ಬೆಂಗಳೂರು: ದಕ್ಷಿಣ ಭಾರತದ ಜನಪ್ರಿಯ ನಟಿ ಅನುಷ್ಕಾ ಶೆಟ್ಟಿ ಸೇರಿದಂತೆ ಬಹುತಾರಾಗಣದ ರುದ್ರಮದೇವಿ ತೆಲಗು ಚಿತ್ರದ ಬಿಡುಗಡೆಗಾಗಿ ಸಾಲದ ರೂಪದಲ್ಲಿ ಪಡೆದಿದ್ದ ನಗದಿಗೆ ಬದಲಾಗಿ ನೀಡಿದ್ದ ಚೆಕ್‌ಗಳು ಅಮಾನ್ಯಗೊಂಡ ಪ್ರಕರಣದಲ್ಲಿ ನಡೆದ ನ್ಯಾಯಾಂಗ ಹೋರಾಟದಲ್ಲಿ ನಿರ್ಮಾಪಕ ಕೆ.ಮಂಜು ಜಯ ಗಳಿಸಿದ್ದಾರೆ.
ಚಿತ್ರದ ಬಿಡುಗಡೆಗಾಗಿ ಹೊಸಪೇಟೆಯ ಕಿಶೋರ್ ಎಂಬುವವರಿಗೆ ಮಂಜು ಅವರಿಂದ ಪಡೆದಿದ್ದ 20 ಲಕ್ಷ ಹಣಕ್ಕೆ ಬದಲಾಗಿ ನೀಡಿದ್ದ ಚೆಕ್‌ಗಳು ಬೌನ್ಸ್ ಆದ ಪ್ರಕರಣದಲ್ಲಿ ತಕ್ಷಣ ಹಣ ಹಿಂದಿರುಗಿಸದಿದ್ದಲ್ಲಿ ಆರು ತಿಂಗಳ ಕಾಲ ಸಾಧಾರಣ ಶಿಕ್ಷೆಗೆ ಗುರಿಯಾಗಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಚಿತ್ರ ನಿರ್ಮಾಪಕ ಕೆ ಮಂಜು ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ಕಿಶೋರ್ ಎಂಬುವರಿಗೆ ಮ್ಯಾಜಿಸ್ಟ್ರೇಟ್ ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ಸೆಷನ್ಸ್ ನ್ಯಾಯಾಲಯ ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಕಿಶೋರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಎಚ್.ವಿ. ಪ್ರಭಾಕರ ಶಾಸ್ತ್ರಿ ಅವರಿದ್ದ ನ್ಯಾಯಪೀಠ, ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಖಾಯಂಗೊಳಿಸಿ ಆದೇಶಿಸಿದೆ.
ಅಲ್ಲದೇ, ಅರ್ಜಿದಾರರು ಪ್ರತಿವಾದಿಗಳಿಗೆ ತಕ್ಷಣ 20,05,000 ರೂ..ಗಳನ್ನು ಪಾವತಿಸಬೇಕು. ಇಲ್ಲವಾದಲ್ಲಿ ಆರು ತಿಂಗಳ ಕಾಲ ಸರಳ ಜೈಲು ಶಿಕ್ಷೆಗೆ ಒಳಗಾಗಬೇಕು ಎಂದು ತಿಳಿಸಿರುವ ಹೈಕೋರ್ಟ್, ವಿಚಾರಣಾ ನ್ಯಾಯಾಲಯ ನೀಡಿರುವ ಆದೇಶದಲ್ಲಿ ಮಧ್ಯ ಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದೆ.
ಪ್ರಕರಣದ ಹಿನ್ನೆಲೆ: 2015ರ ಜುಲೈ ತಿಂಗಳಲ್ಲಿ ಕಿಶೋರ್ ಅವರು ರುದ್ರಮದೇವಿ ಚಿತ್ರ ಬಿಡುಗಡೆಗೆ ಕೆ.ಮಂಜು ಅವರಿಂದ 20 ಲಕ್ಷ ರೂ.ಗಳನ್ನು ಪಡೆದು ಮುಂದಿನ ಎರಡು ತಿಂಗಳಲ್ಲಿ ಹಿಂದಿರುಗಿಸುವುದಾಗಿ ತಿಳಿಸಿದ್ದರು. ಇದಕ್ಕೆ ಪ್ರತಿಯಾಗಿ ಎರಡು ಚೆಕ್‌ಗಳನ್ನು ನೀಡಿದ್ದರು. ಆದರೆ, ಕಾಲ ಮೀರಿದರೂ ಕಿಶೋರ್ ಅವರು ಹಣ ಹಿಂದಿರುಗಿಸಿರಲಿಲ್ಲ. ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಆ ಚೆಕ್‌ಗಳನ್ನು ಬ್ಯಾಂಕ್‌ಗೆ ಸಲ್ಲಿಸಿದ್ದರೂ, ಚೆಕ್‌ಗಳ ಮೇಲೆ ಹಣ ವಿತರಣೆ ಮಾಡುವುದನ್ನು ತಡೆಯಲಾಗಿದೆ ಎಂದು ಹಿಂತಿರುಗಿಸಲಾಗಿತ್ತು. ಇದರಿಂದ ಕೆ.ಮಂಜು ಅವರು ಕಿಶೋರ್ ಅವರಿಗೆ ಲೀಗಲ್ ನೋಟಿಸ್ ಜಾರಿ ಮಾಡಿದರೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿರಲಿಲ್ಲ. ಹೀಗಾಗಿ ವಿಚಾರಣಾ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು.
ಇದನ್ನೂ ಓದಿ: ಗೆಳೆಯ ನೂಪುರ್ ಶಿಖರೆ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಅಮೀರ್ ಖಾನ್ ಪುತ್ರಿ ಇರಾ ಖಾನ್
ದೂರಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಕಿಶೋರ್ ಅವರನ್ನು ದೋಷಿ ಎಂದು ಪ್ರಕಟಿಸಿತ್ತು. ಇದನ್ನು ಪ್ರಶ್ನಿಸಿ ಕಿಶೋರ್ ಅವರು 69ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಸೆಷನ್ಸ್ ನ್ಯಾಯಾಲಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಕಿಶೋರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿ ವಜಾಗೊಳಿಸಿದ್ದು, ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.
ಇದನ್ನೂ ಓದಿ: ವೀರ ಸಿಂಧೂರ ಲಕ್ಷ್ಮಣ ಪಾತ್ರಕ್ಕೆ ಡಾಲಿ ಧನಂಜಯ್