ನಗು ಮುಖದ ಒಡೆಯ ಹಾಗೂ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಒಂದೂವರೆ ವರ್ಷ ಆಗ್ತಾ ಬರ್ತಾ ಇದೆ. ಆದರೆ, ಈ ಪರಮಾತ್ಮನ ಬಗ್ಗೆ ಅಭಿಮಾನಿಗಳು ದಿನ ನಿತ್ಯ ಪೂಜೆ ಮಾಡೋದನ್ನು ಮಾತ್ರ ನಿಲ್ಲಿಸಿಲ್ಲ. ಯಾಕೆಂದರೆ ಪವರ್ ಸ್ಟಾರ್ ಬದುಕಿದ ರೀತಿ ಹಾಗೂ ಮಾಡಿರೋ ಸಹಾಯ ಮತ್ತು ಒಳ್ಳೆ ಕೆಲಸಗಳು ಪುನೀತ್ ರಾಜ್ ಕುಮಾರ್ ಅವರನ್ನು ಇನ್ನೂ ನೆನಪಿಸುತ್ತಲೇ ಇವೆ.
ಈಗಾಗಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅವರ ಅಭಿಮಾನಿಗಳು ತಮ್ಮ ಏರಿಯಾ ಹಾಗು ಊರುಗಳ ರಸ್ತೆಗೆ ಪುನೀತ್ ರಾಜ್ ಕುಮಾರ್ ಹೆಸರನ್ನು ಇಡುವ ಮೂಲಕ ಅಪ್ಪು ಹೆಸರನ್ನು ಶಾಶ್ವತವಾಗಿಸಿದ್ದಾರೆ. ಈಗ ಬೆಂಗಳೂರಿನ ರಿಂಗ್ ರಸ್ತೆಗೆ ಪವರ್ ಸ್ಟಾರ್ ಹೆಸರು ಇಡಲು ವೇದಿಕೆ ಸಿದ್ಧವಾಗಿದೆ. ಈ ವಿಷಯವಾಗಿ ಕಂದಾಯ ಸಚಿವ ಆರ್ ಅಶೋಕ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸುದ್ದಿಗೋಷ್ಠಿ ಮಾಡಿದರು. ಅಧ್ಯಕ್ಷ್ಯ ಭಾ.ಮಾ ಹರೀಶ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಚೇಂಬರ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಚಿವ ಆರ್ ಅಶೋಕ್ ಮಾತನಾಡಿ, ಬೆಂಗಳೂರಿನ ನಾಯಂಡಹಳ್ಳಿ ಜಂಕ್ಷನ್ನಿಂದ ವೆಗಾ ಸಿಟಿ ಮಾಲ್ ಜಂಕ್ಷನ್ವರೆಗೂ ಪುನೀತ್ ರಾಜ್ ಕುಮಾರ್ ಹೆಸರನ್ನು ನಾಮಕರಣ ಮಾಡಲಾಗಿದೆ. ಸುಮಾರು 12 ಕಿಲೋಮೀಟರ್ ಉದ್ದ ಇರುವ ಈ ರಸ್ತೆಗೆ ಅಪ್ಪು ಹೆಸರಿಡಲಾಗಿದೆ. ಇಷ್ಟು ಉದ್ದದ ರಸ್ತೆಗೆ ಇದುವರೆಗೂ ಯಾರ ಹೆಸರು ಇಟ್ಟಿಲ್ಲ. ಇದೀಗ ಮೊದಲ ಬಾರಿಗೆ ಅಪ್ಪು ಹೆಸರಿಡಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.
ಹಳ್ಳಿ ಹಳ್ಳಿಗಳಲ್ಲೂ ಪುನೀತ್ ಫೋಟೋ: ಇನ್ನು ಪುನೀತ್ ಅವರು ನಮ್ಮ ಮಧ್ಯೆ ಇಲ್ಲ. ನಾನು ಇತ್ತೀಚಿಗೆ ಲಂಬಾಣಿ ತಾಂಡಗಳಿಗೆ ಭೇಟಿ ಕೊಟ್ಟಿದ್ದೆ, ಹಳ್ಳಿ ಹಳ್ಳಿಗಳಲೂ ಪುನೀತ್ ರಾಜ್ ಕುಮಾರ್ ಅವರ ಫೋಟೊ ಇದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ವಿಧಾನಸೌಧದ ಮುಂಭಾಗ ಕರ್ನಾಟಕ ಪ್ರಶಸ್ತಿ ಕೊಟ್ಟು ಗೌರವಿಸಿದ್ದಾರೆ. ನಮ್ಮ ಪುಣ್ಯ ಅನ್ಕೊತೀನಿ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟಾಗ ಮಳೆ ಬಂದಿತ್ತು. ಪುನೀತ್ ಅವರಿಗೆ ಕೊಟ್ಟಾಗಲೂ ಅಲ್ಲಿ ಮಳೆ ಬಂದು ನಮಗೆ ಆಶೀರ್ವಾದ ಮಾಡಿತು ಎಂದು ಹೇಳಿದರು.
ನಾಳೆ ಉದ್ಘಾಟನೆ: ಪುನೀತ್ ರಾಜ್ ಕುಮಾರ್ ಬಡವರು, ಅನಾಥಾಶ್ರಮಗಳ ಬಗ್ಗೆ ಹೆಚ್ಚು ಕಾಳಜಿ ಇದ್ದಂತ ವ್ಯಕ್ತಿ. ತುಂಬಾ ನಟರು ಕೋಟಿ ಕೋಟಿ ಹಣ ಪಡೆದು ಪಾನ್ ಮಸಾಲಗಳ ಜಾಹೀರಾತಿನಲ್ಲಿ ಕಾಣಿಸ್ತಾರೆ. ಆದರೆ ಅಪ್ಪು ರೈತರಿಗಾಗಿ ಹಾಗು ನಂದಿನಿ ಜಾಹೀರಾತನ್ನು ಉಚಿತವಾಗಿ ಮಾಡ್ತಾ ಇದ್ರು. ನಾಯಂಡಹಳ್ಳಿ ಜಕ್ಷಂನ್ನಿಂದ ವೆಗಾ ಸಿಟಿ ಜಂಕ್ಷನ್ವರೆಗೂ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಹೆಸರಿಡಲು ಕಡತ ಕಳಿಸಿದ್ದೆ. ಮುಖ್ಯಮಂತ್ರಿಗಳು ಅನುಮತಿ ಕೊಟ್ಟಿದ್ದಾರೆ. ನಾಳೆ ರಸ್ತೆಗೆ ಅಪ್ಪು ಹೆಸರನ್ನಿಟ್ಟು ಉದ್ಘಾಟನೆ ಮಾಡಲಾಗುತ್ತದೆ ಎಂದು ಹೇಳಿದರು.
ವಾಜಪೇಯಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ: ಪದ್ಮನಾಭ ನಗರದ ಅಟಲ್ ಬಿಹಾರ್ ವಾಜಪೇಯಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯುತ್ತದೆ. ಮುಖ್ಯಮಂತ್ರಿ ಹಾಗೂ ಕೆಲವು ಸಚಿವರು, ಇಡೀ ಚಿತ್ರರಂಗ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಗೀತ ನಿರ್ದೇಶಕರಾದ ಗುರು ಕಿರಣ್, ಸಾಧು ಕೋಕಿಲ, ರಘು ದೀಕ್ಷಿತ್, ಶಮಿತಾ ಮಲ್ನಾಡ್ ಸೇರಿದಂತೆ ಸುಮಾರು 17 ಸೆಲೆಬ್ರಿಟಿಗಳಿಂದ ಗಾಯನ ಇರಲಿದೆ. ಈ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೂ ಭಾಗಿಯಾಗಲಿದ್ದಾರೆ. ನಾನು ಸಣ್ಣ ಹುಡುಗ ಇದ್ದಾಗ ರಾಜ್ ಕುಮಾರ್ ಅಭಿಮಾನಿ ಸಂಘಕ್ಕೆ ಅಧ್ಯಕ್ಷನಾಗಿದ್ದೆ. ನಮ್ಮ ಮನೆಗೂ ಅಣ್ಣಾವ್ರು ಬಂದಿದ್ರು ಅವಾಗ ಭೇಟಿ ಮಾಡಿದ್ದೆ ಎಂದರು.
ಇದರ ಜೊತೆಗೆ ಸಚಿವ ಆರ್ ಅಶೋಕ್, ನಟ ಸುದೀಪ್ ಅವರ ಜೊತೆಗಿನ ಒಡನಾಟವನ್ನು ಹಂಚಿಕೊಂಡರು. ಸುದೀಪ್ ನಮ್ಮ ಮನೆಗೆ ರೆಗ್ಯೂಲರ್ ಆಗಿ ಬರ್ತಿದ್ರು. ಕೇಂಪೆಗೌಡ ಸಿನಿಮಾ ಮಾಡಬೇಕಾದ್ರೆ. ನನಗೆ ಹೋಮ್ ಮಿನಿಸ್ಟರ್ ಪಾತ್ರ ಮಾಡೋಕೆ ಹೇಳಿದ್ರು, ಮೊದಲು ಬೇಡ ಅಂದು ಆಮೇಲೆ ಒಪ್ಪಿಕೊಂಂಡೆ. ವಿಧಾನ ಸೌದ ಮುಂಭಾಗದಲ್ಲಿ ಶೂಟಿಂಗ್ ಮಾಡಬೇಕಾಯಿತ್ತು. ಆದರೆ ಕಾರಣಾಂತರಗಳಿಂದ ಮಾಡೋದಿಕ್ಕೆ ಆಗಲಿಲ್ಲ ಎಂದು ಅಶೋಕ್ ಚಿತ್ರರಂಗದವರ ಜೊತೆಗಿರುವ ಒಡನಾಟವನ್ನು ಹಂಚಿಕೊಂಡರು.
ಇದನ್ನೂ ಓದಿ: ಇಂದು ಲತಾ ಮಂಗೇಶ್ಕರ್ ಪುಣ್ಯತಿಥಿ: ಮುಂಬೈನಲ್ಲಿ ನಿರ್ಮಾಣವಾಗಲಿದೆ 'ಗಾನಕೋಗಿಲೆ' ಸ್ಮಾರಕ