ಬಹುನಿರೀಕ್ಷಿತ ಕನ್ನಡ ಬಿಗ್ ಬಾಸ್ ಸೀಸನ್ 10 ಪಾರಂಭಗೊಂಡಿದೆ. ಜನಪ್ರಿಯ ರಿಯಾಲಿಟಿ ಶೋ ಆರಂಭದಲ್ಲೇ ಸದ್ದು ಮಾಡುತ್ತಿದೆ. ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಗೆ ಹೋಗಿ ಬಂದಿದ್ದಾರೆ. ಅಷ್ಟಕ್ಕೂ ಒಂದು ದಿನದ ಮಟ್ಟಿಗೆ ಬಿಗ್ ಬಾಸ್ ಮನೆಗೆ ಹೋಗಿದ್ದ ಕಾರಣವೇನು? ಎಂಬುದರ ಬಗ್ಗೆ ಸ್ವತಃ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿದ್ದಾರೆ.
ಅಭಿನಯ ಚಕ್ರವರ್ತಿ ಸುದೀಪ್ ನಡೆಸಿಕೊಡುವ 'ಕನ್ನಡ ಬಿಗ್ ಬಾಸ್' ಮನೆಗೆ 17 ಸ್ಪರ್ಧಿಗಳನ್ನು ಕಳುಹಿಸಿದ್ದರು. ಸೋಮವಾರದಂದು 18ನೇ ಸ್ಪರ್ಧಿಯಾಗಿ ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್, ದೊಡ್ಮನೆಗೆ ಎಂಟ್ರಿ ಕೊಟ್ಟರು. ಅವರು ಮನೆಗೆ ಅತಿಥಿಯಾಗಿ ಹೋಗಿದ್ದರೋ ಅಥವಾ ಸ್ಪರ್ಧಿಯಾಗಿ ಹೋಗಿದ್ದರೋ ಎಂಬ ವಿಷಯದಲ್ಲಿ ಗೊಂದಲವಿತ್ತು.
ಶಾಸಕರು ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟ ಬೆನ್ನಲ್ಲೇ ವಾದ ವಿವಾದ ಸಹ ಪ್ರಾರಂಭವಾಗಿತ್ತು. ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಶಾಸಕರೊಬ್ಬರು, ತಮ್ಮ ಜವಾಬ್ದಾರಿಯನ್ನು ಮರೆತು ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವುದು ಎಷ್ಟು ಸರಿ? ಎಂಬ ಪ್ರಶ್ನೆ ಕೇಳಿಬಂದಿತ್ತು. ಅಷ್ಟೇ ಅಲ್ಲ, ಅವರನ್ನು ತಮ್ಮ ಶಾಸಕ ಸ್ಥಾನದಿಂದ ವಜಾ ಮಾಡಬೇಕು ಎಂದು ಸಭಾಪತಿಗಳಿಗೆ ದೂರನ್ನೂ ಸಹ ನೀಡಲಾಗಿತ್ತು.
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿರೋ ಶಾಸಕ ಪ್ರದೀಪ್ ಈಶ್ವರ್, ನಾನು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗಿರಲಿಲ್ಲ, ಬದಲಾಗಿ ಅತಿಥಿಯಾಗಿ ಹೋಗಿದ್ದೆ. ಬಿಗ್ ಬಾಸ್ ಎನ್ನುವುದು ದೊಡ್ಡ ವೇದಿಕೆ. ಆ ಕಾರ್ಯಕ್ರಮಕ್ಕೆ ಸಾಕಷ್ಟು ವೀಕ್ಷಕರಿದ್ದಾರೆ. ಕಾರ್ಯಕ್ರಮ ನಡೆಸಿಕೊಡುವ ತಂಡ ಎರಡ್ಮೂರು ತಾಸಿಗೆ ಅತಿಥಿಯಾಗಿ ಬನ್ನಿ ಎಂದು ಕರೆದರು.
ಯಾರು ಕರೆದರೂ ಹೋಗಿ ಮಾತನಾಡುತ್ತೇನೆ, ಸಂದರ್ಶನ ಕೊಡುತ್ತೇನೆ. ಅದೊಂದು ಸೌಜನ್ಯ. ಇನ್ನು ಯುವಕರಿಗೆ ಒಂದು ಸಂದೇಶ ಕೊಡಬೇಕಿತ್ತು. ಅಪ್ಪ ಅಮ್ಮನ ಮಹತ್ವ ಹೇಳಬೇಕಿತ್ತು. ಯುವಕರನ್ನು ಮೋಟಿವೇಟ್ ಮಾಡಬೇಕಿತ್ತು. ನಾನು ನನ್ನ ಯೂಟ್ಯೂಬ್ ಚಾನಲ್ ಸೇರಿದಂತೆ ಹಲವು ವೇದಿಕೆಗಳಲ್ಲಿ ಈ ಕೆಲಸ ಮಾಡುತ್ತಿದ್ದೇನೆ. ಅದೇ ರೀತಿ ಈ ವೇದಿಕೆಯಲ್ಲೂ ಅದನ್ನೇ ಮಾಡಿದ್ದೇನೆ. ಮಿಕ್ಕಂತೆ ಏನೂ ಇಲ್ಲ. ಅಲ್ಲಿ ಹೋಗಿ ನಾನು ಓರ್ವ ಸ್ಪರ್ಧಿ ಎಂದು ಪ್ರ್ಯಾಂಕ್ ಮಾಡಬೇಕಿತ್ತು, ಅದನ್ನು ಮಾಡಿದೆ ಅಷ್ಟೇ. ನಿಮ್ಮ ಒಂದು ಎಪಿಸೋಡ್ ಹೋಗಲಿ, ಒಂದಿಷ್ಟು ಕುತೂಹಲ ಇರಲಿ ಎಂದು ಚಾನಲ್‍ನವರು ಹೇಳಿದ್ದರು. ಅದರಂತೆ ಒಂದು ಕಂತಿನಲ್ಲಿ ಮಾತ್ರ ಇದ್ದು ಬಂದೆ ಎಂದು ಶಾಸಕರು ತಿಳಿಸಿದರು.
ಇದನ್ನೂ ಓದಿ: ಒಂದು ವರ್ಷದ ಬಳಿಕ ಭಾರತಕ್ಕೆ ಆಗಮಿಸಿದ ರಿಷಬ್ ಶೆಟ್ಟಿ ನಿರ್ಮಾಣದ 'ಶಿವಮ್ಮ' ಸಿನಿಮಾ: ಟೀಸರ್ ರಿಲೀಸ್
ಇನ್ನೂ ಟೀಕೆಗಳಿಗೆ ಪ್ರತಿಕ್ರಿಯಿಸಿದ ಶಾಸಕರು, ನಾವು ಹೊಸ ತಲೆಮಾರಿನ ರಾಜಕಾರಣಿಗಳು. ಹೊಗಳಿದರೂ, ತೆಗಳಿದರೂ ಗೌರವ ಕೊಡಬೇಕು. ರಾಜಕಾರಣಿಗಳ ಮೊದಲ ಅರ್ಹತೆ ತೆಗಳಿಸಿಕೊಳ್ಳುವುದು. ಅದರಲ್ಲಿ ತಪ್ಪೇನಿಲ್ಲ. ಅವರವರ ಅಭಿಪ್ರಾಯ. ಸರಿ ಎನ್ನುವವರು ಇದ್ದಾರೆ, ತಪ್ಪು ಎನ್ನುವವರೂ ಇದ್ದಾರೆ. ಸರಿ ತಪ್ಪು ಎಂದವರು ಟಿವಿ ಮುಂದೆ ಕುಳಿತಿದ್ದರು. ನಾನು ಹೇಳಿದ್ದನ್ನು ಕೇಳಿದ್ರು. ಎಂದಿನಂತೆ ನಾನೀಗ ನನ್ನ ಕೆಲಸಗಳನ್ನು ಮಾಡುತ್ತಿದ್ದೇನೆ. ಒಂದೊಳ್ಳೆ ವೇದಿಕೆಯಲ್ಲಿ ಒಂದೊಳ್ಳೆ ಸಂದೇಶ ಕೊಟ್ಟು ಬಂದೆ. ನನಗೆ ಆ ಬಗ್ಗೆ ಖುಷಿ ಇದೆ. ಕೋಟ್ಯಂತರ ಕನ್ನಡಿಗರನ್ನು ರೀಚ್ ಆಗಿದ್ದೇನೆ ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು.
ನಾನೊಬ್ಬ ಶಾಸಕ, ನನಗೂ ಜವಾಬ್ದಾರಿ ಇದೆ ಎಂದ ಪ್ರದೀಪ್ ಈಶ್ವರ್, ಕಾರ್ಯಕ್ರಮಕ್ಕೆ ಕೇವಲ ಮೂರು ಗಂಟೆ ಮಾತ್ರ ಹೋಗಿದ್ದೆ. ಶೋಗೆ ಹೈಪ್ ಬರಬೇಕು, ಒಂದು ದಿನ ಯಾರಿಗೂ ಸಿಗಬೇಡಿ ಸರ್ ಎಂದು ಚಾನಲ್ ಗೆಳೆಯರು ತಿಳಿಸಿದ್ದರು. ಅದಕ್ಕೆ ಗೌರವ ಕೊಟ್ಟು ಸುಮ್ಮನಿದ್ದೆ. ಆದರೆ, ಈ ಕುರಿತು ಏನೇನೋ ಚರ್ಚೆಗಳಾದವು. ಅದಕ್ಕೂ ಗೌರವ ಕೊಡುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಒಂದೇ ದಿನಕ್ಕೆ ಬಿಗ್ ಬಾಸ್ ಮನೆಯಿಂದ ಹೊರಬಂದ ಶಾಸಕ ಪ್ರದೀಪ್ ಈಶ್ವರ್
ಮಾಜಿ ಸಚಿವ ಡಾ. ಸುಧಾಕರ್ ಮಾಡಿದ ಆರೋಪಗಳಿಗೆ ಉತ್ತರಿಸಿದ ಪ್ರದೀಪ್ ಈಶ್ವರ್, ಸುಧಾಕರ್ ಅವರಿಗೆ ನಾನು ರಿಯಾಲಿಟಿ ಶೋಗೆ ಹೋಗಿದ್ದು ಮಾತ್ರ ಕಾಣಿಸುತ್ತದೆ. ಅದೇ ನಾನು ಚಿಕ್ಕಬಳ್ಳಾಪುರದ ಜನತೆಯ ಮನೆ ಬಾಗಿಲಿಗೆ ಹೋಗಿ ಸಮಸ್ಯೆಗಳನ್ನು ವಿಚಾರಿಸುತ್ತೇನೆ. ಅಪ್ಪ ಅಮ್ಮ ಇಲ್ಲದ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ನಾನು 7 ರಿಂದ 10 ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ. ಆ ಬಗ್ಗೆ ಏಕೆ ಮಾತನಾಡಲ್ಲ ಎಂದು ಪ್ರಶ್ನಿಸಿದರು.