'ಲಾಕಪ್ ಡೆತ್', 'ಸಿಂಹದ ಮರಿ', 'ಎ.ಕೆ 47', 'ಕಲಾಸಿಪಾಳ್ಯ'ದಂತಹ ಸೂಪರ್ ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ನಿರ್ದೇಶಕ ಓಂ ಪ್ರಕಾಶ್ ರಾವ್. ಬಹಳ ದಿನಗಳ ಬಳಿಕ ಮತ್ತೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಅವರ ಹೊಸ ಸಿನಿಮಾಗೆ 'ಫೀನಿಕ್ಸ್' ಎಂದು ಟೈಟಲ್ ಇಡಲಾಗಿದೆ. ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮಾಗಡಿ ರಸ್ತೆಯ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ನೆರವೇರಿತು. ಎನ್.ಸೋಮೇಶ್ವರ್ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು. ಬೇನಿ ಕೃಷಿ ಆರಂಭ ಫಲಕ ತೋರಿದರು. ಎ.ಎಂ ಉಮೇಶ್ ರೆಡ್ಡಿ ಕ್ಯಾಮರಾ ಚಾಲನೆ ಮಾಡಿದರು.

ಈ ವೇಳೆ ಮೊದಲು ಮಾತು ಶುರು ಮಾಡಿದ ನಿರ್ದೇಶಕ ಓಂ ಪ್ರಕಾಶ್ ರಾವ್, "ಇದೊಂದು ಮಹಿಳಾ ಪ್ರಧಾನ ಚಿತ್ರ. ರಿಮೇಕ್ ಚಿತ್ರಗಳಿಗೆ ಬ್ರೇಕ್ ಹಾಕಿ ಸ್ವಮೇಕ್ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದೇನೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ನಾಯಕಿಯರಾಗಿ ನಿಮಿಕಾ ರತ್ನಾಕರ್, ಕೃತಿಕಾ ಲೋಗೊ, ತನುಷಾ ರಜಪೂತ್ ನಟಿಸುತ್ತಿದ್ದಾರೆ. ಭಾಸ್ಕರ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ನನ್ನ ನಿರ್ದೇಶನದ 49ನೇ ಚಿತ್ರ" ಎಂದು ತಿಳಿಸಿದರು.

ಬಳಿಕ ಮಾತನಾಡಿದ ನಟಿ ನಿಮಿಕಾ ರತ್ನಾಕರ್, "ಈ ಚಿತ್ರದ ಶೀರ್ಷಿಕೆ ಕೇಳಿ ನನಗೆ ಈ ಚಿತ್ರದಲ್ಲಿ ನಟಿಸುವ ಆಸೆಯಾಯಿತು. ಕಥೆ ಕೇಳಿದ ಮೇಲಂತೂ ಬಹಳ ಖುಷಿಯಾಯಿತು. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ" ಎಂದರು. ಇನ್ನು ಚಿತ್ರದ ಮತ್ತೊಬ್ಬ ನಾಯಕಿ ಕೃತಿಕಾ ಲೋಗೋ ಮಾತನಾಡಿ, "ನಾನು ಈ ಹಿಂದೆ ಓಂ ಪ್ರಕಾಶ್ ರಾವ್ ಅವರ ನಿರ್ದೇಶನ ಎರಡು ಚಿತ್ರಗಳಲ್ಲಿ ನಟಿಸಿದ್ದೆ. ಇದು ಮೂರನೇ ಚಿತ್ರ. ಈ ಚಿತ್ರದಲ್ಲೂ ನನ್ನ ಪಾತ್ರ ಚೆನ್ನಾಗಿದೆ" ಎಂದು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ದೊಡ್ಮನೆ ಕುಡಿ ಅಭಿನಯದ 'ಯುವ' ಚಿತ್ರದ ಬಿಡುಗಡೆಗೆ ಹೊಸ ಮುಹೂರ್ತ ಫಿಕ್ಸ್
"ನಾನು ಈವರೆಗೂ ತೊಂಬತ್ತು ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ ಈ ಚಿತ್ರದಲ್ಲಿ ನಿರ್ದೇಶಕರು ಪ್ರಮಖ ಪಾತ್ರ ನೀಡಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರ ನನ್ನದು" ಎಂದು ನಟ ಭಾಸ್ಕರ್ ಶೆಟ್ಟಿ ಹೇಳಿದರು. ಇವರ ಜೊತೆಗೆ ಸಿನಿಮಾದಲ್ಲಿ ಕಾಕ್ರೋಜ್ ಸುಧೀ, ವಿನೋದ್ ಕಿನ್ನಿ, ರೋಬೊ ಗಣೇಶ್, ಆರ್ಯನ್ ಮುಂತಾದವರು ನಟಿಸಿದ್ದಾರೆ.
ಬಳಿಕ ಸಂಭಾಷಣೆಕಾರ ಎಂ.ಎಸ್ ರಮೇಶ್ ಮಾತನಾಡಿ, "ನಾನು ಹಾಗೂ ಓಂ ಪ್ರಕಾಶ್ ರಾವ್ ಮೂವತ್ತು ವರ್ಷದ ಗೆಳೆಯರು. ಓಂ ಪ್ರಕಾಶ್ ರಾವ್ ನಿರ್ದೆಶನದ ಬಹುತೇಕ ಚಿತ್ರಗಳಿಗೆ ನಾನೇ ಸಂಭಾಷಣೆ ಬರೆದಿದ್ದೇನೆ ಈ ಚಿತ್ರಕ್ಕೂ ಬರೆದಿದ್ದೇನೆ" ಎಂದರು.
ಇನ್ನೂ ಈ ಚಿತ್ರಕ್ಕೆ ಸಾಧುಕೋಕಿಲ ಸಂಗೀತ ನಿರ್ದೇಶನ, ರವಿಕುಮಾರ್ ಛಾಯಾಗ್ರಹಣ, ಲಕ್ಷ್ಮಣ್ ರೆಡ್ಡಿ ಸಂಕಲನ, ವಿಜಯನ್ ಸಾಹಸ ನಿರ್ದೇಶನ ಹಾಗೂ ರಾಮಚಂದ್ರ ಅವರ ನಿರ್ಮಾಣ ನಿರ್ವಹಣೆ ಇದೆ. ವೆಂಕಟ್ ಗೌಡ ಅರ್ಪಿಸುತ್ತಿರುವ ಈ ಚಿತ್ರವನ್ನು ತ್ರಿಶಾ ಪ್ರಕಾಶ್ ಶ್ರೀ ಗುರು ಚಿತ್ರಾಲಯ ಬ್ಯಾನರ್ನಲ್ಲಿ ನಿರ್ಮಿಸುತ್ತಿದ್ದಾರೆ. ಬೆಂಗಳೂರು, ಜರ್ಮನ್ ಹಾಗೂ ಆಸ್ಟ್ರೀಯಾದಲ್ಲಿ ಚಿತ್ರೀಕರಣ ನಡೆಯಲಿದೆ. ಶ್ರೀಗುರು ಚಿತ್ರಾಲಯ ಲಾಂಛನದಲ್ಲಿ ತ್ರಿಶಾ ಪ್ರಕಾಶ್ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ: ಓಂ ಪ್ರಕಾಶ್ ರಾವ್ ನಿರ್ದೇಶನದ 'ಫೀನಿಕ್ಸ್' ಚಿತ್ರಕ್ಕೆ ಮೂವರು ನಾಯಕಿಯರು