ನಮ್ಮೂರ ಮಂದಾರ ಹೂವೆ ಚಿತ್ರದ ಮೂಲಕ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ವಿನಾಯಕ ಜೋಶಿ ಈವರೆಗೂ ಸುಮಾರು 85 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ನಟನಾಗಿ ಅಷ್ಟೇ ಅಲ್ಲದೇ ಆರ್.ಜೆ ಹಾಗೂ ನಿರೂಪಕನಾಗಿಯೂ ಇವರು ಕನ್ನಡಿಗರ ಮನ ಗೆದ್ದಿದ್ದಾರೆ.
ಸದ್ಯ ವಿನಾಯಕ ಜೋಶಿ ತಮ್ಮದೇ ಆದ ಜೋಶಿ ಚಿತ್ರ ಲಾಂಛನದಲ್ಲಿ 'ಮೀಟರ್ ಹಾಕಿ ಪ್ಲೀಸ್' ಎಂಬ ವೆಬ್ ಸೀರಿಸ್ ನಿರ್ಮಾಣ ಮಾಡಿದ್ದಾರೆ. ಇದಕ್ಕೆ ನಿರ್ದೇಶನ ಹಾಗೂ ನಿರೂಪಣೆ ಕೂಡ ಅವರದೇ. ಇತ್ತೀಚೆಗೆ ಈ ವೆಬ್ ಸಿರೀಸ್ನ ಟ್ರೇಲರ್ ಬಿಡುಗಡೆ ಮಾಡಲಾಗಿತ್ತು. ಇದೀಗ ಮೊದಲ ಸಂಚಿಕೆ ಪ್ರದರ್ಶನ ನಡೆದಿದೆ. ಗಂಧದ ಗುಡಿ ಸಿನಿಮಾ ಖ್ಯಾತಿಯ ಅಮೋಘವರ್ಷ ಹಾಗು ಧರ್ಮೇಂದ್ರ ಕುಮಾರ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ವೆಬ್ ಸಿರೀಸ್ಗೆ ಒಳ್ಳೆಯದಾಗಲಿ ಎಂದು ಹರಸಿದರು.
ಮೊದಲು ಮಾತನಾಡಿದ ನಟ ವಿನಾಯಕ ಜೋಷಿ, ಬಾಲನಟನಾಗಿ ಬಂದ ನಾನು ನಾಯಕನೂ ಆದೆ. ಆ ನಂತರ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿದ್ದೇನೆ. ಕೆಲವು ವರ್ಷಗಳ ಹಿಂದೆ 'ಜೋಶ್ ಲೆ' ಎಂಬ ವೆಬ್ ಸಿರೀಸ್ ನಿರ್ಮಿಸಿದ್ದೆ. ಈಗ "ಮೀಟರ್ ಹಾಕಿ ಪ್ಲೀಸ್" ಎಂಬ ವಿಭಿನ್ನ ವೆಬ್ ಸಿರೀಸ್ ನಿರ್ಮಿಸುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದೇನೆ.
ಆಟೋ ಚಾಲಕರ ಜೀವನ ಹಾಗೂ ಸಾಧನೆಯನ್ನು ಪರಿಚಯಿಸುವ ವೆಬ್ ಸಿರೀಸ್ ಇದಾಗಿದೆ. ಸುಮಾರು ಏಳು ಕಂತುಗಳಲ್ಲಿ ಯೂಟ್ಯೂಬ್ ಹಾಗೂ Spotify ನಲ್ಲಿ ಇದು ಪ್ರಸಾರವಾಗಲಿದೆ. ಕರ್ನಾಟಕದಾದ್ಯಂತ ಇರುವ ಹತ್ತಕ್ಕೂ ಹೆಚ್ಚು ಜನಪ್ರಿಯ ಆಟೋ ಚಾಲಕರನ್ನೂ ಸಂದರ್ಶಿಸಿದ್ದೇನೆ. 40 ನಿಮಿಷಗಳ ಕಾಲ ಈ ಕಾರ್ಯಕ್ರಮ ಪ್ರಸಾರವಾಗಲಿದೆ.
ನಮ್ಮ ಸುಮಾರು 25 ಜನರ ತಂಡದ ಪರಿಶ್ರಮದಿಂದ ಈ ವೆಬ್ ಸಿರೀಸ್ ಮೂಡಿಬಂದಿದೆ. ಹಲವು ಪ್ರಾಯೋಜಕರ ಬೆಂಬಲ ನಮಗಿದೆ ಎಂದು ವಿನಾಯಕ ಜೋಶಿ 'ಮೀಟರ್ ಹಾಕಿ ಪ್ಲೀಸ್' ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ್ದ ಆಟೋ ಚಾಲಕರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ: 'ನನ್ನ ಕೈಯಿಂದ ಸಿಗರೇಟ್ ಕಿತ್ತು ಬಿಸಾಡಿದ್ದರು': ಶರತ್ ಬಾಬು ಬಗ್ಗೆ ರಜನಿಕಾಂತ್ ಭಾವುಕ ನುಡಿ