'ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ' ಎಂಬ ಟ್ಯಾಗ್ಲೈನ್ ಹೊಂದಿರುವ 'ಪ್ರಜಾರಾಜ್ಯ' ಚಿತ್ರ ಗಾಂಧಿನಗರದಲ್ಲಿ ಸೌಂಡ್ ಮಾಡುತ್ತಿದೆ. ಇದು ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಸಿನಿಮಾ ಅನ್ನೋದು ಚಿತ್ರತಂಡದ ಮಾತು. ಪ್ರಜೆಗಳು ಮನಸ್ಸು ಮಾಡಿದ್ರೆ ಏನೆಲ್ಲಾ ಬದಲಾವಣೆ ಮಾಡಬಹುದು ಎಂಬ ಕಥೆಯನ್ನು ಈ ಸಿನಿಮಾ ಹೊಂದಿದೆ. ಗಣರಾಜ್ಯೋತ್ಸವ ಸಂಭ್ರಮದ ನಡುವೆಯೇ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು ಕುತೂಹಲ ಹುಟ್ಟಿಸಿದೆ.
ಆರ್ಥಿಕವಾಗಿ ಸ್ವಾತಂತ್ರ್ಯ: ಪ್ರಜಾರಾಜ್ಯ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ವೃತ್ತಿಯಲ್ಲಿ ವೈದ್ಯರಾಗಿರುವ ನಿರ್ಮಾಪಕ ವರದರಾಜು ಮಾತನಾಡಿ, "ಉಪೇಂದ್ರ ಸಿನಿಮಾ ನೋಡಿ ನಿಜ ಸಂಗತಿಯನ್ನು ಹೀಗೂ ತೋರಿಸಬಹುದು ಎಂದು ಗೊತ್ತಾಯ್ತು. ನಮಗೆ ಹೋರಾಟದ ಮೂಲಕ ಸ್ವಾತಂತ್ರ್ಯ ಬಂತು. ಸ್ವಾತಂತ್ರ್ಯ ಬಂದು 75 ವರ್ಷವಾದರೂ ನಾವೆಲ್ಲಾ ಆರ್ಥಿಕವಾಗಿ ಸ್ವಾತಂತ್ರ್ಯವಾಗಿದ್ದೇವಾ? ನಾವು ಸ್ವಾತಂತ್ರ್ಯವನ್ನು ಹೇಗೆ ನಡೆಸಿಕೊಂಡು ಹೋಗಬೇಕು ಎಂಬುದನ್ನು ತಿಳಿಸಲು ಈ ಸಿನಿಮಾ ಮಾಡಲಾಗಿದೆ" ಎಂದರು.
ಪ್ರತಿಯೊಬ್ಬರೂ ನೋಡುವ ಸಿನಿಮಾ: "ಪ್ರಜಾಪ್ರಭುತ್ವ ಎಂದರೆ ಜನರಿಂದ ಜನರಿಗಾಗಿ ಇರುವ ಸರ್ಕಾರ. ಆದರೆ ಇಂದು ಕೆಲವರಿಂದ ಕೆಲವರಿಗಾಗಿ ಇದೆ. ಸಂವಿಧಾನದ ನಾಲ್ಕನೇ ಅಂಗ ಮಾಧ್ಯಮ ಎಂದು ಹೇಳುತ್ತೇವೆ. ಅದು ತನ್ನ ಕೆಲಸ ಮಾಡುತ್ತಿದೆಯಾ? ಸರಿಯಾಗಿ ಕೆಲಸ ಮಾಡಿದ್ರೆ ಏನೆಲ್ಲಾ ಮಾಡಬಹುದು ಎಂಬುದನ್ನು ಈ ಸಿನಿಮಾ ತಿಳಿಸಲಿದೆ. ಜೊತೆಗೆ, ನಾವಿಂದು ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟಬೇಕು. ನಾವು ಕಟ್ಟುವ ಟ್ಯಾಕ್ಸ್ ಸರಿಯಾಗಿ ಬಳಕೆಯಾದರೆ, ನಾವೆಲ್ಲರೂ ಆರ್ಥಿಕವಾಗಿ ಸ್ವಾತಂತ್ರ್ಯರಾಗುತ್ತೇವೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಪ್ರಜೆಗಳಿಗೆ ತಿಳುವಳಿಕೆ ಸಿಗಲಿದೆ. ಪ್ರತಿಯೊಬ್ಬ ಪ್ರಜೆಯೂ ನೋಡಲೇಬೇಕಿರುವ ಸಿನಿಮಾ ಇದು. ಪ್ರತೀ ಮತದಾರರು ನೋಡಿದ್ರೆ ಬದಲಾವಣೆ ಖಂಡಿತ" ಎಂದು ಅವರು ಹೇಳಿದರು.
- " class="align-text-top noRightClick twitterSection" data="">
ಒಳ್ಳೆ ಸಂದೇಶ ನೀಡುವ ಚಿತ್ರ: ಕಾರ್ಯಕ್ರಮಕ್ಕೆ ಆಗಮಿಸಿದ್ದ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಮಾತನಾಡಿ, "ನಾನು ಈ ಚಿತ್ರದಲ್ಲಿ ನಟಸಿದ್ದೇನೆ. ಇಂದಿನ ಸಮಾಜದ ಆಗುಹೋಗುಗಳನ್ನು ಹೇಳುವ ಸಿನಿಮಾ ಇದು. ನಮ್ಮ ಮತದ ಮಹತ್ವ ತೋರಿಸುವ ಜೊತೆಗೆ ಸಮಸ್ಯೆಗಳನ್ನು ಹೇಗೆ ಬಗೆಹರಿಸಿಕೊಳ್ಳಬೇಕು ಎಂಬುದನ್ನು ತೋರಿಸಲಾಗಿದೆ. ಇಂದು ಕೆಲಸ ಮಾಡದವ, ಮಾಡುವವ ಎಲ್ಲರೂ ಟ್ಯಾಕ್ಸ್ ಕಟ್ಟುತ್ತಾರೆ. ಆ ಹಣ ಏನಾಯ್ತು ಎಂದು ಕೇಳುವ ಅಧಿಕಾರ ಕೂಡ ಪ್ರಜೆಗಿದೆ. ನಮ್ಮ ಟ್ಯಾಕ್ಸ್ ಸರಿಯಾಗಿ ಬಳಕೆಯಾದ್ರೆ ದೇಶದ ಎಲ್ಲಾ ಜನರಿಗೆ ಉಚಿತ ಶಿಕ್ಷಣ, ಆರೋಗ್ಯ ನೀಡಬಹುದು. ಇವೆರಡಕ್ಕಾಗಿ ಮನುಷ್ಯ ಜೀವನವಿಡೀ ದುಡಿಯುತ್ತಾನೆ. ಇಂತಹ ಸಮಾಜಕ್ಕೆ ಒಳ್ಳೆ ಸಂದೇಶ ನೀಡುವ ಸಿನಿಮಾ ಗೆಲ್ಲಬೇಕೆಂದರು".
ಈ ಸಿನಿಮಾ ಮೂಲಕ ಬದಲಾವಣೆಯಾಗಲಿ: ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್, "ಆರ್ಥಿಕ ಸ್ವಾತಂತ್ರ್ಯದ ಕಲ್ಪನೆ ಎಷ್ಟರ ಮಟ್ಟಿಗೆ ತೆರೆಯ ಮೇಲೆ ಬಂದಿದೆ ಎಂಬುದು ಮುಖ್ಯ. ಸಮಾಜದಲ್ಲಿ ಸಿನಿಮಾ ಮಾಧ್ಯಮ ಹಲವಾರು ಬದಲಾವಣೆ ಮಾಡುತ್ತಾ ಬಂದಿದೆ. ಅದಕ್ಕೆ ಉದಾಹರಣೆ 'ಬಂಗಾರದ ಮನುಷ್ಯ'. ಈ ಸಿನಿಮಾ ನೋಡಿ ಹಲವಾರು ಯುವಕರು ನಗರದಿಂದ ಹಳ್ಳಿಗೆ ಹೋಗಿ ಕೃಷಿ ಮಾಡಿದ್ದರು. ಇಂತಹ ಅದ್ಭುತ ಬದಲಾವಣೆ ಈ ಚಿತ್ರದ ಮೂಲಕ ಆಗಲಿ. ವಿಜಯ್ ಭಾರ್ಗವ್ ನಿರ್ದೇಶನದ ಜೊತೆಗೆ ನಟನೆ ಕೂಡ ಮಾಡಿದ್ದಾರೆ. ಹಾಡು, ಟ್ರೇಲರ್ನಲ್ಲಿ ನಿರ್ದೇಶಕನ ಕೆಲಸದ ಜೊತೆ ಸಂಗೀತ, ಛಾಯಾಗ್ರಹಣ ಹೈಲೈಟ್ ಆಗಿದೆ. ಸದ್ಯ ರಾಜ್ಯದಲ್ಲಿ ಚುನಾವಣಾ ಕಾವು ಇದ್ದು, ಇಂತಹ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾ ಮೂಲಕ ಬದಲಾವಣೆ ಆಗಲಿ" ಎಂದು ಹರಸಿದರು.
ಇದನ್ನೂ ಓದಿ: ಆಸ್ಕರ್ ಪ್ರವೇಶದಲ್ಲಿ ಭಾರತ ಸಿನಿರಂಗದ ನೀರಸ ದಾಖಲೆ
ಫೆಬ್ರವರಿ 24ರಂದು ಬಿಡುಗಡೆ: ಯುವ ಪ್ರತಿಭೆ ವಿಜಯ್ ಭಾರ್ಗವ ನಿರ್ದೇಶದ ಈ ಚಿತ್ರದಲ್ಲಿ ದೇವರಾಜ್, ಸುಧಾರಾಣಿ, ಅಚ್ಯುತ್ ಕುಮಾರ್, ಟಿ.ಎಸ್.ನಾಗಾಭರಣ, ದಿವ್ಯಾ ಗೌಡ, ತಬಲಾ ನಾಣಿ, ಗಣೇಶ ರಾವ್ ಮುಂತಾದ ದೊಡ್ಡ ತಾರಾಗಣವಿದೆ. ವರದರಾಜು ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಟನೆಯ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ. ವಿಜೇತ್ ಮಂಜಯ್ಯ ಸಂಗೀತ, ರಾಕೇಶ್ ಸಿ.ತಿಲಕ್ ಛಾಯಾಗ್ರಹಣ, ಶ್ರೀಕಾಂತ್ ಸಂಕಲನವಿದೆ. ವೆಂಕಟ್ ಗೌಡ ರಾಜ್ಯಾದ್ಯಂತ ಚಿತ್ರ ವಿತರಣೆ ಮಾಡಲಿದ್ದಾರೆ. ಪ್ರಜಾರಾಜ್ಯ ಇದೇ ಫೆಬ್ರವರಿ 24ರಂದು ಬಿಡುಗಡೆ ಆಗಲಿದೆ.
ಇದನ್ನೂ ಓದಿ: ಪ್ರಜಾರಾಜ್ಯದಲ್ಲಿ ''ಜೈ ಎಲೆಕ್ಷನ್ ಧನ್ ಧನಾ ಧನ್'' ಎಂದು ಹಾಡಿದ ರಿಯಲ್ ಸ್ಟಾರ್ ಉಪೇಂದ್ರ