ಉದ್ಯಮ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿರುವ ನನ್ಬನ್ ಗ್ರೂಪ್ ಇದೀಗ ಮನರಂಜನಾ ಲೋಕಕ್ಕೆ ಹೊಸ ಹೆಜ್ಜೆ ಇಟ್ಟಿದ್ದು, ನನ್ಬನ್ ಎಂಟರ್ಟೈನ್ಮೆಂಟ್ ಎಂಬ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದೆ. ಇತ್ತೀಚೆಗೆ ಚೆನ್ನೈನಲ್ಲಿ ಅದ್ಧೂರಿಯಾಗಿ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ನನ್ಬನ್ ಎಂಟರ್ಟೈನ್ಮೆಂಟ್ ಸಿನಿಮಾ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಸಜ್ಜಾಗಿದ್ದು, ಯುವ ಪ್ರತಿಭೆಗಳ ಕನಸಿಗೆ ವೇದಿಕೆ ನಿರ್ಮಿಸಿದೆ. ಸದಾ ಅಭಿರುಚಿ ಸಿನಿಮಾಗಳನ್ನು ನಿರ್ಮಿಸುವ ಗುರಿಯನ್ನು ಸಂಸ್ಥೆ ಹೊಂದಿದೆ.
ನನ್ಬನ್ ಗ್ರೂಪ್ ಮುಖ್ಯಸ್ಥ ನರೈನ್ ರಾಮಸ್ವಾಮಿ, ಸಹ ಸಂಸ್ಥಾಪಕ ಮಣಿವಣ್ಣನ್, ಸಂಸ್ಥಾಪಕ ಗೋಪಾಲ ಕೃಷ್ಣನ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಭಾರತದ ರಾಯಭಾರಿ, ನಟ ಆರಿ ಅರ್ಜುನನ್ ಹಾಗು ನಟಿ ತಮನ್ನಾ ಭಾಟಿಯಾ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದರು. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸೆನ್ಸೇಷನಲ್ ಕ್ರಿಯೇಟ್ ಮಾಡಿರೋ ತಮನ್ನಾ ಭಾಟಿಯಾ, ಕಾವಾಲಾಯಾ ಹಾಡು ಸೇರಿದಂತೆ ತಮ್ಮ ಚಿತ್ರದ ಹಾಡುಗಳಿಗೆ ಬೊಂಬಾಟ್ ಸ್ಟೆಪ್ ಹಾಕುವ ಮೂಲಕ ಸಿನಿಮಾಪ್ರಿಯರನ್ನು ರಂಜಿಸಿದರು.
ನಂತರ ಮಾತನಾಡಿದ ಸಂಸ್ಥಾಪಕ ಗೋಪಾಲ ಕೃಷ್ಣನ್, ನನ್ಬನ್ ಗ್ರೂಪ್ ಹಲವಾರು ಸಾಮಾಜಿಕ ಕಾರಣಗಳಿಗಾಗಿ ಸಹಾಯಹಸ್ತ ನೀಡುತ್ತಿದೆ. ಸಂಸ್ಥೆಯನ್ನು ಪ್ರಾರಂಭಿಸಲು ಮುಖ್ಯ ಕಾರಣ ಸ್ನೇಹ. ನಾವು ಯಾವ ರೀತಿಯ ಜೀವನವನ್ನು ನಡೆಸುತ್ತೇವೆ, ನಾವು ಎಲ್ಲಿದ್ದೇವೆ ಎಂಬುದರ ಹೊರತಾಗಿಯೂ, ಸ್ನೇಹ ಸುತ್ತಮುತ್ತಲಿನವರಿಗೆ ಪ್ರೀತಿಯಿಂದ ಬೇಷರತ್ತಾದ ಸಹಾಯ ನೀಡುತ್ತದೆ. ನಮ್ಮಲ್ಲಿ, ಸ್ನೇಹ ಜಾತಿ, ಮತ, ಸಮುದಾಯ ಅಥವಾ ಲಿಂಗದ ಆಧಾರದ ಮೇಲೆ ಜನರ ನಡುವೆ ವ್ಯತ್ಯಾಸ ಹೊಂದಿಲ್ಲ ಎಂದರು.
ನನ್ಬನ್ ಗ್ರೂಪ್ ಒಂದು ಲಾಭರಹಿತ ಸಂಸ್ಥೆ. ನಾವೀಗ ಈ ಗುಂಪಿನಿಂದ ನನ್ಬನ್ ಎಂಟರ್ಟೈನ್ಮೆಂಟ್ ಎಂಬ ಹೊಸ ಉದ್ಯಮ ಪ್ರಾರಂಭಿಸಿದ್ದೇವೆ. ಸಂಸ್ಥೆಯು ಸಿನಿಮಾ ನಿರ್ಮಾಣದತ್ತ ಗಮನಹರಿಸುತ್ತದೆ. ಮೊದಲು ತಮಿಳು ಸಿನಿಮಾ ನಿರ್ಮಾಣ, ನಂತರ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಗುರಿ ಹೊಂದಿದ್ದೇವೆ. ಸಂಸ್ಥೆ ಅಡಿ ಪ್ರತಿಭಾವಂತರಿಗೆ ಅವಕಾಶಗಳನ್ನು ನೀಡುತ್ತೇವೆ. ಈ ವೇದಿಕೆ ಮೂಲಕ ಅವರು ತಮ್ಮ ಪ್ರತಿಭೆ ಪ್ರದರ್ಶಿಸಬಹುದು ಎಂದು ಹೇಳಿದರು.
ಇದನ್ನೂ ಓದಿ : Jailer: ರಜನಿಕಾಂತ್ ಜೈಲರ್ ಸಿನಿಮಾ ನೋಡಲು ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ರಜೆ!