'ಪರುತಿವೀರನ್' ಸಿನಿಮಾ ಸಂದರ್ಭ ಭುಗಿಲೆದ್ದ ನಿರ್ಮಾಪಕ ಕೆ.ಇ ಜ್ಞಾನವೇಲ್ ರಾಜಾ ಹಾಗೂ ನಿರ್ದೇಶಕ ಅಮೀರ್ ನಡುವಿನ ದೀರ್ಘಕಾಲದ ವಿವಾದಕ್ಕೆ ಸಂಬಂಧಿಸಿದಂತೆ ಚಲನಚಿತ್ರೋದ್ಯಮದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. 17 ವರ್ಷಗಳಿಂದ ಇರುವ ಭಿನ್ನಾಭಿಪ್ರಾಯಗಳು ಇತ್ತೀಚೆಗೆ ಸಾರ್ವಜನಿಕವಾಗಿಯೂ ಪ್ರದರ್ಶನಗೊಂಡಿತ್ತು. ತಮ್ಮ ಅಸಮಾಧಾನ ಹೊರಹಾಕಿದ್ದು, ವಿವಾದ ಉಲ್ಬಣಗೊಂಡಿತ್ತು. ಆದ್ರೀಗ ನಿರ್ಮಾಪಕ ಕೆ.ಇ ಜ್ಞಾನವೇಲ್ ರಾಜಾ ಅವರ ಹೇಳಿಕೆ, ಎಲ್ಲವೂ ಸರಿಯಾಗುವ ಸೂಚನೆ ಕೊಟ್ಟಿದೆ.
ನಿರ್ಮಾಪಕ ಕೆ.ಇ ಜ್ಞಾನವೇಲ್ ರಾಜಾ ಅವರು ಹೇಳಿಕೆ ಬಿಡುಗಡೆ ಮಾಡಿದ್ದು, ನಿರ್ದೇಶಕ ಅಮೀರ್ ಅವರ ಬಗ್ಗೆ ಮಾಡಿದ ಕಾಮೆಂಟ್‌ಗಳಿಗೆ ವಿಷಾದ ವ್ಯಕ್ತಪಡಿಸಿದ್ದಾರೆ. ತಮ್ಮ ನಡುವೆ ಉತ್ತಮ ಸಂಬಂಧ ಇದ್ದಿದ್ದನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಅಮೀರ್ ಅವರನ್ನು 'ಅಮೀರ್ ಅಣ್ಣ' ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸಮಸ್ಯೆ ಬಗ್ಗೆ ಚರ್ಚಿಸುವುದನ್ನು ಬಿಟ್ಟುಬಿಟ್ಟಿರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಅಲ್ಲದೇ, ತಮ್ಮ ಪ್ರತಿಕ್ರಿಯೆಗಳಿಂದ ನೋವುಂಟಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಜ್ಞಾನವೇಲ್ ರಾಜಾ ಅವರು ತಮ್ಮ ಜೀವನದ ಪ್ರಮುಖ ಭಾಗವಾಗಿರುವ 'ಚಲನಚಿತ್ರೋದ್ಯಮ'ದ ಬಗ್ಗೆ ಅಪಾರ ಗೌರವ ಹೊಂದಿರುವುದಾಗಿ ತಿಳಿಸಿದ್ದಾರೆ.
ಈ ವಿವಾದ ಸಿನಿಮಾ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ಕೆಲವರು ನಿರ್ಮಾಪಕರನ್ನು ಬೆಂಬಲಿಸಿದ್ದಾರೆ, ಕೆಲವರು ನಿರ್ದೇಶಕ ಅಮೀರ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. 'ಪರುತಿವೀರನ್' ಸಿನಿಮಾದ ಆಂತರಿಕ ವಿಚಾರವಾಗಿ ವಿವಾದ ಉದ್ಭವಿಸಿತ್ತು.
ಇದನ್ನೂ ಓದಿ: ಧನ್ವೀರ್ 'ಕೈವ' ಸಿನಿಮಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್: ಟ್ರೇಲರ್ ಅನಾವರಣ
ಅಮೀರ್ ಆ್ಯಕ್ಷನ್ ಕಟ್ ಹೇಳಿದ್ದ 'ಪರುತಿವೀರನ್' ಸಿನಿಮಾ 2007ರ ಫೆಬ್ರವರಿ 23ರಂದು ತೆರೆಕಂಡು ಸೂಪರ್ ಹಿಟ್ ಆಗಿತ್ತು. ನಟ ಕಾರ್ತಿ ಅವರ ಚೊಚ್ಚಲ ಚಿತ್ರವಿದು. ರಾಷ್ಟ್ರಪ್ರಶಸ್ತಿ ಪಡೆದ 'ಪರುತಿವೀರನ್' ಚಿತ್ರ ಇಂದಿಗೂ ತಮಿಳು ಚಿತ್ರರಂಗದ ಪ್ರಮುಖ ಚಿತ್ರವಾಗಿ ಉಳಿದಿದೆ. ನಿರ್ಮಾಣದ ಸಂದರ್ಭ ನಿರ್ದೇಶಕ ಅಮೀರ್ ಹಾಗೂ ನಿರ್ಮಾಪಕ ಜ್ಞಾನವೇಲ್ ರಾಜಾ ನಡುವೆ ಭಿನ್ನಾಭಿಪ್ರಾಯಗಳು ಮೂಡಿದ್ದವು. ಅಲ್ಲದೇ, ಚಿತ್ರದ ಬಜೆಟ್ಗೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಿರುವಾಗ ಇತ್ತೀಚೆಗಷ್ಟೇ ಯೂಟ್ಯೂಬ್ ಚಾನೆಲ್ ಒಂದಕ್ಕೆ ನಿರ್ಮಾಪಕ ಜ್ಞಾನವೇಲ್ ರಾಜಾ ನೀಡಿದ್ದ ಸಂದರ್ಶನದಲ್ಲಿ ನಿರ್ದೇಶಕ ಅಮೀರ್ ಅವರ ಬಗ್ಗೆ ಕೆಲ ಆರೋಪಗಳನ್ನು ಮಾಡಿದ್ದರು. ಇದು ಚಿತ್ರರಂಗದಲ್ಲಿ ಪರ ವಿರೋಧ ಚರ್ಚೆಗೆ ವೇದಿಕೆ ಸೃಷ್ಟಿಮಾಡಿಕೊಟ್ಟಿದೆ. ಇದೀಗ ನಿರ್ಮಾಪಕರು ನಿರ್ದೇಶಕರಲ್ಲಿ ಕ್ಷಮೆಯಾಚಿಸಿದ್ದಾರೆ.
ಇದನ್ನೂ ಓದಿ: 'ಆಡುಜೀವಿತಂ'ಗಾಗಿ 30 ಕೆ.ಜಿ ತೂಕ ಇಳಿಸಿದ ಪೃಥ್ವಿರಾಜ್ ಸುಕುಮಾರನ್
ನಿರ್ದೇಶಕರ ಪರ ನಿಂತ ಹಲವರು ನಿರ್ಮಾಪಕರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದರು. ಕೊನೆಯವರೆಗೂ ಮೌನ ವಹಿಸಿದ್ದ ಜ್ಞಾನವೇಲ್ ರಾಜಾ ಇದೀಗ ಈ ಬಗ್ಗೆ ಹೇಳಿಕೆ ಹೊರಡಿಸಿದ್ದಾರೆ. ಅದರಲ್ಲಿ ಕಳೆದ 17 ವರ್ಷಗಳಿಂದ 'ಪರುತಿವೀರನ್' ಸಿನಿಮಾದ ಸಮಸ್ಯೆ ಇದೆ. ಈವರೆಗೂ ನಾನು ಅದರ ಬಗ್ಗೆ ಮಾತನಾಡಿಲ್ಲ. ಅವರನ್ನು ಯಾವಾಗಲೂ 'ಅಮೀರ್ ಅಣ್ಣ' ಎಂದೇ ಕರೆಯುತ್ತೇನೆ. ಮೊದಲಿನಿಂದಲೂ ಅವರು ನಮ್ಮ ಕುಟುಂಬಕ್ಕೆ ಹತ್ತಿರವಾಗಿದ್ದರು. ಆದ್ರೆ ಇತ್ತೀಚಿನ ಸಂದರ್ಶನಗಳಲ್ಲಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದು, ನನಗೆ ಬಹಳ ನೋವಾಗಿತ್ತು. ಅವರಿಗೆ ಪ್ರತ್ಯುತ್ತರ ನೀಡುವ ಬರದಲ್ಲಿ ನಾನು ಬಳಸಿದ ಕೆಲ ಪದಗಳು ಅವರಿಗೆ ನೋವುಂಟುಮಾಡಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ನನ್ನನ್ನು ಬದುಕುವಂತೆ ಮಾಡಿದ ಸಿನಿಮಾ ಇಂಡಸ್ಟ್ರಿ ಮತ್ತು ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ತಿಳಿಸಿದರು.