ಕೋಲ್ಕತ್ತಾ: 'ಪಠಾಣ್' ಸಿನಿಮಾದ ಬೇಷರಮ್ ರಂಗ್ ಹಾಡು ವಿವಾದಕ್ಕೀಡಾದ ಬೆನ್ನಲ್ಲೇ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. 'ಜಗತ್ತು ಏನೇ ಮಾಡಿದರೂ. ಏನೇ ಆದರೂ ನಮ್ಮಂತಹ ಜನರು ಸಕಾರಾತ್ಮಕವಾಗಿರುತ್ತಾರೆ' ಎಂದು ತಿರುಗೇಟು ನೀಡಿದ್ದಾರೆ.
ಗುರುವಾರ ನಡೆದ 28ನೇ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾತನಾಡಿದ ಅವರು, ಸಾಮಾಜಿಕ ಮಾಧ್ಯಮಗಳ ವಿರುದ್ಧ ಕಿಡಿಕಾರಿದರು. ಸಿನಿಮಾವು ಏಕತೆ, ಸಹೋದರತ್ವ ಮತ್ತು ಮಾನವೀಯ ಸಹಾನುಭೂತಿಯನ್ನು ಪ್ರತಿಬಿಂಬಿಸುತ್ತದೆ. ಸಹೋದರತ್ವದ ಮಾನವೀಯತೆಯ ಸಾಮರ್ಥ್ಯವನ್ನು ಸಿನಿಮಾ ಮುನ್ನೆಲೆಗೆ ತರುತ್ತದೆ. ವಿವಿಧ ಜಾತಿ, ಬಣ್ಣ, ಧರ್ಮಗಳ ಜನರು ಪರಸ್ಪರ ಅರಿತುಕೊಳ್ಳಲು ಉತ್ತಮ ವೇದಿಕೆಯಾಗಿದೆ. ಮನುಕುಲದ ದೊಡ್ಡ ಸ್ವಭಾವದ ಬಗ್ಗೆ ಮಾತನಾಡುವ ಪ್ರತಿ-ನಿರೂಪಣೆಯನ್ನು ಉಳಿಸಿಕೊಳ್ಳಲು ಚಿತ್ರವು ಸಹಕಾರಿ ಎಂದರು.
ಇದನ್ನೂ ಓದಿ: ಬೇಷರಮ್ ರಂಗ್ ವಿವಾದ: 'ಪಠಾಣ್' ಬಾಯ್ಕಾಟ್ ಬಗ್ಗೆ ಮೌನ ಮುರಿದ ಶಾರುಖ್ ಖಾನ್
ಬಳಿಕ ಸಮಾರಂಭದ ಕೊನೆಯಲ್ಲಿ ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ, ಬಂಗಾಳಕ್ಕೆ ಸುದೀರ್ಘ ಕಾಲದ ಹೋರಾಟದ ಇತಿಹಾಸವಿದೆ. ನಾನು ರಾಜ್ಯದ ಏಕತೆ, ಮಾನವೀಯತೆ, ವೈವಿಧ್ಯತೆ ಮತ್ತು ಸಮಗ್ರತೆಗಾಗಿ ಹೋರಾಡುತ್ತೇನೆ, ಈ ಹೋರಾಟ ಮುಂದುವರೆಯಲಿದೆ. 'ನಮ್ಮ ರಾಜ್ಯವು ಯಾರಿಗೂ ತಲೆಬಾಗುವುದಿಲ್ಲ, ಯಾರೊಂದಿಗೂ ಭಿಕ್ಷೆ ಬೇಡುವುದಿಲ್ಲ' ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಅಮಿತಾಬ್ ಬಚ್ಚನ್ ಅವರಿಗೆ ಭಾರತ ರತ್ನ ಕೊಡಿ: ಮಮತಾ ಬ್ಯಾನರ್ಜಿ ಒತ್ತಾಯ
ಏನಿದು ಬೇಷರಮ್ ರಂಗ್ ವಿವಾದ: ಬಹುನಿರೀಕ್ಷಿತ ಪಠಾಣ್ ಚಿತ್ರದ ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಇದರಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿ ಕಾಣಿಸಿಕೊಂಡಿರುವುದು ಒಂದು ವರ್ಗದ ಆಕ್ರೋಶಕ್ಕೆ ಗುರಿಯಾಗಿದೆ.