ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಿರ್ಮಾಪಕ ಎನ್ ಎಂ ಸುರೇಶ್ ಗೆಲುವು ಸಾಧಿಸಿದ್ದಾರೆ. ಈ ಬಾರಿ ವಾಣಿಜ್ಯ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನವು ವಿತರಕರ ವಲಯಕ್ಕೆ ಮೀಸಲಾಗಿದ್ದು, ಇದೇ ಮೊದಲ ಬಾರಿಗೆ ನಾಲ್ವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಎನ್ ಎಂ ಸುರೇಶ್, ಮಾರ್ಸ್ ಸುರೇಶ್, ಎ. ಗಣೇಶ್ ಮತ್ತು ಶಿಲ್ಪಾ ಶ್ರೀನಿವಾಸ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದರು. ಒಟ್ಟು 1599 ಮತಗಳಿದ್ದು, ಈ ಪೈಕಿ 967 ಮತಗಳು ಚಲಾವಣೆಗೊಂಡಿದ್ದವು.
ಈ ಪೈಕಿ ಶಿಲ್ಪಾ ಶ್ರೀನಿವಾಸ್ 217, ವಿ ಹೆಚ್ ಸುರೇಶ್ (ಮಾರ್ಸ್ ಸುರೇಶ್) 181, ಮತ್ತು ಎ. ಗಣೇಶ್ 204, ಎನ್ ಎಂ ಸುರೇಶ್ 337 ಪಡೆದಿದ್ದಾರೆ. ಎನ್ ಎಂ ಸುರೇಶ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಶಿಲ್ಪಾ ಶ್ರೀನಿವಾಸ್ ಅವರಿಂದ 120 ಮತಗಳ ಅಂತರದಿಂದ ಗೆದ್ದಿದ್ದಾರೆ. ಇನ್ನು, ಕಾರ್ಯದರ್ಶಿ ಆಗಿ ಬಾ.ಮಾ. ಗಿರೀಶ್, ಖಜಾಂಚಿಯಾಗಿ ಜಯಸಿಂಹ ಮುಸುರಿ, ಉಪಾಧ್ಯಕ್ಷರಾಗಿ ಪ್ರಮಿಳಾ ಜೋಶಾಯಿ ಆಯ್ಕೆ ಆಗಿದ್ದಾರೆ.
ಕಳೆದ ವರ್ಷ ಭಾ.ಮಾ ಹರೀಶ್ ಅವರು ವಾಣಿಜ್ಯ ಮಂಡಳಿಗೆ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಅವರ ಅವಧಿ ಮುಗಿದಿದ್ದರೂ ಕೂಡ ಚುನಾವಣೆ ನಡೆಸಿಲ್ಲ ಎಂದು ಕೆಲವರು ಆಕ್ಷೇಪ ಎತ್ತಿದ್ದರು. ಹೀಗಾಗಿ ಇಂದು ಚುನಾವಣೆ ನಡೆಸಲಾಯಿತು. ನಿರ್ಮಾಪಕರು, ಪ್ರದರ್ಶಕರು ಹಾಗೂ ವಿತರಕರ ವಲಯದಿಂದ ಅನೇಕರು ಬಂದು ಚುನಾವಣೆಯಲ್ಲಿ ಮತ ಚಲಾಯಿಸಲಿದ್ದರು.
ಇದನ್ನೂ ಓದಿ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ