ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ಬಹು ನಿರೀಕ್ಷೆಯೊಂದಿಗೆ ಸಖತ್ ಟಾಕ್ ಆಗುತ್ತಿರುವ ಸಿನಿಮಾ 'ಮಾರ್ಟಿನ್'. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿರುವ ಮಾರ್ಟಿನ್ ಚಿತ್ರದ ಟೀಸರ್ ಇಂದು ಸಂಜೆ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ನಿರ್ದೇಶಕ ಎ.ಪಿ ಅರ್ಜುನ್ ಹಾಗೂ ನಿರ್ಮಾಪಕ ಉದಯ್ ಕೆ ಮೆಹ್ತಾ ಅಭಿಮಾನಿಗಳಿಗಾಗಿ ಮಾಗಡಿ ರಸ್ತೆಯಲ್ಲಿರೋ ವೀರೇಶ್ ಚಿತ್ರಮಂದಿರದಲ್ಲಿ ಪೈಡ್ (paid teaser show) ಟೀಸರ್ ಶೋ ಅನ್ನು ಹಮ್ಮಿಕೊಂಡಿದ್ದರು. ಟಿಕೆಟ್ ಖರೀದಿಸಿ ಟೀಸರ್ ವೀಕ್ಷಿಸಿದ ಪ್ರೇಕ್ಷಕರು ಧ್ರುವ ಸರ್ಜಾರ ಮಾರ್ಟಿನ್ ಅವತಾರ ಕಂಡು ಹುಚ್ಚೆದ್ದು ಕುಣಿದಿದ್ದಾರೆ.
ವೀರೇಶ್ ಚಿತ್ರಮಂದಿರದಲ್ಲಿ ಮಾರ್ಟಿನ್ ಟೀಸರ್ ಶೋ ಹಮ್ಮಿಕೊಳ್ಳಲಾಗಿತ್ತು. ಈ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ರಾಜಾಜಿ ನಗರದಿಂದ ವೀರೇಶ್ ಥಿಯೇಟರ್ವರೆಗೂ ರ‍್ಯಾಲಿ ಮೂಲಕ ಸಾವಿರಾರು ಅಭಿಮಾನಿಗಳ ದಂಡು ಡೊಳ್ಳು ಕುಣಿತದ ಮೂಲಕ ವೀರೇಶ್ ಚಿತ್ರಮಂದಿರಕ್ಕೆ ಬಂದರು. ಈ ರ‍್ಯಾಲಿಯಲ್ಲಿ ನಿರ್ದೇಶಕ ಎ.ಪಿ ಅರ್ಜುನ್, ನಿರ್ಮಾಪಕ ಉದಯ್ ಕೆ. ಮೆಹ್ತಾ, ನಟಿ ವೈಭವಿ ಶಾಂಡಿಲ್ಯ ಸೇರಿದಂತೆ ಇಡೀ ಮಾರ್ಟಿನ್ ಚಿತ್ರತಂಡ ಭಾಗವಹಿಸಿತ್ತು.
ಸರಿ ಸುಮಾರು 1.30ಕ್ಕೆ ಮಾರ್ಟಿನ್ ಟೀಸರ್ ಅನ್ನು ಅಭಿಮಾನಿಗಳಿಗಾಗಿ ಪ್ರದರ್ಶನ ಮಾಡಲಾಯಿತು. ನಿರ್ದೇಶಕ ಎ.ಪಿ ಅರ್ಜುನ್ ಹಾಗೂ ನಿರ್ಮಾಪಕ ಉದಯ್ ಕೆ. ಮೆಹ್ತಾ ಅಂದುಕೊಂಡಂತೆ ಹಾಲಿವುಡ್ ಶೈಲಿಯ ಆ್ಯಕ್ಷನ್ ಸಿನಿಮಾದಂತೆ ಮಾರ್ಟಿನ್ ಚಿತ್ರದ ಟೀಸರ್ ಮೂಡಿ ಬಂದಿದೆ. ಅದರಲ್ಲಿ ಧ್ರುವ ಸರ್ಜಾರ ಅಭಿನಯ ಅಭಿಮಾನಿಗಳ ಕಣ್ಮನ ಸೆಳೆದಿದೆ. ಟೀಸರ್ ವೀಕ್ಷಿಸಿದ ಅಭಿಮಾನಿಗಳು ಧ್ರುವ ಸರ್ಜಾರ ನಟನೆಗೆ ಜೈಕಾರ ಹೇಳಿದ್ದಾರೆ.
ಇಂದು ಸಂಜೆ 6 ಗಂಟೆಗೆ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಯ ಮಾರ್ಟಿನ್ ಟೀಸರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಒರಾಯನ್ ಮಾಲ್ನಲ್ಲಿ ನಡೆಯಲಿದೆ. ನಿರ್ದೇಶಕ ಎ.ಪಿ ಅರ್ಜುನ್ ಹೇಳುವ ಹಾಗೆ ಮಾರ್ಟಿನ್ ಸಿನಿಮಾ ಔಟ್ ಅಂಡ್ ಔಟ್ ಸಾಹಸಮಯ ಚಿತ್ರ. ಇದರಲ್ಲಿ ದೇಶ ಪ್ರೇಮ, ಒಂದು ಮುದ್ದಾದ ಲವ್ ಸ್ಟೋರಿ, ಫ್ಯಾಮಿಲಿ ಸ್ಟೋರಿಯೂ ಇರಲಿದೆ ಎಂದು ಚಿತ್ರತಂಡ ಈ ಮೊದಲಿನಿಂದಲೂ ಹೇಳುತ್ತಾ ಬಂದಿದೆ. ಈ ಮಾತಿನಂತೆ ಟೀಸರ್ ಮೂಡಿ ಬಂದಿದೆ.
ಇದನ್ನೂ ಓದಿ: 50ನೇ ವಯಸ್ಸಿಗೆ 2ನೇ ಮದುವೆಯಾಗಲು ಹೊರಟ ಕಿರುತೆರೆ ನಟ ಸಚಿನ್ ಶ್ರಾಫ್
ಧ್ರುವ ಸರ್ಜಾ ಕೆ.ಎಂ 232 ಎಂಬ ಹೆಸರಿನ ಮಿಷನ್ ಗನ್ ಹಿಡಿದು ಶತ್ರುಗಳನ್ನು ಸಂಹಾರ ಮಾಡುವ ದೃಶ್ಯ ಇದೆ. ಧ್ರುವ ಸರ್ಜಾರ ಎಡಗೈ ಭುಜದ ಮೇಲೆ ಇಂಡಿಯಾ ಅಂತಾ ಹಾಕಿಸಿಕೊಂಡಿರುವ ಟ್ಯಾಟೂ ನೋಡಿದರೆ ಸಾಕು ಈ ಕಥೆಯಲ್ಲಿ ಧ್ರುವ ಸರ್ಜಾ ದೇಶಭಕ್ತ ಅನ್ನೋದು ಪಕ್ಕಾ ಆಗುತ್ತೆ. ಧ್ರುವ ಸರ್ಜಾ ಜೋಡಿಯಾಗಿ ವೈಭವಿ ಶಾಂಡಿಲ್ಯ ರೊಮ್ಯಾನ್ಸ್ ಮಾಡಿದ್ದು, ಅನ್ವೇಶಿ ಜೈನ್, ನಿಕಿತೀನ್ ಧೀರ್ ಸೇರಿದಂತೆ ದೊಡ್ಡ ತಾರಾ ಬಳಗ ಈ ಚಿತ್ರದಲ್ಲಿದೆ.
ಬೆಂಗೂಳೂರು, ಉತ್ತರ ಭಾರತದ ಕಾಶ್ಮೀರದ ಸುಂದರ ತಾಣಗಳಲ್ಲಿ ಮಾರ್ಟಿನ್ ಚಿತ್ರೀಕರಣ ಮಾಡಲಾಗಿದೆ. ಕಾಶ್ಮೀರದ ಐಸ್‌ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್‌ಗಳು ಸಹ ಚಿತ್ರದಲ್ಲಿದೆ. ಮಾರ್ಟಿನ್ ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶಗಳನ್ನು ಸಾಹಸ ನಿರ್ದೇಶಕರಾದ ರವಿವರ್ಮ ಹಾಗೂ ರಾಮ್ ಲಕ್ಷ್ಮಣ್ ನಿರ್ದೇಶಿಸಿದ್ದಾರೆ.
ಇದನ್ನೂ ಓದಿ: ಮಾರ್ಟಿನ್ ಟೀಸರ್ ಟಿಕೆಟ್ನಿಂದ ಬಂದ ಹಣ ಗೋ ಶಾಲೆಗಳ ಅಭಿವೃದ್ಧಿಗೆ ಬಳಕೆ!
ಈ ಚಿತ್ರಕ್ಕೆ ತೆಲುಗಿನ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್ ಮಣಿಶರ್ಮಾ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಮಾರ್ಟಿನ್ ಚಿತ್ರದ ಇನ್ನೊಂದು ವಿಶೇಷತೆ ಅಂದರೆ ರವಿ ಬಸ್ರೂರ್ ಈ ಚಿತ್ರತಂಡದ ಜೊತೆ ಕೈ ಜೋಡಿಸಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣ, ಮಹೇಶ್‌ರೆಡ್ಡಿ ಅವರ ಸಂಕಲನ ಈ ಚಿತ್ರಕ್ಕಿದೆ. ಉದಯ್ ಮೆಹ್ತಾ ಮಾರ್ಟಿನ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಉದಯ್ ಮೆಹ್ತಾ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ.