ನಟ ಮತ್ತು ಬಿಜೆಪಿ ನಾಯಕ ಮನೋಜ್ ತಿವಾರಿ (Manoj Tiwari) ಅವರು 'ದಿ ಕೇರಳ ಸ್ಟೋರಿ'ಯನ್ನು ಟೀಕಿಸಿದ್ದಕ್ಕಾಗಿ ಖ್ಯಾತ ನಟ ನಾಸಿರುದ್ದೀನ್ ಶಾ (Naseeruddin Shah) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇತ್ತೀಚೆಗಷ್ಟೇ ನಾಸಿರುದ್ದೀನ್ ಶಾ ಸಂದರ್ಶನವೊಂದರಲ್ಲಿ ಕೇರಳ ಸ್ಟೋರಿ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಮಾತನಾಡುತ್ತಾ "ಡೇಂಜರೆಂಸ್ ಟ್ರೆಂಡ್" ಎಂದು ಉಲ್ಲೇಖಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಮನೋಜ್ ತಿವಾರಿ, 'ನಾಸಿರುದ್ದೀನ್ ಶಾ ಓರ್ವ ಪ್ರತಿಭಾವಂತ ನಟ. ಆದರೆ ಅವರ ಉದ್ದೇಶ ಸರಿಯಾಗಿಲ್ಲ' ಎಂದು ಹೇಳಿದ್ದಾರೆ.
'ದಿ ಕೇರಳ ಸ್ಟೋರಿ' ಕಥೆಯನ್ನು ಸುದೀಪ್ತೋ ಸೇನ್ ಬರೆದು, ಆ್ಯಕ್ಷನ್ ಕಟ್ ಹೇಳಿದ್ದಾರೆ. ಅದಾ ಶರ್ಮಾ ಮುಖ್ಯಭೂಮಿಕೆಯಲ್ಲಿದ್ದು, ಯೋಗಿತಾ ಬಿಹಾನಿ, ಸಿದ್ಧಿ ಇದ್ನಾನಿ ಮತ್ತು ಸೋನಿಯಾ ಬಲಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಲನಚಿತ್ರವು ಮೇ 5ರಂದು ಥಿಯೇಟರ್ಗಳಲ್ಲಿ ತೆರೆ ಕಂಡಿತು. ಬಿಡುಗಡೆಗೂ ಮುನ್ನ ವಿವಾದಕ್ಕೊಳಗಾದ ಈ ಚಿತ್ರ, ತೆರೆ ಕಂಡ ಬಳಿಕ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತು. ಆದಾಗ್ಯೂ, ವಿಪುಲ್ ಶಾ ನಿರ್ಮಾಣದ ಈ ಚಿತ್ರ 2023ರ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ಒಂದಾಗಿದೆ.
ಈಗಾಗಲೇ 230 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಕಳೆದೊಂದು ತಿಂಗಳಿನಿಂದ ಈ ಸಿನಿಮಾ ಬಗ್ಗೆ ಸಾಕಷ್ಟು ಪರ - ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ನಟ, ರಾಜಕಾರಣಿಯಾಗಿರುವ ಮನೋಜ್ ತಿವಾರಿ ಇತ್ತೀಚಿನ ಸಂದರ್ಶನವೊಂದರಲ್ಲಿ ಸಿನಿಮಾ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 'ದಿ ಕೇರಳ ಸ್ಟೋರಿ'ಯಂತಹ ಚಲನಚಿತ್ರಗಳು ನೈಜ ಘಟನೆಗಳನ್ನು ಆಧರಿಸಿವೆ ಎಂದು ಹೇಳಿದ್ದಾರೆ. ಜೊತೆಗೆ ಸಿನಿಮಾ ಕುರಿತು ನಾಸಿರುದ್ದೀನ್ ಶಾ ಅವರ ಹೇಳಿಕೆಗೂ ಪ್ರತಿಕ್ರಿಯಿಸಿದ್ದಾರೆ.
"ನಾಸಿರುದ್ದೀನ್ ಶಾ ಅವರು ಉತ್ತಮ ನಟ, ಆದರೆ ಅವರ ಉದ್ದೇಶ ಒಳ್ಳೆದಿಲ್ಲ. ನಾನು ಬಹಳ ದುಃಖದಿಂದ ಇದನ್ನು ಹೇಳುತ್ತಿದ್ದೇನೆ. ಅಂಗಡಿಯಲ್ಲಿ ಕುಳಿತ ವ್ಯಕ್ತಿ ಮಹಿಳೆಯ ಬಗ್ಗೆ ಅವಹೇಳನ ಮಾಡುವ ಚಿತ್ರಗಳನ್ನು ಚಿತ್ರಿಸಿದಾಗ ನಾಸೀರ್ ಸಾಬ್ (ನಾಸಿರುದ್ದೀನ್ ಶಾ) ಅವರಿಗೆ ಹೇಳಲು ಏನೂ ಇರಲಿಲ್ಲ. ಒಬ್ಬ ಭಾರತೀಯನಾಗಿ ಮತ್ತು ಓರ್ವ ಮನುಷ್ಯನಾಗಿ ಅವರು ತಮ್ಮನ್ನು ಗುರುತಿಸಿಕೊಂಡ ರೀತಿ ಚೆನ್ನಾಗಿಲ್ಲ" ಎಂದು ತಿವಾರಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ನೀವು ಎಷ್ಟು ದಿನ ದ್ವೇಷ ಹರಡುತ್ತೀರಿ?: 'ದಿ ಕೇರಳ ಸ್ಟೋರಿ' ಬಗ್ಗೆ ಪ್ರಸಿದ್ಧ ನಟ ಹೇಳಿದ್ದಿಷ್ಟು
ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟ ನಾಸಿರುದ್ದೀನ್ ಶಾ ಕೇರಳ ಸ್ಟೋರಿ ಸಕ್ಸಸ್ ಬಗ್ಗೆ ಮಾತನಾಡಿ, "ಭೀದ್, ಫರಾಜ್ನಂತಹ ಸಿನಿಮಾಗಳು ಕುಸಿದವು. ಯಾರೂ ಅವುಗಳನ್ನು ವೀಕ್ಷಿಸಲು ಹೋಗಲಿಲ್ಲ. ಆದರೆ, ಪ್ರೇಕ್ಷಕರು ಕೇರಳ ಸ್ಟೋರಿಯನ್ನು ನೋಡಲು ಹೋಗುತ್ತಿದ್ದಾರೆ. ಇದು ಅಪಾಯಕಾರಿ ಪ್ರವೃತ್ತಿ'' ಎಂದು ಹೇಳಿದ್ದರು.
ಇದನ್ನೂ ಓದಿ: Photos: ಮಳೆ, ಚಳಿ, ಬಿಸಿಲು ಲೆಕ್ಕಕ್ಕಿಲ್ಲ - 'ಕೇರಳ ಸ್ಟೋರಿ' ಅದಾ ಶರ್ಮಾ ಶ್ರಮ