ಕಲೆಗೆ ಅಧಿದೇವತೆ ಶಾರದಾಂಬೆ. ದೇವಿ ನೆಲೆಸಿರುವುದು ಶೃಂಗೇರಿಯಲ್ಲಿ. ಆ ಪುಣ್ಯನೆಲ ಕಲೆಯ ನೆಲೆಯೂ ಹೌದು. ಸಿನಿಮಾ ಕ್ಷೇತ್ರಕ್ಕೆ ವಿವಿಧ ಪ್ರದೇಶಗಳಿಂದ ಸಾಕಷ್ಟು ಪ್ರತಿಭಾವಂತರು ಎಂಟ್ರಿ ಕೊಡುತ್ತಿರುತ್ತಾರೆ. ಈಗಾಗಲೇ ನಭಾ ನಟೇಶ್, ಸಂಗೀತ ಶೃಂಗೇರಿ ಯಂತಹ ಕಲಾವಿದೆಯರು ಇದೇ ಶೃಂಗೇರಿಯಿಂದ ಆಗಮಿಸಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಇವರ ಸಾಲಿನಲ್ಲಿ ಮತ್ತೋರ್ವ ಪ್ರತಿಭಾವಂತೆ ನಾಗಶ್ರೀ ಬೇಗಾರ್ ಎಂಬುವವರು ಇದ್ದು, ಬೆಳ್ಳಿತೆರೆಯಲ್ಲಿ ಅದೃಷ್ಟ ಪರೀಕ್ಷೆಗಿಳಿಯಲು ಸಜ್ಜಾಗಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಹೊಸಬರ ಎಂಟ್ರಿ ಆಗುತ್ತಲೇ ಇದೆ. ಕೆಲವರಿಗೆ ಈ ಸಿನಿಮಾ ಲೋಕ ಕೈ ಹಿಡಿದರೆ, ಹಲವರಿಗೆ ಅದೃಷ್ಟ ಕುಲಾಯಿಸುವುದಿಲ್ಲ. ಆದರೆ ಈಗಾಗಲೇ ರಂಗಭೂಮಿಯಲ್ಲಿ ಪರಿಣಿತರಾಗಿರುವ ನಾಗಶ್ರೀ ಬೇಗಾರ್ ಸಿನಿ ಜಗತ್ತಿನಲ್ಲಿ ನಾಯಕ ನಟಿಯಾಗಿ ಮಿಂಚಲು ರೆಡಿಯಾಗಿದ್ದಾರೆ. ಚಿತ್ರದ ಪೋಸ್ಟರ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ಬಿಡುಗಡೆಗೆ ಸಿದ್ಧಗೊಂಡಿರುವ, ಮಲೆನಾಡ ಪರಿಸರದ ಕಥೆ ಹೊಂದಿರುವ "ಜಲಪಾತ" ಸಿನಿಮಾದ ಲೀಡ್ ರೋಲ್ನಲ್ಲಿ ನಾಗಶ್ರೀ ಬೇಗಾರ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪೂರ್ವಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲ್ಯದಿಂದಲೂ ಮಲೆನಾಡು ಭಾಗದಲ್ಲಿ ಯಕ್ಷಗಾನ, ನಾಟಕ, ನೃತ್ಯ ಸೇರಿದಂತೆ ಕಿರುತೆರೆಯಲ್ಲಿಯೂ ಹೆಸರು ಮಾಡಿದ್ದಾರೆ. ಅಲ್ಲದೇ ಹುಚ್ಚಿಕ್ಕಿ ಎಂಬ ಕಿರುಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.
ವೈಶಂಪಾಯನ ತೀರ ಸಿನಿಮಾದಲ್ಲಿ ಅತ್ಯಂತ ವಿಭಿನ್ನ ಪಾತ್ರ ನಿರ್ವಹಿಸಿ ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರರಾದರು. ಹಲವು ಪ್ರತಿಷ್ಠಿತ ನಾಟಕೋತ್ಸವ, ಯುವ ಜನೋತ್ಸವದಲ್ಲಿ ಶ್ರೇಷ್ಠ ನಟಿ ಪ್ರಶಸ್ತಿಗಳನ್ನು ಬಾಚಿಕೊಂಡ ರಂಗಭೂಮಿ ಪ್ರತಿಭೆ ನಾಗಶ್ರೀ. ಜಲಪಾತ ಚಿತ್ರದಲ್ಲಿ 3 ಶೇಡ್ ಇರುವ ಸಂಕೀರ್ಣ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಮಲೆನಾಡ ಪ್ರಾದೇಶಿಕ ಭಾಷೆಯನ್ನು ನಾಗಶ್ರೀ ಸಮರ್ಪಕವಾಗಿ ಬಳಸಿಕೊಂಡಿದ್ದು, ಈ ಪ್ರತಿಭೆಗೆ ಉಜ್ವಲ ಅವಕಾಶಗಳು ಸಿಗಲಿ ಎಂಬುದು ಎಲ್ಲರ ಆಶಯ.
ಇದನ್ನೂ ಓದಿ: SIIMA 2023: ಪ್ರತಿಷ್ಠಿತ ಸೈಮಾ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ ಕೆಜಿಎಫ್ 2, ಕಾಂತಾರ!
ತಮ್ಮ ಸಿನಿ ಪಯಣದ ಬಗ್ಗೆ ಮಾತನಾಡಿರೋ ನಾಗಶ್ರೀ, ''ತನ್ನ ಕಲಾಚಟುವಟಿಗೆ ಶೃಂಗೇರಿ ಸಹಕಾರಿಯಾಗಿದೆ. ಬಾಲ್ಯದಲ್ಲಿ ಸಿಕ್ಕ ಪರಿಸರ, ಊರಿನ ಸಾಂಸ್ಕೃತಿಕ ಹಿನ್ನೆಲೆ ತನಗೆ ವರದಾನವಾಯ್ತು. ಸದಾ ವಿಭಿನ್ನ ಪಾತ್ರಗಳ ಜೊತೆ ಚಾಲೆಂಜಿಂಗ್ ಪಾತ್ರಗಳನ್ನ ಮಾಡಬೇಕು ಎಂಬ ಆಸೆ ಇದೆ'' ಎಂದು ತಿಳಿಸಿದ್ದಾರೆ. ಈಗಾಗಲೇ ಮತ್ತೆ ಮಾಯಮೃಗ ಧಾರಾವಾಹಿ, ಬ್ಯಾಚುಲರ್ಸ್ ಪಾರ್ಟಿ, ಊರಿನ ಗ್ರಾಮಸ್ಥರಲ್ಲಿ ವಿನಂತಿ ಚಿತ್ರಗಳಲ್ಲಿ ಅಭಿನಯಿಸಿದ ಅನುಭವವೂ ಇರುವ ನಾಗಶ್ರೀ ಸ್ವತಃ ಗಾಯಕಿ ಕೂಡ ಹೌದು. ಯಕ್ಷಗಾನ ಮತ್ತು ಭರತನಾಟ್ಯ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ "ಜಲಪಾತ" ಸಿನಿಮಾದಲ್ಲಿ ನಾಯಕ ನಟಿಯಾಗಿ ನಟಿಸುತ್ತಿದ್ದು, ಎಷ್ಟರ ಮಟ್ಟಿಗೆ ಯಶಸ್ಸು ಪಡೆಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: 'ಬಯಲುಸೀಮೆ' ಟ್ರೇಲರ್ ಅನಾವರಣ - ಉತ್ತರ ಕರ್ನಾಟಕ ಶೈಲಿಯ ಕಥೆಗೆ ಅಭಿಷೇಕ್ ಅಂಬರೀಶ್ ಸಾಥ್