'ಅಪೂರ್ವ' ಕ್ರೇಜಿಸ್ಟಾರ್ ವಿ.ರವಿಚಂದ್ರನ್ ನಟಿಸಿ ನಿರ್ದೇಶಿಸಿದ ಸಿನಿಮಾ. ಈ ಚಿತ್ರದಲ್ಲಿ ಅಪೂರ್ವ ಎಂಬ ಪ್ರತಿಭಾವಂತ ಕಲಾವಿದೆಯನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ಇದೇ ಅಪೂರ್ವ ನಟನೆಯ ಜೊತೆಗೆ ಸದ್ಯ ನಿರ್ದೇಶನಕ್ಕಿಳಿದಿದ್ದಾರೆ. 'ಓ ನನ್ನ ಚೇತನ' ಎಂಬ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ರವಿಚಂದ್ರನ್ ಸಾಥ್ ಕೊಟ್ಟಿದ್ದಾರೆ.
ಮಕ್ಕಳ ಕುರಿತ ಕಥೆಯಾಧಾರಿತ ಈ ಸಿನಿಮಾದ ಟ್ರೇಲರ್ ಅನ್ನು ಅವರು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭಹಾರೈಸಿದರು. ಬಳಿಕ ಮಾತನಾಡಿದ ಕ್ರೇಜಿಸ್ಟಾರ್, 'ಓ ನನ್ನ ಚೇತನ' ಸಿನಿಮಾದ ಟ್ರೇಲರ್ ಪ್ರೇಮಲೋಕ, ಶಾಂತಿ ಕ್ರಾಂತಿಯ ಚಿತ್ರದ ಅದ್ಭುತ ಸನ್ನಿವೇಶಗಳನ್ನು ಒಳಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರದಲ್ಲಿ ಮಾಸ್ಟರ್ ಪ್ರತೀಕ್, ಮಾಸ್ಟರ್ ಪ್ರೀತಮ್, ಬೇಬಿ ದಾನೇಶ್ವರಿ, ಬೇಬಿ ಡಿಂಪನಾ, ಬೇಬಿ ಮೋನಿಕಾ ನಟಿಸಿದ್ದಾರೆ.
ಮೊಬೈಲ್ ನೋಡೋ ಮಕ್ಕಳು, ಮಕ್ಕಳ ಮೊಬೈಲ್ ಹಾವಳಿ ತಡೆಯಲಾರದ ಪೋಷಕರು ನೋಡಲೇಬೇಕಾದಂತಹ ಸಿನಿಮಾ 'ಓ ನನ್ನ ಚೇತನ'. ಚಿತ್ರದಲ್ಲಿ ದೊಡ್ಡ ತಾರಾಬಳಗವಿಲ್ಲ. ಆದರೆ, ದೊಡ್ಡ ತಂತ್ರಜ್ಞರೇ ಕೈ ಜೋಡಿಸಿ ಮಾಡಿರುವ ಅಪ್ಪಟ ರಂಜನೆಯ ಮತ್ತು ಸಂದೇಶವಿರುವ ಸಿನಿಮಾ. ಗುಣಮಟ್ಟದಲ್ಲಿ ದೊಡ್ಡ ಚಿತ್ರ. ಸೂಕ್ಷ್ಮಕಥೆಯ ಜೊತೆ ಪ್ರಸ್ತುತತೆಗೆ ತುಂಬಾ ಹತ್ತಿರವಿರುವ ವಿಚಾರ ಈ ಚಿತ್ರದ ಜೀವಾಳ. ಹೆಸರೇ ಹೇಳುವಂತೆ 'ಓ ನನ್ನ ಚೇತನ' ಇಂದಿನ ಪೀಳಿಗೆಯನ್ನು ಎಚ್ಚರಿಸುವ ಸಿನಿಮಾ.
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದ್ದ 'ಓ ನನ್ನ ಚೇತನ', ಇದೇ ಡಿಸೆಂಬರ್ 15ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಡಾ.ಬಿ.ಜಿ ಮಲ್ಲಿಕಾರ್ಜುನ ಸ್ವಾಮಿ ಈ ಚಿತ್ರವನ್ನು ಮೂನಿಪ್ಲಿಕ್ಸ್ ಸ್ಟುಡಿಯೋಸ್ನ ಕೆ.ಎ ಸುರೇಶ್ ಅವರ ಮೂಲಕ ರಿಲೀಸ್ ಮಾಡುತ್ತಿದ್ದಾರೆ.
ಅಪೂರ್ವ ಗೌಡ ನಿರ್ದೇಶನದ ಚೊಚ್ಚಲ ಚಿತ್ರವಿದು. ಅಲೆಮಾರಿ ಖ್ಯಾತಿಯ ಹರಿ ಸಂತು ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಪ್ರದೀಪ್ ವರ್ಮಾ ಸಂಗೀತ ಸಂಯೋಜಿಸಿದ್ದಾರೆ. ಗುರುಪ್ರಶಾಂತ್ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ಎಸ್ ಅಂಡ್ ಎಸ್ ಬ್ಯಾನರ್ ಅಡಿಯಲ್ಲಿ ದೀಪಕ್, ವಿ.ಎಸ್ ಮಹೇಶ್, ವಿ. ಪ್ರಶಾಂತ್, ಹರೀಶ್ ಕುಮಾರ್, ಸಾಯಿ ಅಶೋಕ್ ಕುಮಾರ್, ಡಾ. ನಾರಾಯಣ್ ಹೊಸ್ಮನೆ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
'ಓ ನನ್ನ ಚೇತನ' ಚಿತ್ರದ 'ನೀ ಏನೇ ಹೇಳು ಅಂಜು' ಹಾಡು ರಿಲೀಸ್ ಆಗಿದ್ದು, ಈ ಹಾಡಿಗೆ ಡಿಜಿಟಲ್ ವೇದಿಕೆಯಲ್ಲಿ ಓಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಜೊತೆಗೆ ಚಿತ್ರದ ಟೈಟಲ್ ಹಾಡು ಕೂಡ ರಿಲೀಸ್ ಆಗಿದ್ದು, ಮ್ಯೂಸಿಕಲಿ ಈ ಸಿನಿಮಾ ನಿರೀಕ್ಷೆ ಹುಟ್ಟಿಸಿದೆ. ಅಪ್ಪಟ ಹಳ್ಳಿ ಹಿನ್ನೆಲೆಯಲ್ಲಿ ಚಿತ್ರಿಸಿರುವ 'ಓ ನನ್ನ ಚೇತನ' ನಾಲ್ಕಾರು ಆಯಾಮಗಳಲ್ಲಿ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: ಹೆಸರಿಡದ ಚಿತ್ರಕ್ಕೆ ಜೋಡಿಯಾದ ಚಂದನವನದ ಬ್ಯೂಟಿಫುಲ್ ಕಪಲ್ ಚಂದನ್ ಶೆಟ್ಟಿ-ನಿವೇದಿತಾ ಗೌಡ