ಹೈದರಾಬಾದ್: ಮೀಟೂ ಚಳವಳಿ ಮೂಲಕ ಸಖತ್ ಸುದ್ದಿಯಾಗಿದ್ದ ಬಾಲಿವುಡ್ ತಾರೆ ತನುಶ್ರೀ ದತ್ತಾ ಇದೀಗ ಮತ್ತೊಂದು ಗಂಭೀರ ಆರೋಪ ಮಾಡುವ ಮೂಲಕ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸೆನ್ಸೇಷನಲ್ ಪೋಸ್ಟ್ವೊಂದನ್ನು ಹಾಕಿರುವ ಅವರು, ತಮಗೆ ಬಾಲಿವುಡ್ ಮಾಫಿಯಾದಿಂದ ತೊಂದರೆಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಬಾಲಿವುಡ್ ಮಾಫಿಯಾ ತನಗೆ ಕಿರುಕುಳ ನೀಡುತ್ತಿದೆ. ನನಗೇನಾದರೂ ತೊಂದರೆ ಆದರೆ ಅವರೇ ಕಾರಣ ಎಂದು ಪರೋಕ್ಷವಾಗಿ ನಟ ನಾನಾ ಪಾಟೇಕರ್ ಅವರ ಹೆಸರು ಪ್ರಸ್ತಾಪಿಸಿ ಶಾಕಿಂಗ್ ಕಾಮೆಂಟ್‌ಗಳನ್ನು ಮಾಡಿದ್ದಾರೆ.
'ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಆಗಾಗ್ಗೆ ಬರುವ ಹೆಸರುಗಳು' ಎಂದು ಕೆಲವರನ್ನು ವ್ಯಾಖ್ಯಾನಿಸಿರುವ ಅವರು, ಮೀಟೂ ಬಳಿಕ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ಹಾಗಾಗಿ ಇಲ್ಲ-ಸಲ್ಲದ ಕಿರುಕುಳ ನೀಡಲಾಗುತ್ತಿದೆ. ನನಗೆ ಏನಾದರೂ ಆದಲ್ಲಿ ನಾನಾ ಪಾಟೇಕರ್, ಮತ್ತು ಸಹಚರರು ಹಾಗೂ ಅವರ ಬಾಲಿವುಡ್ ಮಾಫಿಯಾದ ಸ್ನೇಹಿತರೇ ಹೊಣೆಗಾರರು ಎಂದು ಬರೆದಿದ್ದಾರೆ. ಅಲ್ಲದೇ ಅವರ ಯಾವುದೇ ಸಿನಿಮಾಗಳನ್ನು ನೋಡಬೇಡಿ ಎಂದು ತನುಶ್ರೀ ಮನವಿ ಮಾಡಿದ್ದಾರೆ.
ಅವರ ವಿರುದ್ಧ ಹೋರಾಟ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದಿದ್ದಾರೆ. ನನ್ನ ವಿರುದ್ಧ ಸುಳ್ಳು ಮಾಹಿತಿ ನೀಡಿದ ಚಿತ್ರರಂಗದವರ ವಿರುದ್ಧ ಹೋಗಿ, ಅವರ ಜೀವನವನ್ನು ನರಕ ಮಾಡಿ, ಕೆಲವರು ನನ್ನನ್ನು ಸೋಲಿಸಬಹುದು. ಈ ದೇಶದ ಜನರ ಬಗ್ಗೆ ನನಗೆ ನಂಬಿಕೆಯಿದೆ. ಜೈ ಹಿಂದ್, ಮತ್ತೆ ಸಿಗೋಣ ಎಂದು ತನುಶ್ರೀ ದತ್ತಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
ಇನ್ನೊಂದು ಪೋಸ್ಟ್ನಲ್ಲಿ ತಮ್ಮನ್ನು ಯಾರೋ ಫಾಲೋ ಮಾಡುತ್ತಿರುವ ಬಗ್ಗೆ ಬರೆದುಕೊಂಡಿದ್ದಾರೆ. ಸಾವಿನ ದವಡೆಯಿಂದ ನಾನು ಪಾರಾಗಿ ಬಂದಿದ್ದೇನೆ. ಕನಿಷ್ಠ ಮೂರ್ನಾಲ್ಕು ದೇಶಗಳ ಪೊಲೀಸರು ನನ್ನನ್ನು ಹಿಂಬಾಲಿಸುತ್ತಿದ್ದಾರೆ. ನನಗೆ ನಾಳೆ ಬರುತ್ತದೋ ಇಲ್ಲವೋ ಎಂಬುವುದು ಖಚಿತವಿಲ್ಲ. ಜೀವನದುದ್ದಕ್ಕೂ ನಾನು ಮೋಸ ಹೋಗುತ್ತಲೇ ಬಂದಿದ್ದೇನೆ. ಹಾಗಾಗಿ ನನಗೆ ಯಾರ ಮೇಲೂ ನಂಬಿಕೆ ಇಲ್ಲ ಎಂದಿದ್ದಾರೆ.
2018 ರಲ್ಲಿ ಭಾರತದಲ್ಲಿ ಮೀಟೂ ಚಳವಳಿಯನ್ನು ಪ್ರಾರಂಭಿಸಿದ ತನುಶ್ರೀ ಅವರು, ಚಿತ್ರೀಕರಣದ ವೇಳೆ ನಾನಾ ಪಾಟೇಕರ್, ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಮತ್ತು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಆರೋಪ ಮಾಡಿದ್ದರು. ಬಳಿಕ ಮೀಟೂ ಅನ್ನೋ ಅಭಿಯಾನ ಬಾಲಿವುಡ್ ಸೇರಿದಂತೆ ಸ್ಯಾಂಡಲ್ವುಡ್ನಲ್ಲಿ ಶುರುವಾಗಿತ್ತು.
ಇದನ್ನೂ ಓದಿ: ಡಾಕ್ಟರ್ ಮತ್ತು ಆ್ಯಕ್ಟರ್ ಶೈಲಿಯಲ್ಲಿ ಮಗನ ಫಸ್ಟ್ ಫೋಟೋಶೂಟ್ ಮಾಡಿಸಿದ ಸಂಜನಾ ಗಲ್ರಾನಿ