ನಟ ರಾಕ್ಷಸ ಎಂದೇ ಖ್ಯಾತರಾಗಿರುವ ಡಾಲಿ ಧನಂಜಯ್ ವಿಭಿನ್ನ ಲುಕ್ನಲ್ಲಿ ಕಾಣಿಸಿಕೊಂಡಿರುವ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಚಿತ್ರದ ಟ್ರೈಲರ್ ಇತ್ತೀಚಿಗೆ ಬಿಡುಗಡೆ ಆಗಿ ಸಖತ್ ಸೌಂಡ್ ಮಾಡುತ್ತಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಡಾಲಿ ಧನಂಜಯ್ ಮಾತನಾಡಿ, ಜಮಾಲಿಗುಡ್ಡ ಈ ವರ್ಷದ ನನ್ನ ನಟನೆಯ 6ನೇ ಚಿತ್ರ. ಕುಟುಂಬ ಸಮೇತರಾಗಿ ಬಂದು ನೋಡಬಹುದಾದ ಚಿತ್ರ. ಕುಶಾಲ್ ಗೌಡ ಅವರು ಈ ಚಿತ್ರಕ್ಕಾಗಿ ಫೇಸ್ಬುಕ್ ಮೂಲಕ ನಿರ್ಮಾಪಕರನ್ನು ಹುಡುಕಿದರು. ಆಗ ಶ್ರೀಹರಿ ಸಿಕ್ಕರು. ನಾನು ಕೂಡ ಬಹಳ ಬ್ಯುಸಿ ಇದ್ದೆ. ಹೆಚ್ಚಿನ ಚಿತ್ರೀಕರಣ ಬಾಬಾಬುಡನಗಿರಿಯಲ್ಲೇ ನಡೆಯಬೇಕಿತ್ತು.
ಅದರಲ್ಲೂ ಸೆಪ್ಟೆಂಬರ್-ಅಕ್ಟೋಬರ್ ತಿಂಗಳ ವಾತಾವರಣದಲ್ಲೇ ಚಿತ್ರೀಕರಣ ನಡೆಯಬೇಕಿಗಿದ್ದರಿಂದ ಬೇಗ ಈ ಚಿತ್ರೀಕರಣದಲ್ಲಿ ಪಾಲ್ಗೊಂಡೆ. ಛಾಯಾಗ್ರಾಹಕ ಕಾರ್ತಿಕ್ ಸೇರಿದಂತೆ ಇಡೀ ತಂತ್ರಜ್ಞರ ಕಾರ್ಯವೈಖರಿ ಹಾಗೂ ಅದಿತಿ ಪ್ರಭುದೇವ ಸೇರಿ ಎಲ್ಲ ಕಲಾವಿದರ ಅಭಿನಯ ಚೆನ್ನಾಗಿದೆ. ಚಿತ್ರ ಯಶಸ್ವಿಯಾಗಲಿ. ನಿರ್ಮಾಪಕರು ಮತ್ತಷ್ಟು ಚಿತ್ರ ನಿರ್ಮಾಣ ಮಾಡಲಿ ಎಂದರು.
ಅದಿತಿ ಪ್ರಭುದೇವ ಮಾತನಾಡಿ, ಈ ಚಿತ್ರ ನನ್ನ ವೃತ್ತಿ ಬದುಕಿನಲ್ಲಿ ಸದಾ ನೆನಪಿನಲ್ಲಿ ಉಳಿಯುವ ಸಿನಿಮಾವಾಗಲಿದೆ. ಈ ಚಿತ್ರದ ಭಾವನಾತ್ಮಕ ಸನ್ನಿವೇಶಗಳಲ್ಲಿ ನಾನು ಎಷ್ಟೋ ಕಡೆ ಸಹಜವಾಗಿ ಅತ್ತಿದ್ದೂ ಇದೆ. ಅಂತಹ ಅದ್ಭುತ ಸನ್ನಿವೇಶಗಳು ಈ ಚಿತ್ರದಲ್ಲಿದೆ. ಧನಂಜಯ್ ಸೇರಿದಂತೆ ಎಲ್ಲ ಕಲಾವಿದರ ಅಭಿನಯ ಚೆನ್ನಾಗಿದೆ ಎಂದರು.
ನಿರ್ದೇಶಕ ಕುಶಾಲ್ ಗೌಡ ಮಾತನಾಡಿ, ಈ ಚಿತ್ರ ಒಂದು ಕಾಲ್ಪನಿಕ ಪ್ರಪಂಚ. ಜೊತೆಗೆ ಭಾವನಾತ್ಮಕ ಪಯಣ ಕೂಡ. ಧನಂಜಯ್ ಹಾಗೂ ಬೇಬಿ ಪ್ರಾಣ್ಯ ನಡುವಿನ ಸನ್ನಿವೇಶಗಳು ಸುಂದರವಾಗಿ ಮೂಡಿ ಬಂದಿದೆ. 95 - 96ರ ಕಾಲಘಟ್ಟದಲ್ಲಿ ನಡೆಯುವ ಕಥೆಯಿದು. ಚಿಕ್ಕಮಗಳೂರಿನ ಬಾಬಾಬುಡನಗಿರಿಯ ಸೊಬಗು ಚಿತ್ರದ ಮತ್ತೊಂದು ಹೈಲೆಟ್. ಅಲ್ಲೇ ಹೆಚ್ಚಿನ ಚಿತ್ರೀಕರಣ ನಡೆದಿದೆ ಎಂದರು.
ಇದನ್ನೂ ಓದಿ: ಜಮಾಲಿ ಗುಡ್ಡ ಚಿತ್ರ ನೋಡಿದ್ಮೇಲೆ ನನ್ನನ್ನು ನಾಗಸಾಕಿ ಅಂತಾ ಕರೆಯುತ್ತಾರೆ: ಯಶ್ ಶೆಟ್ಟಿ
ನಾನು ಮೂಲತಃ ಚಿತ್ರೋದ್ಯಮಿ ಅಲ್ಲ. ನಮ್ಮದೇ ಬೇರೆ ಉದ್ಯಮ ಇದೆ. ಆದರೆ, ನನಗೆ ಇಪ್ಪತ್ತು ವರ್ಷಗಳ ಹಿಂದೆ ಚಿತ್ರದಲ್ಲಿ ಅಭಿನಯಿಸುವ ಆಸೆಯಿತ್ತು. ಅದು ಆಗಲಿಲ್ಲ. ಈಗ ನಿರ್ಮಾಪಕನಾಗಿದ್ದೇನೆ. ಡಿಸೆಂಬರ್ 30ರಂದು ನಮ್ಮ ಚಿತ್ರ ತೆರೆಗೆ ಬರುತ್ತಿದೆ. ನಿಮ್ಮೆಲ್ಲರ ಬೆಂಬಲ ಇರಲಿ ಎಂದರು ನಿರ್ಮಾಪಕ ಶ್ರೀಹರಿ.
ಇದನ್ನೂ ಓದಿ: ವಿಭಿನ್ನ ಪಾತ್ರಗಳನ್ನು ಮಾಡುವ ಹಸಿವಿದೆ: ನಟಿ ಭಾವನ
ಕಾರ್ತಿಕ್ ಛಾಯಾಗ್ರಹಣ ಹಾಗೂ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸಂತು ಸಂಕಲನ ಜವಾಬ್ದಾರಿ ಹೊತ್ತಿದ್ದಾರೆ. ಡಾಲಿ ಧನಂಜಯ್, ಅದಿತಿ ಪ್ರಭುದೇವ, ಬೇಬಿ ಪ್ರಾಣ್ಯ ಅಲ್ಲದೇ ಯಶ್ ಶೆಟ್ಟಿ, ರುಶಿಕಾ, ದಿವ್ಯ ಸೇರಿದಂತೆ ಹಲವರು ನಟಿಸಿದ್ದಾರೆ.