69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ನಿನ್ನೆ (ಗುರುವಾರ) ಘೋಷಿಸಿದೆ. ಪ್ರತಿಷ್ಟಿತ ಪ್ರಶಸ್ತಿಗಳನ್ನು 11 ಸದಸ್ಯರಿದ್ದ ತೀರ್ಪುಗಾರರ ತಂಡದ ಮುಖ್ಯಸ್ಥ, ಸಿನಿಮಾ ನಿರ್ದೇಶಕ ಕೇತನ್ ಮೆಹ್ತಾ ಪ್ರಕಟಿಸಿದ್ದಾರೆ. ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಉತ್ತಮ ಕನ್ನಡ ಪ್ರಾದೇಶಿಕ ಸಿನಿಮಾ ಗೌರವಕ್ಕೆ ಪಾತ್ರವಾಗಿದೆ. ಹೀಗೆ ಬಹುಭಾಷೆಗಳ ಸಿನಿಮಾಗಳು, ಚಿತ್ರೋದ್ಯಮಿಗಳು ನಾನಾ ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿದ್ದಾರೆ.
ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಘೋಷಣೆ ಆಗಿದೆ. ಇವರ ಬ್ಲಾಕ್ ಬಸ್ಟರ್ ಸಿನಿಮಾ 'ಪುಷ್ಪ: ದಿ ರೈಸ್' ನಲ್ಲಿನ ಅಮೋಘ ಅಭಿನಯಕ್ಕೆ ಈ ಗೌರವ ದೊರೆತಿದೆ. ತೆಲುಗು ಚಿತ್ರರಂಗದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಮೊದಲ ನಟ ಎಂಬ ಹೆಗ್ಗಳಿಕೆಗೂ ಸ್ಟೈಲಿಶ್ ಸ್ಟಾರ್ ಪಾತ್ರರಾಗಿದ್ದಾರೆ. ಪರಿಶ್ರಮದ ಫಲವಾಗಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಬಗ್ಗೆ ಅಲ್ಲು ಅರ್ಜುನ್ ಪ್ರತಿಕ್ರಿಯಿಸಿದ್ದಾರೆ. ಚಿತ್ರತಂಡಕ್ಕೆ ಧನ್ಯವಾದ ಅರ್ಪಿಸಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿರುವವರಿಗೆ ಅಭಿನಂದನೆ ತಿಳಿಸಿದ್ದಾರೆ.
2021ರ ಡಿಸೆಂಬರ್ನಲ್ಲಿ ಪುಷ್ಪ 1 ಚಿತ್ರಮಂದಿರಗಳಲ್ಲಿ ತೆರೆಕಂಡು ಧೂಳೆಬ್ಬಿಸಿತು. ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿತು. ಈ ಸಿನಿಮಾದಲ್ಲಿ ಅದ್ಭುತ ನಟನೆಗಾಗಿ ಅಲ್ಲು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಅಲ್ಲು ಅರ್ಜುನ್ ತಮ್ಮ ಕುಟುಂಬ ಮತ್ತು ಪುಷ್ಪ ತಂಡದೊಂದಿಗೆ ಈ ಖುಷಿ ಸುದ್ದಿಯನ್ನು ಸಂಭ್ರಮಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಾಚರಣೆಯ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಅಲ್ಲು ಅರ್ಜುನ್ ಅವರು ಪತ್ನಿ ಸ್ನೇಹಾ ರೆಡ್ಡಿ ಮತ್ತು ಮುದ್ದಾದ ಮಕ್ಕಳನ್ನು ಬಿಗಿಯಾಗಿ ತಬ್ಬಿಕೊಂಡು ಸಂತಸ ವ್ಯಕ್ತಪಡಿಸುತ್ತಿರುವುದನ್ನು ನೋಡಬಹುದು. ನಟ ಸುಕುಮಾರ್ ಅವರನ್ನೂ ಅಪ್ಪಿಕೊಂಡು ಅಭಿನಂದನೆ ವಿನಿಮಯ ಮಾಡಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ವಿಡಿಯೋದಲ್ಲಿ ಅಲ್ಲು ಅರ್ಜುನ್ ಬ್ಲ್ಯಾಕ್ ಶರ್ಟ್, ಬಿಳಿ ಪ್ಯಾಂಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಪತ್ನಿ ಸ್ನೇಹಾ ರೆಡ್ಡಿ ರೆಡ್ ಸಲ್ವಾರ್ ಸೂಟ್ನಲ್ಲಿ ಸಖತ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಪುತ್ರ ವೈಟ್ ಟೀ ಶರ್ಟ್, ಪುತ್ರಿ ಪಿಂಕ್ ಟಾಪ್ನಲ್ಲಿ ಕಾಣಿಸಿಕೊಂಡರು.
ಇದನ್ನೂ ಓದಿ: ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ರಾಷ್ಟ್ರ ಪ್ರಶಸ್ತಿ ಗೆದ್ದ ಮೊದಲ ತೆಲುಗು ನಟ.. ಯಾವ ಚಿತ್ರಕ್ಕೆ ಗೊತ್ತಾ!?
ಅಲ್ಲು ಅರ್ಜುನ್ ಮತ್ತು ಸುಕುಮಾರ್ ಕಾಂಬೋದ ಪುಷ್ಪ: ದಿ ರೈಸ್ ಸಿನಿಮಾ ತೆಲುಗು ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದೆ. ಸಿನಿಮಾ ಈವರೆಗೆ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಬಾಕ್ಸ್ ಆಫೀಸ್ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳಲ್ಲಿ ಪುಷ್ಪ ಕೂಡಾ ಒಂದು. ಪ್ರಸ್ತುತ ಪುಷ್ಪ ಸೀಕ್ವೆಲ್ ಶೂಟಿಂಗ್ನಲ್ಲಿ ಚಿತ್ರತಂಡ ನಿರತವಾಗಿದೆ. ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾತರರಾಗಿದ್ದಾರೆ.
ಇದನ್ನೂ ಓದಿ: ರಕ್ಷಿತ್ ಶೆಟ್ಟಿ ಅಭಿನಯದ 'ಚಾರ್ಲಿ 777'ಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
ಪುಷ್ಪ ಕಥೆಯನ್ನು ಸುಕುಮಾರ್ ಮೊದಲು ಸೌತ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರಿಗೆ ಹೇಳಿದ್ದರು. ಕಥೆ ಇಷ್ಟಪಟ್ಟ ನಟ ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ರು. ಆದ್ರೆ ನಟನ ಕೈಯಲ್ಲಿ ಬೇರೆ ಸಿನಿಮಾಗಳಿದ್ದವು. ಮೊದಲೇ ಒಪ್ಪಿಕೊಂಡ ಪ್ರಾಜೆಕ್ಟ್ಗಳನ್ನು ಪೂರ್ಣಗೊಳಿಸಬೇಕಿತ್ತು. ಸಿನಿಮಾ ಡೇಟ್ಸ್ ಹೊಂದಿಸಲು ಸಾಧ್ಯವಾಗದ ಕಾರಣ ಈ ಯೋಜನೆಯನ್ನು ಅಲ್ಲಿಗೆ ನಿಲ್ಲಿಸಲಾಯಿತು. ಬಳಿಕ ಪುಷ್ಪ ಪಾತ್ರಕ್ಕೆ ಅಲ್ಲು ಅರ್ಜುನ್ ಜೀವ ತುಂಬಿದ್ದು, ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.