ರಾಜ್ಯಾದ್ಯಂತ ಕಾವೇರಿ ಕಿಚ್ಚು ಜೋರಾಗಿದೆ. ದಿನದಿಂದ ದಿನಕ್ಕೆ ರೈತರು ಹಾಗೂ ಕನ್ನಡ ಪರ ಸಂಘಟನೆಗಳ ಹೋರಾಟ ಜಾಸ್ತಿಯಾಗುತ್ತಿದೆ. ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕ್ರಮ ಖಂಡಿಸಿ ನಾಳೆ ರಾಜ್ಯ ಬಂದ್ ನಡೆಯಲಿದೆ. ಈ ಮಧ್ಯೆ ತಮಿಳು ನಟ ಸಿದ್ಧಾರ್ಥ್ ಅವರಿಗೂ ಕಾವೇರಿ ಬಿಸಿ ತಟ್ಟಿದೆ.
ಇಂದು ತಮ್ಮ ನಟನೆಯ 'ಚಿಕ್ಕು' ಸಿನಿಮಾದ ಪ್ರಚಾರಕ್ಕಾಗಿ ಸಿದ್ಧಾರ್ಥ್ ಅವರು ಬೆಂಗಳೂರಿಗೆ ಬಂದಿದ್ದರು. ಮಲ್ಲೇಶ್ವರಂನ ಎಸ್ಆರ್ವಿ ಚಿತ್ರಮಂದಿರದಲ್ಲಿ ಸಿನಿಮಾ ಪ್ರೆಸ್ಮೀಟ್ ಆಯೋಜನೆ ಮಾಡಲಾಗಿತ್ತು. ಈ ವೇಳೆ ಅಲ್ಲಿಗೆ ಆಗಮಿಸಿದ ಕನ್ನಡ ಪರ ಹೋರಾಟಗಾರ ನಿಂಗರಾಜು ಗೌಡ ಹಾಗೂ ಕರವೇ ಸ್ವಾಭಿಮಾನಿ ಸೇನೆ ತಂಡ ಮಾಧ್ಯಮಗೋಷ್ಟಿಗೆ ವಿರೋಧ ವ್ಯಕ್ತಪಡಿಸಿತು.
ಕಾವೇರಿ ನೀರಿನ ವಿಚಾರವಾಗಿ ಹೋರಾಟ ನಡೆಯುತ್ತಿದೆ. ಈ ಸಂದರ್ಭದಲ್ಲಿ ತಮಿಳು ಸಿನಿಮಾದ ಪ್ರೆಸ್ಮೀಟ್ ಬೇಕಾ? ತಮಿಳು ಸಿನಿಮಾ ಪ್ರಚಾರದ ಅವಶ್ಯಕತೆ ಏನಿದೆ? ಇದಕ್ಕೆ ನಮ್ಮ ವಿರೋಧ ಇದೆ ಎಂದು ಆಕ್ರೋಶ ಹೊರಹಾಕಿದರು. ಈ ಹಿನ್ನೆಲೆಯಲ್ಲಿ ಪ್ರೆಸ್ಮೀಟ್ನಿಂದ ನಟ ಸಿದ್ಧಾರ್ಥ್ ಹೊರನಡೆದರು.
ಇದನ್ನೂ ಓದಿ: ಕಾವೇರಿ ಹೋರಾಟಕ್ಕೆ ಸ್ಯಾಂಡಲ್ವುಡ್ ಬೆಂಬಲ: ಸುದೀಪ್, ದರ್ಶನ್, ಶಿವಣ್ಣ ಹೇಳಿದ್ದೇನು?
ಇಂದು ತೆರೆ ಕಂಡ 'ಚಿಕ್ಕು': ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲಿ ತಮ್ಮ ನಟನೆಯಿಂದ ಜನಪ್ರಿಯರಾಗಿರುವ ನಟ ಸಿದ್ಧಾರ್ಥ್. ಇವರ 'ಚಿಕ್ಕು' ಸಿನಿಮಾ ಇಂದು ಬಿಡುಗಡೆಯಾಗಿದೆ. ಇದರಲ್ಲಿ ಸಿದ್ಧಾರ್ಥ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ವೃತ್ತಿಜೀವನದಲ್ಲೇ ಇದೊಂದು ಹೊಸ ಮೈಲಿಗಲ್ಲು ಎಂದು ಹೇಳಲಾಗುತ್ತಿದೆ. ಚಿತ್ರದಲ್ಲೊಂದು ಅದ್ಭುತವಾದ ಸಂದೇಶವಿದೆ.
ಈ ಹಿಂದೆ ತಮಿಳಿನಲ್ಲಿ 'ಪನ್ನೈಯಾರುಂ ಪದ್ಮಿನಿಯುಂ' ನಂತಹ ವಿಭಿನ್ನ ಚಿತ್ರವನ್ನು ನಿರ್ದೇಶಿಸಿದ್ದ ಎಸ್ ಯು ಅರುಣ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಿದ್ಧಾರ್ಥ್, ನಿಮಿಷಾ ಸುಜಯನ್ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ದಿಬು ನಿನಾನ್ ಥಾಮಸ್ ಸಂಗೀತ ನಿರ್ದೇಶನ ಮಾಡಿದ್ದು, ಬಾಲಾಜಿ ಸುಬ್ರಹ್ಮಣ್ಯಂ ಅವರ ಛಾಯಾಗ್ರಹಣವಿದೆ. ಈ ಸಿನಿಮಾವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದೆ.
ಇದನ್ನೂ ಓದಿ: ಕಾವೇರಿ ಮೇಲೆ ಮೊದಲ ಹಕ್ಕು ನಮ್ಮದೇ: ನಟ ಉಪೇಂದ್ರ
ನಾಳೆ ಕರ್ನಾಟಕ ಬಂದ್: ಕಳೆದ ಮಂಗಳವಾರ ಕಾವೇರಿಗಾಗಿ ನಮ್ಮ ರಾಜ್ಯ ರಾಜಧಾನಿ ಬಂದ್ ಆಗಿತ್ತು. ನಾಳೆ ಕರ್ನಾಟಕ ಬಂದ್ಗೆ ಸಕಲ ಸಿದ್ಧತೆ ನಡೆದಿದೆ. ಕನ್ನಡ ಒಕ್ಕೂಟಗಳು ಕರೆ ಕೊಟ್ಟಿರುವ ಕರ್ನಾಟಕ ಬಂದ್ಗೆ ಚಿತ್ರರಂಗ ಕೈ ಜೋಡಿಸಿದೆ. ಹಿರಿಯ ನಟ ಡಾ. ಶಿವರಾಜ್ಕುಮಾರ್ ನೇತೃತ್ವದಲ್ಲಿ ಇಡೀ ಚಿತ್ರರಂಗ ನಾಳೆಯ ಹೋರಾಟದಲ್ಲಿ ಭಾಗಿಯಾಗಲಿದೆ. ಶೂಟಿಂಗ್ ಜೊತೆ ಥಿಯೇಟರ್ ಕೂಡ ಕ್ಲೋಸ್ ಆಗಲಿವೆ. ಇಂದು ಬಿಡುಗಡೆಯಾಗಿರುವ ಕೆಲವು ಸಿನಿಮಾಗಳು ನಾಳೆ ಬಂದ್ ಹಿನ್ನೆಲೆ ಕಲೆಕ್ಷನ್ ವಿಚಾರದಲ್ಲಿ ತೊಂದರೆ ಅನುಭವಿಸಲಿದೆ.