ಬೆಳಗಾವಿ: ಮರಾಠಿ ಚಲನಚಿತ್ರ ಬಾಯ್ಸ್-3 ಚಲನಚಿತ್ರ ಇಂದು ಮಹಾರಾಷ್ಟ್ರ ಸೇರಿದಂತೆ ಕೆಲವೆಡೆ ಬಿಡುಗಡೆ ಆಗಿದೆ. ಆದರೆ ಈ ಚಿತ್ರವನ್ನು ಬೆಳಗಾವಿ ಜಿಲ್ಲೆ, ಕರ್ನಾಟಕದಲ್ಲಿ ಬಿಡುಗಡೆಯಾಗದಂತೆ ಕ್ರಮ ಕೈಗೊಳ್ಳಬೇಕು, ಚಿತ್ರವನ್ನು ನಿಷೇಧಿಸುವಂತೆ ಆಗ್ರಹಿಸಿ ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಅವರಿಗೆ ಮನವಿ ಸಲ್ಲಿಸಿದ್ದರು. ಸಂಘಟನೆಗಳ ಮನವಿ ಮೇರೆಗೆ ಪೊಲೀಸ್ ಕಮಿಷನರ್ ಕ್ರಮ ಕೈಗೊಂಡಿದ್ದು, ಬಾಯ್ಸ್ 3 ಸಿನಿಮಾ ಬಿಡುಗಡೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.
ಬಾಯ್ಸ್-3 ಮರಾಠಿ ಚಲನಚಿತ್ರವು ಮರಾಠಿಗರು, ಕನ್ನಡಿಗರ ಬಾಂಧವ್ಯಕ್ಕೆ ಧಕ್ಕೆ ತರುವಂತಹ ಸನ್ನಿವೇಶಗಳನ್ನು ಒಳಗೊಂಡಿದೆ. ಚಿತ್ರದ ಒಂದು ದೃಶ್ಯದಲ್ಲಿ, ಕರ್ನಾಟಕ ಪೊಲೀಸ್ ಠಾಣೆಗೆ ಬಂದು ನಮ್ಮ ಪೊಲೀಸರಿಗೆ ನಿಮಗೆ ನಿಮ್ಮ ಕನ್ನಡ ಭಾಷೆಯ ಮೇಲೆ ಅಭಿಮಾನವಿದ್ದರೆ, ನಮಗೂ ನಮ್ಮ ಮರಾಠಿ ಭಾಷೆಯ ಮೇಲೆ ದುಪ್ಪಟ್ಟು ಅಭಿಮಾನವಿದೆ. ಅಷ್ಟಕ್ಕೂ ಮಾರಾಠಿ ಭಾಷೆಯನ್ನು ಬೆಳಗಾವಿಯಲ್ಲಿ ಮಾತನಾಡದಿದ್ದರೆ ಮತ್ತೆಲ್ಲಿ ಮಾತನಾಡುವುದು ಎಂಬ ಹೇಳಿಕೆಯು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡಿದೆ. ಈ ಚಲನಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾದರೆ ಕನ್ನಡ ಮರಾಠಿ ಭಾಷಾ ಬಾಂಧವ್ಯ ಹದೆಗಟ್ಟು, ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ. ಆದ್ದರಿಂದ ಇಂದು ಬೆಳಗಾವಿ ಜಿಲ್ಲೆ, ಕರ್ನಾಟಕದಲ್ಲಿ ಬಿಡುಗಡೆಯಾದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದರು.
ಇದನ್ನೂ ಓದಿ: 17 ಸಾವಿರ ಅಡಿ ಎತ್ತರದ ಖರ್ದುಂಗ್ ಲಾ ಪಾಸ್‌ನಲ್ಲಿ ರಾರಾಜಿಸಿದ ಕನ್ನಡ ಧ್ವಜ, ಅಪ್ಪು ಭಾವಚಿತ್ರ
ಈ ವೇಳೆ ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ, ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಉಪಾಧ್ಯಕ್ಷ ಸುರೇಶ ಗವನ್ನವರ, ಗಣೇಶ ರೊಕ್ಕಡೆ, ಬಾಲು ಜಡಗಿ, ನಿಂಗರಾಜ ಗುಂಡ್ಯಾಗೋಳ, ಅಶೋಕ ಅಂಗಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.