ್ಲಿರಬೇಕಾದ್ರೆ ಭಕ್ತ ಪ್ರಹ್ಲಾದ, ವಸಂತ ಗೀತಾ, ಭಾಗ್ಯವಂತ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದೆ. ಭಾಗ್ಯವಂತ ಚಿತ್ರದಲ್ಲಿ ಹಿರಿಯ ನಟ ಅಶ್ವಥ್ ಜೊತೆ ಅಭಿನಯಿಸಿದ್ದ. ಆವಾಗ್ಲೇ ಅಶ್ವಥ್ ಅವರು ಅಪ್ಪುನನ್ನು ಕೊಂಡಾಡಿದ್ದರು. ಈ ಮಟ್ಟಿಗೆ ಆ್ಯಕ್ಟಿಂಗ್ ಮಾಡ್ತಾನೆ ಎಂದು ಮೆಚ್ಚುಗೆ ಸೂಚಿಸಿದ್ದರು. ಅಷ್ಟೇ ಅಲ್ಲ, ಭಾಗ್ಯವಂತ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಅಪ್ಪು ನಟನೆ ನೋಡಿ ಇಡೀ ಚಿತ್ರತಂಡ ಬೆರಗಾಗಿತ್ತು ಅಂತಾ ತಿಳಿಸಿದ್ದರು. ಅಪ್ಪು ಅಭಿನಯದ ಭಾಗ್ಯವಂತ ನನ್ನ ಅಚ್ಚುಮೆಚ್ಚಿನ ಚಿತ್ರ ಎಂದು ತಿಳಿಸಿ ಗೋವಿಂದ ರಾಜ್ ಭಾವುಕರಾದರು.
ಬಳಿಕ ಅಪ್ಪು ಅವರ ದೊಡ್ಡ ಅಕ್ಕ ಲಕ್ಷ್ಮೀ ಮಾತನಾಡಿ, ಪುನೀತ್ ಬಗ್ಗೆ ಏನು ಹೇಳಲಿ. ಅಪ್ಪು ನನಗಿಂತ 12 ವರ್ಷ ಚಿಕ್ಕವನು. ಅವನು ಮದ್ರಾಸ್ನಲ್ಲಿ ಹುಟ್ಟಿದ ಕೂಡಲೇ ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ನೋಡಿದ್ದ. ಆವಾಗ್ಲೇ ರಾಜನ ಕಳೆ ಇತ್ತು. ಅವನು ಅದೇ ರೀತಿ ಬದುಕಿ ಸಮಾಜಕ್ಕೆ ಮಾದರಿ ಆಗಿಬಿಟ್ಟ. ಪ್ರತೀ ವರ್ಷ ಗೌರಿ ಹಬ್ಬಕ್ಕೆ ಹೊಸ ಬಟ್ಟೆ ಹಾಗೂ ಒಂದಿಷ್ಟು ದುಡ್ಡು ಕೊಟ್ಟು ನನ್ನ ಕಡೆಯಿಂದ ನಿಮಗೆ ಗೌರಿ ಹಬ್ಬಕ್ಕೆ ಸಣ್ಣ ಉಡುಗೊರೆ ಎಂದು ಹೇಳುತ್ತಿದ್ದದ್ದು ಇಂದಿಗೂ ನನ್ನ ಕಣ್ಣಲ್ಲಿ ಕಟ್ಟಿದಹಾಗೆ ಇದೆ ಎಂದು ಹೇಳುವಾಗ ಲಕ್ಷ್ಮೀ ಅವರ ಕಣ್ಣುಗಳು ಒದ್ದೆಯಾದವು.
ಇದನ್ನೂ ಓದಿ: ಅಪ್ಪು ಪುಣ್ಯಸ್ಮರಣೆ: ಪತ್ನಿ, ಪುತ್ರಿ ಸೇರಿ ರಾಜ್ ಕುಟುಂಬಸ್ಥರಿಂದ ಸಮಾಧಿಗೆ ಪೂಜೆ ಸಲ್ಲಿಕೆ
ಲಕ್ಷ್ಮೀ ಅವರ ಮಗ ಷಣ್ಮುಖ ಗೋವಿಂದ ರಾಜ್ ಮಾತನಾಡಿ, ನನಗೆ ಅಪ್ಪು ಮಾಮ ವಿಭಿನ್ನ ಬಗೆಯ ತಿಂಡಿ ತಿನಿಸುಗಳನ್ನು ಕೊಡಿಸುತ್ತಿದ್ದರು. ಕಿರಿವಯಸ್ಸಿನಲ್ಲಿ ನಾವು ಟ್ರಿಪ್ ಹೋಗುತ್ತಿರಲಿಲ್ಲ. ತಾತನ ಸಿನಿಮಾ ಶೂಟಿಂಗ್ಗೆ ಹೋಗುತ್ತಿದ್ದೆವು. ಎಲ್ಲವೂ ನೆನಪಿನಲ್ಲಿ ಜೀವಂತ. ಅಪ್ಪು ಮಾಮ ಕೋಟ್ಯಂತರ ಅಭಿಮಾನಿಗಳ ಮನಸ್ಸಿನಲ್ಲಿದ್ದಾರೆ ಅನ್ನೋದು ನಮಗೆ ಹೆಮ್ಮೆಯ ವಿಚಾರ. ಅಪ್ಪು ಮಾಮ ಸದಾ ನಮ್ಮ ಜೊತೆ ಇರುತ್ತಾರೆಂದು ತಿಳಿಸಿದರು.
ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ 2ನೇ ವರ್ಷದ ಪುಣ್ಯಸ್ಮರಣೆ: ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಕುಟುಂಬಸ್ಥರಿಂದ ಪೂಜೆ