ಬೆಂಗಳೂರು: ರಾಗಿಣಿ ದ್ವಿವೇದಿ. ಕನ್ನಡ, ತಮಿಳು ಹಾಗು ಹಿಂದಿ ಚಿತ್ರರಂಗದಲ್ಲಿ ಬೋಲ್ಡ್ ನಟನೆಯ ಜೊತೆಗೆ ಗ್ಲ್ಯಾಮರ್ನಿಂದ ಬೇಡಿಕೆ ಹೊಂದಿರುವ ಜನಪ್ರಿಯ ನಟಿ. ಕಳೆದ ಒಂದು ದಶಕದಿಂದ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಬಡವರಿಗೆ ಕೈಲಾದ ಸಹಾಯ ಮಾಡುವ ಮೂಲಕ ಗಮನ ಸೆಳೆದಿದ್ದರು.
ಇದೀಗ ಸಿನಿಮಾದೊಂದಿಗೆ ಆಲ್ಬಂ ವಿಡಿಯೋಗಳನ್ನು ಮಾಡುತ್ತಿರುವ 'ತುಪ್ಪದ ಬೆಡಗಿ'ಗೆ ಮೇ 24ರಂದು ಹುಟ್ಟಿದ ದಿನದ ಸಂಭ್ರಮ. ಹೀಗಾಗಿ ಆ ದಿನ ಅಭಿಮಾನಿಗಳ ಜೊತೆ ವಿವಿಧ ರೀತಿಯ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಮೇ 24 ರಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಆರೋಗ್ಯ ತಪಾಸಣೆ, ನೇತ್ರ ತಪಾಸಣೆ ಸೇರಿದಂತೆ ವಿವಿಧ ಜನೋಪಯೋಗಿ ಕಾರ್ಯಕ್ರಮಗಳನ್ನು ನಟಿ ಆಯೋಜಿಸಿದ್ದಾರೆ.
ಜನರಿಗೆ ಉಪಕಾರವಾಗುವ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ರಾಗಿಣಿ ದ್ವಿವೇದಿ ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಅಭಿಮಾನಿಗಳು ಕೂಡಾ ನಿರ್ಧರಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹತ್ತು ವರ್ಷದ ಸಿನಿಮಾ ಜರ್ನಿಯಲ್ಲಿ ಇವರು ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ.
ಸಿನಿಮಾ ಮಾತ್ರವಲ್ಲದೇ ಮಂಗಳಮುಖಿಯರ ಬೆಳವಣಿಗೆಗೆ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿರುವ ವೃದ್ಧ ದಂಪತಿಗಳಿಗಾಗಿ ಓಲ್ಡ್ ಏಜ್ ಹೋಮ್ ಸೌಲಭ್ಯ ಹಾಗೂ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಕೆಲಸಗಳನ್ನು ರಾಗಿಣಿ ತಮ್ಮ ಜೆನ್ ನೆಕ್ಟ್ ಚಾರಿಟಬಲ್ ವತಿಯಿಂದ ಮಾಡುತ್ತಿದ್ದಾರೆ. ಸದ್ಯ ಸಾರಿ ಕರ್ಮ್ ರಿರ್ಟನ್ಸ್, ಹಿಂದಿಯಲ್ಲಿ ಒಂದು ಸಿನಿಮಾ, ಮಲಯಾಳಂ ಸಿನಿಮಾಗಳು ಸೇರಿದಂತೆ ನಾಲ್ಕೈದು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.
ಮೇ 24ರಂದು ಹುಟ್ಟುಹಬ್ಬವಿರುವ ಹಿನ್ನೆಲೆಯಲ್ಲಿ ರಾಗಿಣಿ ದ್ವಿವೇದಿ ಏನಾದರೂ ಗುಡ್ ನ್ಯೂಸ್ ಕೊಡ್ತಾರಾ ಕಾದು ನೋಡಬೇಕು. ಸಹಜವಾಗಿ ನಟಿಮಣಿಯರು ಫ್ಯಾಮಿಲಿ ಜೊತೆ ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುವರು. ಆದರೆ ರಾಗಿಣಿ ದ್ವಿವೇದಿ ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
ಕೋವಿಡ್ ಸಮಯದಲ್ಲಿ ಸಹಾಯ ಹಸ್ತ: ಕೋವಿಡ್ 19 ಎರಡನೇ ಅಲೆ ಸಂದರ್ಭದಲ್ಲಿ ರಾಜ್ಯದಲ್ಲಿ ನೂರಾರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಲಾಕ್ಡೌನ್ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಕೂಲಿ ಕಾರ್ಮಿಕರು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದರು. ಇಂತಹ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ರಾಗಿಣಿ ಊಟದ ವ್ಯವಸ್ಥೆ, ದಿನಸಿ ಕಿಟ್ಗಳನ್ನು ವಿತರಿಸಿದ್ದರು. ಈ ಮೂಲಕ ಹಸಿದವರ ಹೊಟ್ಟೆ ತುಂಬಿಸಿದ್ದರು. ಇದರ ಜೊತೆಗೆ ರಕ್ತದಾನ ಮಾಡಿ ಸಮಾಜಕ್ಕೂ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದರು. ಕೊರೊನಾ ವಾರಿಯರ್ಸ್ಗಳಿರುವ ಕರ್ತವ್ಯದ ಸ್ಥಳಕ್ಕೆ ಭೇಟಿ ಕೊಟ್ಟು ಅವರ ಹಸಿವು ನೀಗಿಸಿದ್ದರು.
ವಾಕಾ ಹೌಸ್ ಸಸ್ಪೆನ್ಸ್ ಥ್ರಿಲ್ಲರ್ನಲ್ಲಿ ರಾಗಿಣಿ: ರಾಗಿಣಿ ತಮ್ಮ ಮೊದಲ ಹಿಂದಿ ಸಿನಿಮಾದ ಕುರಿತು ಈಗಾಗಲೇ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಹಿಂದಿ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸುತ್ತಿದ್ದು, ಚಿತ್ರವು ಔಟ್ ಆ್ಯಂಡ್ ಔಟ್ ಹಾರರ್, ಸಸ್ಪೆನ್ಸ್ ಥ್ರಿಲ್ಲರ್ ಆಗಿದೆಯಂತೆ. ವಾಕಾ ಹೌಸ್ ಅಂತಾ ಟೈಟಲ್ ಇಡಲಾಗಿದೆ. ಮೊದಲ ಶೂಟಿಂಗ್ ಲಂಡನ್ನಲ್ಲಿ ಮುಗಿದಿದೆ. ಆಯುಷ್ ಶರ್ಮಾ ನಿರ್ದೇಶನದ ಜೊತೆಗೆ ಬಾಂಬೆ ಮೂಲದ ಮೋಹನ್ ಎಂಬುವರು ಪ್ರೊಡಕ್ಷನ್ ಹೌಸ್ ಎಂಬ ಹೆಸರಿನಡಿ ಮತ್ತೊಬ್ಬ ಅಮೆರಿಕ ಇನ್ವೆಸ್ಟರ್ ಜೊತೆಗೂಡಿ ನಿರ್ಮಾಣ ಮಾಡುತ್ತಿದ್ದಾರೆ ಎಂದು ರಾಗಿಣಿ ತಿಳಿಸಿದ್ದಾರೆ.
ಇದನ್ನೂ ಓದಿ: ಇಂದು ಕನ್ನಡದ ನಾಲ್ಕು ಸಿನಿಮಾಗಳು ರಿಲೀಸ್: ಯಾವುವು ಗೊತ್ತೇ?