ಪಾತ್ರ ಯಾವುದೇ ಆಗಿರಲಿ, ಇವರಿಗೆ ಅದು ಕಠಿಣವಲ್ಲ. ಕೊಟ್ಟ ಅವಕಾಶವನ್ನು ಚೆನ್ನಾಗಿಯೇ ಉಪಯೋಗಿಸಿಕೊಂಡು ಸ್ಯಾಂಡಲ್ವುಡ್ನ ಭರವಸೆಯ ಕಲಾವಿದರಾಗಿ ಗುರುತಿಸಿಕೊಂಡವರು ಪ್ರಮೋದ್ ಶೆಟ್ಟಿ. ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ರಿಕ್ಕಿ, ಬೆಲ್ ಬಾಟಂ, ಅವನೇ ಶ್ರೀಮನ್ನಾರಾಯಣ, ತೂತುಮಡಿಕೆ, ಕಾಂತಾರ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿ ತಮ್ಮ ಅಮೋಘ ಮತ್ತು ಅತ್ಯದ್ಭುತ ಅಭಿನಯದ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.
![karikaanu guddada melondu adhika prasanga](https://etvbharatimages.akamaized.net/etvbharat/prod-images/01-09-2023/kn-bng-08-different-stotyya-cinemadhali-pramodhu-shetty-7204735_31082023204106_3108f_1693494666_639.jpg)
'ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ': ಪ್ರಮೋದ್ ಶೆಟ್ಟಿ ಅವರು ರಿಷಬ್ ಶೆಟ್ಟಿ ನಿರ್ಮಾಣದ 'ಲಾಫಿಂಗ್ ಬುದ್ಧ' ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ, ನಿರ್ದೇಶಕ ರಮೇಶ್ ಬೇಗಾರ್ ರಚಿಸಿ, ನಿರ್ದೇಶಿಸಿರುವ 'ಜಲಪಾತ' ಚಿತ್ರದಲ್ಲಿ ಪ್ರತಿಭಾವಂತ ನಟ ಒಂದು ಪರಿಪೂರ್ಣ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಅವರು ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ 'ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ' ಎಂದು ಶೀರ್ಷಿಕೆ ಇಡಲಾಗಿದೆ. ನಿನ್ನೆ ಪ್ರಮೋದ್ ಶೆಟ್ಟಿ ಅವರ ಹುಟ್ಟುಹಬ್ಬವಿತ್ತು. ಅವರ ಜನ್ಮದಿನದ ಅಂಗವಾಗಿ 'ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ' ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಇದನ್ನೂ ಓದಿ: ಪ್ರಮೋದ್ ಶೆಟ್ಟಿ- ಯುವ ಪ್ರತಿಭೆ ರೋಹಿತ್ ನಟನೆಯ 'ರಕ್ತಾಕ್ಷ' ಸಿನಿಮಾದ ಮಾಸ್ ಟೀಸರ್ ರಿಲೀಸ್
ಚಿತ್ರಕಥೆ: 'ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ' ಚಿತ್ರವು ಒಂದು ಊರಿನಲ್ಲಿ ನಡೆದ ಅಪಾರ್ಥವೂ ಅನಾಹುತವಾಗಿ, ಆ ಅನಾಹುತವು ಅಧಿಕ ಪ್ರಸಂಗವಾಗಿ ನಡೆಯುವ ಘಟನೆಗಳ ಸುತ್ತ ಸಿನಿಮಾ ಸಾಗುತ್ತದೆ. ವಡ್ಡಾರಾಧಕ ಹಾಗೂ ಶಬರಿ ಎಂಬ ಎರಡು ಕಿರು ಚಿತ್ರಗಳನ್ನು ನಿರ್ದೇಶಿಸಿದ್ದ ಯುವ ಪ್ರತಿಭೆ ಅನೀಶ್ ಶರ್ಮ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಾಘು ಶಿವಮೊಗ್ಗ, ಕಿರಣ್ ನಾಯಕ್, ಮಂಜುನಾಥ್ ಹೆಗಡೆ, ಕೆಜಿ ಕೃಷ್ಣಮೂರ್ತಿ, ಚಂದ್ರಕಲಾ ಚಿತ್ರದ ಭಾಗವಾಗಿದ್ದಾರೆ.
ಇಡೀ ಊರನ್ನೇ ಸಿನಿಮಾ ಸೆಟ್ಟನಾಗಿಸಿಕೊಂಡ ಚಿತ್ರತಂಡ: ಶಿವಮೊಗ್ಗ ಜಿಲ್ಲೆಯ ಇಡುವಾಣಿ ಎನ್ನುವ ಒಂದು ಹಳ್ಳಿಯಲ್ಲಿ ಇಡೀ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಇಡೀ ಊರಿಗೆ ಊರನ್ನೇ ಸಿನಿಮಾ ಸೆಟ್ಟನಾಗಿಸಿಕೊಂಡು ಊರಿನ ಜನರನ್ನೇ ಉಪಯೋಗಿಸಿಕೊಂಡು ಶೂಟಿಂಗ್ ಮಾಡಲಾಗಿದೆ. ಚಿತ್ರಕ್ಕೆ ಸುಮತ್ ಶರ್ಮಾ ಛಾಯಾಗ್ರಹಣ, ಸಂಜೀವ್ ಜಾಗೀರ್ದಾರ್ ಸಂಕಲನ, ಚೇತನ್ ಕುಮಾರ್ ಸಂಗೀತವಿದೆ. ಗನ್ನಿ ಬ್ಯಾಗ್ ಸ್ಟುಡಿಯೋ ಪ್ರೊಡಕ್ಷನ್ಸ್ ಅಡಿ ಚಿತ್ತರಂಜನ್ ಕಶ್ಯಪ್, ವಲ್ಲಭ್ ಸೂರಿ, ಸುನಿತ್ ಹಲಗೇರಿ ನಿರ್ಮಾಣ ಮಾಡಿದ್ದು, ಊರ್ ಮನೆ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಸಾಥ್ ಕೊಟ್ಟಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.
ಇದನ್ನೂ ಓದಿ: Jalapatha Movie: 'ಪ್ರಮೋದ್ ಶೆಟ್ಟಿ' ಹೊಸ ಅವತಾರಕ್ಕೆ ಅಭಿಮಾನಿಗಳು ಫಿದಾ