'ಶಾರ್ಕ್ ಟ್ಯಾಂಕ್ ಇಂಡಿಯಾ 2' ರಿಯಾಲಿಟಿ ಶೋ ತೀರ್ಪುಗಾರರಾದ ನಮಿತ ಥಾಪರ್ ಅವರು ತಮ್ಮ ಗರ್ಭಾವಸ್ಥೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಇನ್-ವಿಟ್ರೋ ಫರ್ಟಿಲೈಸೇಶನ್ (IVF) ಮೂಲಕ ತಮ್ಮ ಎರಡನೇ ಮಗುವಿನ ಗರ್ಭಧಾರಣೆಯ ಹೋರಾಟದ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಮಹಿಳೆಯರು ಎದುರಿಸುತ್ತಿರುವ ಬಂಜೆತನದ ನೋವನ್ನು ನಮಿತ ಥಾಪರ್ ತಮ್ಮ ಕಥೆಯ ಮೂಲಕ ತೆರೆದಿಟ್ಟಿದ್ದಾರೆ.
'ಎಲ್ಲಾ ಪ್ರಯತ್ನಗಳನ್ನು ಕೈಬಿಟ್ಟೆ..': "ನಾನು 28ನೇ ವಯಸ್ಸಿನಲ್ಲಿ ಗರ್ಭಿಣಿಯಾಗಲು ಬಯಸಿದ್ದೆ. ಮತ್ತು 2 ತಿಂಗಳಲ್ಲಿ ಸ್ವಾಭಾವಿಕವಾಗಿ ಗರ್ಭ ಧರಿಸುವ ಮೂಲಕ ತಾಯಿಯಾದೆ. ಅದಾಗಿ ಮೂರರಿಂದ ನಾಲ್ಕು ವರ್ಷಗಳ ನಂತರ ಎರಡನೇ ಮಗುವನ್ನು ಬಯಸಿದೆ. ಆದರೆ ಸ್ವಾಭಾವಿಕವಾಗಿ ಮತ್ತೊಮ್ಮೆ ಗರ್ಭ ಧರಿಸುವಲ್ಲಿ ವಿಫಲವಾದೆ. ಅದಾಗಿ ನಾನು 25 ಚುಚ್ಚುಮದ್ದುಗಳನ್ನು ಸಹಿಸಿಕೊಂಡು ಎರಡು ಬಾರಿ ಐವಿಎಫ್ ಚಿಕಿತ್ಸೆಗೆ ಒಳಗಾದೆ. ಆ ಪ್ರಯತ್ನವೂ ವಿಫಲವಾಯಿತು. ಇದು ನನಗೆ ಅಸಹನೀಯ ದೈಹಿಕ ಮತ್ತು ಮಾನಸಿಕ ನೋವು ಉಂಟುಮಾಡಿತು. ಬಳಿಕ ಎಲ್ಲಾ ಪ್ರಯತ್ನಗಳನ್ನು ಕೈಬಿಟ್ಟು ಒಂದೇ ಮಗುವಿನೊಂದಿಗೆ ಸಂತೋಷವಾಗಿರಲು ನಿರ್ಧರಿಸಿದೆ. ಆದರೆ ಈ ನಿರ್ಧಾರ ನನಗೆ ತೃಪ್ತಿ ನೀಡಿರಲಿಲ್ಲ" ಎಂದು ನಮಿತ ಥಾಪರ್ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮಹಿಳಾ ಐಪಿಎಲ್: ಬಾಲಿವುಡ್ ಬೆಡಗಿಯರ ಆಕರ್ಷಕ ನೃತ್ಯ ಪ್ರದರ್ಶನ, ಪ್ರೇಕ್ಷಕರು ಥ್ರಿಲ್!- ನೋಡಿ
ಮುಂದುವರಿದು, "ಆದರೆ ಕೆಲವು ವರ್ಷಗಳ ಬಳಿಕ ನಾನು ಮತ್ತೆ ಸ್ವಾಭಾವಿಕವಾಗಿ ಗರ್ಭ ಧರಿಸಿದೆ. ಆದರೆ ಈ ಮಧ್ಯೆ ಅನುಭವಿಸಿದ ನೋವು ಇಂದಿಗೂ ನನಗೆ ಮರೆಯಲು ಸಾಧ್ಯವಿಲ್ಲ. 10 ವರ್ಷಗಳ ಕಾಲ ನಾನು ಈ ವಿಷಯವನ್ನು ಯಾರೊಂದಿಗೂ ಹೇಳಿಕೊಂಡಿಲ್ಲ. ಹಾಗೆ ಹೇಳುವುದಕ್ಕಿಂತ ಆ ನೋವನ್ನು ಯಾರೊಂದಿಗಾದರೂ ಹೇಳಿಕೊಳ್ಳುವುದು ಕೂಡ ನನಗೆ ನಿಜಕ್ಕೂ ಕಷ್ಟಕರವಾಗಿತ್ತು. ಅಲ್ಲದೇ ನನಗೆ ಈಗಾಗಲೇ ಮಕ್ಕಳಿದ್ದಾರೆ. ಆದರೆ ಕೆಲವರಿಗೆ ಮಕ್ಕಳೇ ಆಗುವುದಿಲ್ಲ. ಅಂತಹವರ ನೋವನ್ನು ಒಮ್ಮೆ ಕಲ್ಪಿಸಿಕೊಳ್ಳಿ" ಎಂದು ನೊಂದು ನುಡಿದರು.
'ನನ್ನ ಪುಸ್ತಕದಲ್ಲಿಯೂ ಬರೆದಿದ್ದೇನೆ..': "ಆರು ತಿಂಗಳ ಹಿಂದೆ ನನ್ನ ಯೂಟ್ಯೂಬ್ ಚಾನೆಲ್ನಲ್ಲಿ ಬಂಜೆತನದ ವಿಷಯದ ಬಗ್ಗೆ ಚರ್ಚಿಸಬೇಕಾಗಿತ್ತು. ಈ ಸಮಯದಲ್ಲಿ ನನ್ನ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳಬಹುದೇ ಅಥವಾ ಬೇಡವೇ ಎಂಬ ವಿಚಾರವಾಗಿ ತಲೆಕೆಡಿಸಿಕೊಂಡು ಇಡೀ ರಾತ್ರಿ ನಿದ್ದೆ ಮಾಡಲು ಸಾಧ್ಯವಾಗಿರಲಿಲ್ಲ. ಕೆಲವು ಹಿತೈಷಿಗಳಂತೂ ನೀನು ವೈಯಕ್ತಿಕ ಜೀವನದ ಬಗ್ಗೆ ಯಾಕೆ ಚರ್ಚಿಸಬೇಕು? ಎಂದೆಲ್ಲಾ ಹೇಳಿದ್ದರು. ಆದರೆ ನಾನು ಅನುಭವಿಸಿದ್ದನ್ನು ಇತರರೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿದೆ. ವಾಸ್ತವವಾಗಿ ನಾನು ಈ ಬಗ್ಗೆ ನನ್ನ ಪುಸ್ತಕದಲ್ಲಿಯೂ ಬರೆದಿದ್ದೇನೆ" ಎಂದು ನಮಿತ ಹೇಳಿದರು.
ಏನಿದು ಐವಿಎಫ್?: ಸಹಜವಾಗಿ ಗರ್ಭಧಾರಣೆಯಾಗದಿದ್ದರೆ ಕೃತಕವಾಗಿ ಇನ್ ವಿಟ್ರೋ ಫರ್ಟಿಲೈಸೇಷನ್ (ಐವಿಎಫ್) ಮೂಲಕ ಗರ್ಭಧಾರಣೆ ಮಾಡಬಹುದು. ಈ ವಿಧಾನದಲ್ಲಿ ಪತ್ನಿಯ ಅಂಡಾಣು ಮತ್ತು ಪತಿಯ ವೀರ್ಯಾಣು ತೆಗೆದು ಪ್ರಯೋಗಾಲಯದಲ್ಲಿ ಎರಡನ್ನೂ ಸೇರಿಸಿ ನಿಗದಿತ ಅವಧಿಯವರೆಗೆ ಭ್ರೂಣವನ್ನು ಬೆಳೆಸಲಾಗುತ್ತದೆ. ನಂತರ ಅದನ್ನು ಪತ್ನಿಯ ಗರ್ಭಕೋಶಕ್ಕೆ ವರ್ಗಾವಣೆ ಮಾಡಲಾಗುತ್ತದೆ. ಈ ವೈದ್ಯಕೀಯ ಪ್ರಕ್ರಿಯೆಯನ್ನು ಐವಿಎಫ್ ಎನ್ನುವರು.
ಇದನ್ನೂ ಓದಿ: ಸಾಹಸಮಯ 'ಖತ್ರೋನ್ ಕೆ ಕಿಲಾಡಿ' 13ನೇ ಸೀಸನ್ ಶೀಘ್ರವೇ ಪ್ರಾರಂಭ: ಸ್ಪರ್ಧಿಗಳ ಪಟ್ಟಿ ಇಲ್ಲಿದೆ..