'2023' ಸಿನಿ ಪ್ರೇಮಿಗಳ ಹಬ್ಬ. ಜನವರಿಯಿಂದ ಈವರೆಗೆ ಅನೇಕ ಸಿನಿಮಾಗಳು ತೆರೆಕಂಡಿದ್ದು, ಮುಂದಿನ ದಿನಗಳಲ್ಲಿ ಇದಕ್ಕೂ ಹೆಚ್ಚಿನ ಚಿತ್ರಗಳು ತೆರೆ ಕಾಣಲು ಸಜ್ಜಾಗಿವೆ. ಆದರೆ, ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳು ಹಿಟ್ ಆಗುವುದಕ್ಕಿಂತ ಬಿಡುಗಡೆಯಲ್ಲೇ ದಾಖಲೆ ಬರೆದಿವೆ. ಕಳೆದ ವಾರ ತೆರೆ ಕಂಡ 'ಬಾನ ದಾರಿಯಲಿ', 'ತೋತಾಪುರಿ 2' ಹಾಗೂ 'ಕ್ರಾಂತಿವೀರ' ಸೇರಿದಂತೆ ಈವರೆಗೆ 160 ಸಿನಿಮಾಗಳು ರಿಲೀಸ್ ಆಗಿವೆ. ಡಬಲ್ ಸೆಂಚುರಿಗೆ ಇನ್ನೂ 40 ಚಿತ್ರಗಳು ಬೇಕಾಗಿದ್ದು, ಅದಕ್ಕೆ ಮುನ್ನುಡಿಯಾಗಿ ಈ ವಾರ ಸಾಲು ಸಾಲು ಸಿನಿಮಾಗಳು ಪ್ರೇಕ್ಷಕರ ಮುಂದೆ ಬರಲಿವೆ.
ಅಕ್ಟೋಬರ್ 6 ಮತ್ತು 7ರಂದು ಒಟ್ಟು 7 ಚಿತ್ರಗಳು ಬಿಡುಗಡೆಯಾಗುತ್ತಿದೆ. ವಿನೋದ್ ಪ್ರಭಾಕರ್ ನಟನೆಯ 'ಫೈಟರ್', ದಿವಂಗತ ಚಿರಂಜೀವಿ ಸರ್ಜಾ ನಟನೆಯ ಕೊನೆಯ ಚಿತ್ರ 'ರಾಜಮಾರ್ತಾಂಡ', ಮಾಲಾಶ್ರೀ ಅಭಿನಯದ 'ಮಾರಕಾಸ್ತ್ರ', ಹಿರಿಯ ನಿರ್ದೇಶಕ ಪಿ.ಎಚ್. ವಿಶ್ವನಾಥ್ ನಿರ್ದೇಶನದ 'ಆಡೇ ನಮ್ ಗಾಡ್', 'ಮಿಸ್ಟರ್ ಆಂಡ್ ಮಿಸಸ್ ಮನ್ಮಥ', 'ಲವ್' ಮತ್ತು 'ಅಭಿರಾಮಚಂದ್ರ' ಚಿತ್ರಗಳು ತೆರೆ ಕಾಣಲಿವೆ. ಈ ಏಳು ಸಿನಿಮಾಗಳಲ್ಲಿ 'ರಾಜಮಾರ್ತಾಂಡ' ಮತ್ತು 'ಫೈಟರ್' ಮಧ್ಯೆ ಬಿಗ್ ಪೈಪೋಟಿ ಇರಲಿದೆ.
'ರಾಜಮಾರ್ತಾಂಡ': ಚಿರು ತಮ್ಮ ನಿಧನಕ್ಕೂ ಮುನ್ನ 'ರಾಜಮಾರ್ತಾಂಡ' ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದರು. ಈ ಸಿನಿಮಾ ನಾಳೆ (ಅ.6) ಚಿರು ಸಹೋದರ, ನಟ ಧ್ರುವ ಸರ್ಜಾ ಹುಟ್ಟುಹಬ್ಬದಂದೇ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿರಂಜೀವಿ ಪಾತ್ರಕ್ಕೆ ಸಹೋದರ ಧ್ರುವ ಸರ್ಜಾ ಡಬ್ಬಿಂಗ್ ಮಾಡಿದ್ದಾರೆ. ಇದರ ಜೊತೆಗೆ ರಾಜಮಾರ್ತಾಂಡದಲ್ಲಿ ನಟ ದರ್ಶನ್ ಅವರ ಧ್ವನಿ ಸಹ ಕೇಳಬಹುದು. ಅಣ್ಣನ ಕೊನೆ ಸಿನಿಮಾದ ಪ್ರಮೋಷನ್ ಅನ್ನು ಧ್ರುವ ಸರ್ಜಾ ಭಾರೀ ಜೋರಾಗಿಯೇ ಮಾಡುತ್ತಿದ್ದಾರೆ.
ಚಿತ್ರದಲ್ಲಿ ನಾಯಕಿಯರಾಗಿ ದೀಪ್ತಿ ಸಾತಿ, ಮೇಘಶ್ರೀ, ತ್ರಿವೇಣಿ (ಟಗರು) ಅಭಿನಯಿಸಿದ್ದಾರೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರ, ಶಂಕರ್ ಅಶ್ವಥ್, ವಿನೀತ್ ಕುಮಾರ್ (ಬಾಂಬೆ) ಮುಂತಾದವರು ತಾರಾಬಳಗದಲ್ಲಿದ್ದಾರೆ. ಗೀತರಚನೆಕಾರರಾಗಿ ಜನಪ್ರಿಯರಾಗಿರುವ ಜೆ.ಕೆ.ರಾಮನಾರಾಯಣ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.
ಶ್ರೀ ಮಾದೇಶ್ವರ ಪ್ರೊಡಕ್ಷನ್ಸ್ ಮೂಲಕ ಪ್ರಣವ್ ಗೌಡ.ಎನ್, ನಿವೇದಿತಾ ಹಾಗೂ ಶಿವಕುಮಾರ್ ಅದ್ಧೂರಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಸುಮಧುರವಾದ ನಾಲ್ಕು ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಧರ್ಮವಿಶ್ ಹಿನ್ನೆಲೆ ಸಂಗೀತ 'ರಾಜಮಾರ್ತಾಂಡ'ನ ವೈಭವ ಹೆಚ್ಚಿಸಿದೆ. ಜೆ.ಕೆ. ಗಣೇಶ್ ಛಾಯಾಗ್ರಹಣ, ವೆಂಕಟೇಶ್ ಯು ಡಿ ವಿ ಸಂಕಲನ, ವಿನೋದ್, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಹರ್ಷ ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ.
'ಫೈಟರ್': ಸದ್ಯ ಹಾಡುಗಳು ಹಾಗು ಟ್ರೇಲರ್ನಿಂದಲೇ ಕ್ರೇಜ್ ಹುಟ್ಟಿಸಿರುವ ಈ ಚಿತ್ರ ನಾಳೆ ಪ್ರೇಕ್ಷಕರಿಗೆ ದರ್ಶನ ಕೊಡಲಿದೆ. ಅನ್ಯಾಯದ ವಿರುದ್ಧ ಹಾಗೂ ರೈತರ ಪರವಾಗಿ ಹೋರಾಡುವ 'ಫೈಟರ್' ಆಗಿ ವಿನೋದ್ ಪ್ರಭಾಕರ್ ಕಾಣಿಸಿಕೊಂಡಿದ್ದಾರೆ. ವಿನೋದ್ ಜೋಡಿಯಾಗಿ ಲೇಖಾ ಚಂದ್ರ ನಟಿಸಿದ್ದಾರೆ. ಈ ಚಿತ್ರವನ್ನು ನೂತನ್ ಉಮೇಶ್ ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ಗುರುಕಿರಣ್ ಅವರ ಸಂಗೀತವಿದ್ದು, ಗೀತರಚನೆಕಾರ ಕವಿರಾಜ್ ಅವರ ಸಾಹಿತ್ಯವಿದೆ. ಸಿನಿಮಾಗೆ ಶೇಖರ್ ಚಂದ್ರ ಛಾಯಾಗ್ರಹಣವಿದ್ದು, ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರು ಐದು ಭರ್ಜರಿ ಆ್ಯಕ್ಷನ್ ಸಿಕ್ವೇನ್ಸ್ ಮಾಡಿದ್ದಾರೆ.
ವಿನೋದ್ ಪ್ರಭಾಕರ್ ಹಾಗೂ ಲೇಖಾ ಚಂದ್ರ ಅಲ್ಲದೇ ಹಿರಿಯ ನಟ ಶರತ್ ಲೋಹಿತಾಶ್ವ, ಪವನ್ ಗೌಡ, ನಿರೋಶ್ ರಾಧಾ, ರಾಜೇಶ್ ನಟರಂಗ, ದೀಪಕ್ ಶೆಟ್ಟಿ, ಗಿರಿಜಾ ಲೋಕೇಶ್, ಕುರಿ ಪ್ರತಾಪ್ ಸೇರಿದಂತೆ ಹಲವರು ನಟಿಸಿದ್ದಾರೆ. ನಿರ್ಮಾಪಕ ಸೋಮಶೇಖರ್ ಅವರು ಚಿತ್ರತಂಡಕ್ಕೆ ಯಾವುದೇ ಕೊರತೆ ಬಾರದ ಹಾಗೆ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ನೂತನ್ ಉಮೇಶ್ ಅವರು ಅಷ್ಟೇ ಚೆನ್ನಾಗಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಇನ್ನು ಆಕ್ಷನ್ ಪ್ರಿಯರಿಗೂ ಈ ವಾರ ಹಬ್ಬವೇ ಸರಿ. ಬಿಡುಗಡೆಯಾಗುತ್ತಿರುವ ಏಳು ಸಿನಿಮಾಗಳ ಪೈಕಿ ಮೂರು ಆಕ್ಷನ್ ಚಿತ್ರಗಳಿವೆ. ಮಾರಕಾಸ್ತ್ರ, ಫೈಟರ್ ಮತ್ತು ರಾಜಮಾರ್ತಾಂಡ ಸಿನಿಮಾಗಳು ಆಕ್ಷನ್ ಪ್ರಿಯರನ್ನು ಖುಷಿಪಡಿಸಿದರೆ, ಆಡೇ ನಮ್ ಹಾಡ್ ಮತ್ತು ಮಿಸ್ಟರ್ ಅಂಡ್ ಮಿಸಸ್ ಮನ್ಮಥ ನಿಮ್ಮನ್ನು ನಗಿಸಲಿದೆ. ಲವ್ ಮತ್ತು ಅಭಿರಾಮಚಂದ್ರ ಚಿತ್ರಗಳು ಪ್ರೇಮಕಥೆಗಳಾಗಿವೆ. ನಾಳೆಯಿಂದ ಈ ಸಿನಿಮಾಗಳು ಬೆಳ್ಳಿ ತೆರೆಗೆ ಪ್ರವೇಶಿಸಲಿವೆ.
ಇದನ್ನೂ ಓದಿ: 'ನನ್ನ ಜೊತೆ ಅಣ್ಣನ 'ರಾಜಮಾರ್ತಾಂಡ' ಸಿನಿಮಾ ನೋಡ ಬನ್ನಿ.. ಇದೇ ನನ್ನ ಹುಟ್ಟುಹಬ್ಬಕ್ಕೆ ಉಡುಗೊರೆ'