ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಜೊತೆ ಜೊತೆಗೆ ಕಿರುತೆರೆಯಲ್ಲೂ ತನ್ನದೇ ಛಾಪು ಮೂಡಿಸಿರುವ ಕುಟುಂಬ ಎಂದರೆ ಅದು ದೊಡ್ಮನೆ ಕುಟುಂಬ. ಡಾ ರಾಜ್ ಕುಮಾರ್ ಹಾಗು ಪಾರ್ವತಮ್ಮ ರಾಜ್ ಕುಮಾರ್, ಸಿನಿಮಾ ಕ್ಷೇತ್ರದಲ್ಲಿ ಅಲ್ಲದೇ ಧಾರಾವಾಹಿ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಇದೀಗ ರಾಘವೇಂದ್ರ ರಾಜಕುಮಾರ್ ಹಾಗೂ ಮಂಗಳ ರಾಘವೇಂದ್ರ ರಾಜಕುಮಾರ್ ಅವರು ಪೂರ್ಣಿಮ ಎಂಟರ್ ಪ್ರೈಸಸ್ ಬ್ಯಾನರ್ ಅಡಿಯಲ್ಲಿ ವಿಜಯ ದಶಮಿ ಎಂಬ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಈ ಸಂಸ್ಥೆಯ ಮೂಲಕ ಅದ್ಧೂರಿ ಧಾರಾವಾಹಿಯೊಂದು ನಿರ್ಮಾಣವಾಗುತ್ತಿದೆ. 19ಕ್ಕೂ ಹೆಚ್ಚು ಅಧಿಕ ಮುಖ್ಯ ಪಾತ್ರಧಾರಿಗಳಿರುವ ಈ ಧಾರಾವಾಹಿಯಲ್ಲಿ 70ಕ್ಕೂ ಅಧಿಕ ಕಲಾವಿದರು ಅಭಿನಯಿಸುತ್ತಿದ್ದಾರೆ.
ಮೊಟ್ಟ ಮೊದಲ ಬಾರಿಗೆ ರಾಘವೇಂದ್ರ ರಾಜಕುಮಾರ್ ಅವರು ಧಾರಾವಾಹಿಯೊಂದನ್ನು ನಿರ್ಮಾಣ ಮಾಡುತ್ತಿರುವುದು ವಿಶೇಷ. ಈ ಅದ್ಧೂರಿ ದೃಶ್ಯ ಕಾವ್ಯ ವಿಜಯದಶಮಿಯ ಚಿತ್ರೀಕರಣ ಭಾರತದಾದ್ಯಂತ ನಡೆಯಲಿದೆ. ಈ ಧಾರಾವಾಹಿಯ ಪ್ರೋಮೊ ನೋಡಿದರೆ, ಕಮರ್ಷಿಯಲ್ ಚಿತ್ರವೊಂದರ ಟ್ರೇಲರ್ ನೋಡಿದ ಅನುಭವವಾಗುತ್ತದೆ. ಧಾರಾವಾಹಿಯು ಎಲ್ಲರ ಮೆಚ್ಚುಗೆ ಪಡೆಯಲಿದೆ ಎಂದು ನಿರ್ದೇಶಕ ಶಶಿ ಅವರು ಹೇಳುತ್ತಾರೆ.
ಇದರ ಜೊತೆಗೆ ಅಮ್ಮ - ಮಗಳ ವಾತ್ಸಲ್ಯ ಹೊಂದಿರುವ ಅಮ್ಮನ ಮದುವೆ ಎಂಬ ಧಾರಾವಾಹಿ ಶುರುವಾಗುತ್ತಿದೆ. ಮದುವೆಯಾಗಿ ಜೀವನ ರೂಪಿಸಿಕೊಳ್ಳಲು ಹೊರಟ ಮಗಳು, ತಾಯಿಯ ಒಂಟಿತನಕ್ಕೆ ಉತ್ತರವಾಗಿ ಅವಳಿಗೊಂದು ಬದುಕು ಕಟ್ಟಿಕೊಡಲು ಹೋರಾಟ ನಡೆಸುವ ಭಾವುಕ ಕಥೆ ಇದಾಗಿದೆ. ನ್ಯೂ D2 ಮೀಡಿಯಾ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದೆ. ಅಚ್ಚ ಕನ್ನಡಿಗರ ವಾಹಿನಿ ಎಂದು ಖ್ಯಾತಿ ಪಡೆದಿರುವ ಸಿರಿ ಕನ್ನಡ ವಾಹಿನಿಯಲ್ಲಿ ವಿಜಯ ದಶಮಿ ಹಾಗು ಅಮ್ಮನ ಮದುವೆ ಎಂಬ ಹೊಚ್ಚ ಹೊಸ ಧಾರಾವಾಹಿಗಳು ಆಗಸ್ಟ್ 1 ರಿಂದ ಪ್ರಸಾರಗೊಳ್ಳಲಿದೆ. ಪ್ರತಿ ಸೋಮವಾರದಿಂದ ಶುಕ್ರವಾರ ರಾತ್ರಿ 8.30ಕ್ಕೆ ಈ ಧಾರವಾಹಿ ಪ್ರಸಾರವಾಗಲಿದೆ.
ಈ ಎರಡು ಧಾರಾವಾಹಿಗಳ ಕುರಿತು ಮಾಹಿತಿ ನೀಡಲು ಆಯೋಜಿಸಿದ್ದ ಮಾಧ್ಯಮಗೋಷ್ಟಿಯಲ್ಲಿ ರಾಘವೇಂದ್ರ ರಾಜಕುಮಾರ್, ಮಂಗಳ ರಾಘವೇಂದ್ರ ರಾಜಕುಮಾರ್, ಸಿರಿ ಕನ್ನಡದ ಸಂಸ್ಥಾಪಕ ನಿರ್ದೇಶಕರಾದ ಸಂಜಯ್ ಶಿಂಧೆ, ಮುಖ್ಯಸ್ಥರಾದ ರಾಜೇಶ್ ರಾಜಘಟ್ಟ ಹಾಗೂ ಮತ್ತಿತರ ಕಲಾವಿದರು ಉಪಸ್ಥಿತರಿದ್ದರು. ನಿರ್ದೇಶಕರಾದ ಸುನೀಲ್ ಕುಮಾರ್ ದೇಸಾಯಿ, ಚೇತನ್ ಕುಮಾರ್, ಸೇತುರಾಮ್, ಕಿಶೋರ್ ಮುಂತಾದ ಗಣ್ಯರು ಆಗಮಿಸಿ ತಂಡಕ್ಕೆ ಶುಭ ಕೋರಿದರು.
ಓದಿ : ವಿಕ್ರಾಂತ್ ರೋಣನ ಅಡ್ವೆಂಚರ್, ಫ್ಯಾಂಟಸಿಗೆ ಜೈ ಹೋ ಎಂದ ಪ್ರೇಕ್ಷಕರು