ಲೂಧಿಯಾನ (ಪಂಜಾಬ್): ಜನಪ್ರಿಯ ಪಂಜಾಬಿ ಗಾಯಕರಾದ ಸುರಿಂದರ್ ಶಿಂದಾ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗಾಯಕ ಇಲ್ಲಿನ ದಯಾನಂದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
60ರ ಹರೆಯದಲ್ಲಿ ಕೊನೆಯುಸಿರೆಳೆದ ಗಾಯಕ: ಸುರಿಂದರ್ ಶಿಂದಾ ಅವರು "ಪುಟ್ ಜತ್ತನ್ ದೇ", "ಜತ್ ದಿಯೋನಾ ಮೋರ್ಹ್" ಮತ್ತು "ಟ್ರಕ್ ಬಲ್ಲಿಯಾ" ಹಾಡುಗಳಿಗೆ ಹೆಸರುವಾಸಿಯಾಗಿದ್ದರು. ಹಲವು ಸೂಪರ್ ಹಿಟ್ ಹಾಡುಗಳು ಇವರ ಕಂಠಸಿರಿಯಿಂದ ಮೂಡಿ ಬಂದಿದ್ದವು. ಆದ್ರೆ ಅನಾರೋಗ್ಯದ ಕಾರಣ 60ರ ಹರೆಯದಲ್ಲಿ ಕೊನೆಯುಸಿರೆಳೆದಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು, ಕುಟುಂಬಸ್ಥರು ಸೇರಿದಂತೆ ಚಿತ್ರರಂಗದವರು ಜನಪ್ರಿಯ ಪಂಜಾಬಿ ಗಾಯಕನ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಗಾಯನ ಮಾತ್ರವಲ್ಲದೇ ನಟನೆಯಲ್ಲೂ ಗುರುತಿಸಿಕೊಂಡಿದ್ದರು... ಗಾಯಕ ಸುರಿಂದರ್ ಶಿಂದಾ ಅವರು ತಮ್ಮ ಗಾಯನ ವೃತ್ತಿ ಜೀವನದ ಸಂದರ್ಭ, ಅನೇಕ ಪ್ರಸಿದ್ಧ ಹಾಡುಗಳನ್ನು ಹಾಡಿದ್ದಾರೆ. ಗಾಯನ ಮಾತ್ರವಲ್ಲದೇ ನಟನೆಯನ್ನೂ ಮಾಡಿದ್ದಾರೆ. ಪುಟ್ ಜತ್ತನ್ ದೇ, ಉಚಾ ದರ್ ಬಾಬೆ ನಾನಕ್ ದಾ ಮತ್ತು ಬದ್ಲಾ ಜಟ್ಟಿ ದಾ ನಂತಹ ಹಲವಾರು ಪಂಜಾಬಿ ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಶಿಂದಾ ನಿಧನಕ್ಕೆ ಗಣ್ಯರ ಸಂತಾಪ: ಗಾಯಕ ಸುರಿಂದರ್ ಶಿಂದಾ ಅವರ ನಿಧನಕ್ಕೆ ಗಾಯಕರು, ರಾಜಕಾರಣಿಗಳು, ವಿವಿಧ ಕ್ಷೇತ್ರಗಳ ಗಣ್ಯರೂ ಸೇರಿದಂತೆ ಹಲವರು ತೀವ್ರ ಸಂತಾಪ ಸೂಚಿಸಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಟ್ವೀಟ್ ಮಾಡಿದ್ದು, "ಖ್ಯಾತ ಗಾಯಕ ಸುರಿಂದರ್ ಶಿಂದಾ ಜಿ ಸಾವಿನ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಪಂಜಾಬ್ನ ಧ್ವನಿ ಶಾಶ್ವತವಾಗಿ ಮೌನವಾಗಿದೆ" ಎದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ದಕ್ಷಿಣ ಚಿತ್ರರಂಗದತ್ತ ಬಾಲಿವುಡ್ ಮಂದಿಯ ಒಲವು: ವರುಣ್ ಧವನ್ ಸಿನಿಮಾ ನಿರ್ದೇಶಿಸಲಿದ್ದಾರೆ ಅಟ್ಲೀ!
ಸುಖ್ಬೀರ್ ಸಿಂಗ್ ಬಾದಲ್ ಟ್ವೀಟ್: ಪಂಜಾಬಿ ಸಂಗೀತಕ್ಕೆ ಗಾಯಕ ಸುರಿಂದರ್ ಶಿಂದಾ ಅವರ ಕೊಡುಗೆ ಅಮೂಲ್ಯವಾದದ್ದು ಎಂದು ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಹೇಳಿದ್ದಾರೆ. ಟ್ವೀಟ್ ಮೂಲಕ ಸಂತಾಪ ಸೂಚಿಸಿರುವ ಅವರು, "ಅಭಿಮಾನಿಗಳಿಗೆ ಮತ್ತು ಪಂಜಾಬಿ ಗಾಯಕ ಸುರಿಂದರ್ ಶಿಂದಾ ಅವರ ಕುಟುಂಬಕ್ಕೆ ತೀವ್ರ ಸಂತಾಪಗಳು. ಪಂಜಾಬಿ ಸಂಗೀತಕ್ಕೆ ಅವರು ನೀಡಿರುವ ಕೊಡುಗೆ ಅಮೂಲ್ಯವಾದದ್ದು. ಅವರು ಶಕ್ತಿಯುತ ಧ್ವನಿಯನ್ನು ಹೊಂದಿದ್ದರು. ಶಿಂದಾ ಜಿ ಅವರನ್ನು ಜನಗತ್ತಿನಾದ್ಯಂತ ಇರುವ ಅವರ ಲಕ್ಷಾಂತರ ಸಂಖ್ಯೆಯ ಅಭಿಮಾನಿಗಳು ಮಿಸ್ ಮಾಡಿಕೊಳ್ಳಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 'ಅಲ್ಲು ಅರ್ಜುನ್ ಸಿನಿಮಾ ನೋಡ್ತಾ ಬೆಳೆದಿದ್ದೇನೆ' ಎಂದ ಸಾಕ್ಷಿ ಫುಲ್ ಟ್ರೋಲ್! ಧೋನಿ ಪತ್ನಿ ವಯಸ್ಸು ಕೇಳಿದ ನೆಟ್ಟಿಗರು!
ಗಾಯಕ, ನಟ ಹರ್ಭಜನ್ ಮಾನ್ ಕೂಡ ಶಿಂದಾ ಅವರ ಸಾವಿಗೆ ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ. ಪಂಜಾಬಿ ಸಂಗೀತವು ಎಂದಿಗೂ ಪೂರೈಸಲಾಗದಂತಹ ಅಪಾರ ನಷ್ಟವನ್ನು ಅನುಭವಿಸಿದೆ ಎಂದು ಹೇಳಿದ್ದಾರೆ. "ಪಂಜಾಬಿ ಜಾನಪದ ಗಾಯನದ ಸುವರ್ಣ ಯುಗ ಅಂತ್ಯವಾಗಿದೆ" ಎಂದು ಮಾನ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.