ಹೈದರಾಬಾದ್: ನಟಿ, ಫಿಟ್ನೆಸ್ ಫ್ರೀಕ್ ಮಲೈಕಾ ಅರೋರಾ ಗರ್ಭಿಣಿ, ಅರ್ಜುನ್ ಕಪೂರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಬಾಲಿವುಡ್ನಲ್ಲಿ ಗುಲ್ಲೆಬ್ಬಿಸಿದೆ. ವದಂತಿ ಬಳಿಕ ವಿವರಣೆ ನೀಡಿರುವ ಅರ್ಜುನ್ ಕಪೂರ್, ಇದು ಸುಳ್ಳು ಸುದ್ದಿ. ಈ ರೀತಿ ವೈಯಕ್ತಿಕ ಜೀವನದ ಜೊತೆ ಚೆಲ್ಲಾಟವಾಡಬೇಡಿ ಎಂದು ವದಂತಿ ಹಬ್ಬಿಸಿದವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಕೆಲ ವರ್ಷಗಳಿಂದ ಪರಸ್ಪರ ಡೇಟಿಂಗ್ ನಡೆಸುತ್ತಿರುವ ಇಬ್ಬರೂ ತಮ್ಮ ಪ್ರೀತಿಯನ್ನು ಇತ್ತೀಚೆಗಷ್ಟೇ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದರು. ಈ ವರ್ಷಾಂತ್ಯದಲ್ಲಿ ಇಬ್ಬರೂ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಆದರೆ, ಈವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಜೋಡಿಹಕ್ಕಿಯ ವಿದೇಶ ಪ್ರವಾಸ: ಅರ್ಜುನ್ ಮತ್ತು ಮಲೈಕಾ ಈ ವರ್ಷ ಪ್ಯಾರಿಸ್ ಮತ್ತು ಲಂಡನ್‌ನಲ್ಲಿ ರಜಾ ದಿನಗಳನ್ನು ಕಳೆದಿದ್ದರು. ಮಲೈಕಾ ಪ್ಯಾರಿಸ್‌ನಲ್ಲಿ ಗೆಳೆಯ ಅರ್ಜುನ್ ಕಪೂರ್ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿದ್ದರು. ಇಬ್ಬರೂ ಜೊತೆಗಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದವು.
ಗರ್ಭಿಣಿ ಸುದ್ದಿ ಅಲ್ಲಗಳೆದ ಅರ್ಜುನ್ ಕಪೂರ್: ಮಲೈಕಾ ಅರೋರಾ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿರುವ ಅರ್ಜುನ್ ಕಪೂರ್ ಇದು ಸುಳ್ಳು ಸುದ್ದಿ. ಮನರಂಜನೆಗಾಗಿ ನಮ್ಮ ವೈಯಕ್ತಿಕ ಜೀವನವನ್ನು ಬಳಸಿಕೊಳ್ಳಬೇಡಿ. ಇಷ್ಟು ಕೀಳುಮಟ್ಟಕ್ಕೆ ಇಳಿಯುತ್ತೀರಿ ಎಂದು ನಾನು ಭಾವಿಸಿರಲಿಲ್ಲ ಎಂದು ಕಿಡಿಕಾರಿದ್ದಾರೆ.
ಸುದ್ದಿ ಮಾಡಿದ ಮನರಂಜನಾ ವೆಬ್ಸೈಟ್ನ ಸ್ಕ್ರೀನ್ಶಾಟ್ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಅರ್ಜುನ್, ಇಂತಹ ಸುಳ್ಳು ಸುದ್ದಿಗಳನ್ನು ಮಾಡುವ ಧೈರ್ಯ ಹೇಗೆ ಬರುತ್ತದೆ. ಸಂವೇದನಾಶೀಲ ಮತ್ತು ಸಂಪೂರ್ಣ ಅನೈತಿಕವಾದ ನಡೆಯಾಗಿದೆ. ಗಾಸಿಪ್ಗಳನ್ನು ನಾವು ನಿರ್ಲಕ್ಷಿಸುತ್ತೇವೆ. ಆದರೆ, ಇದು ತೀರಾ ವೈಯಕ್ತಿಕವಾಗಿದೆ. ಇನ್ನೊಬ್ಬರ ಜೀವನದಲ್ಲಿ ಚೆಲ್ಲಾಟವಾಡುವ ಧೈರ್ಯ ಮಾಡಬೇಡಿ ಎಂದು ಟೀಕಿಸಿ ಪೋಸ್ಟ್ ಮಾಡಿದ್ದಾರೆ.
ಓದಿ: ಬಾಲಿವುಡ್ ನಟಿ ರವೀನಾ ಟಂಡನ್ಗೆ ಆಪತ್ತು ತಂದ ವೈರಲ್ ವಿಡಿಯೋ: ತನಿಖೆಗೆ ಆದೇಶ