ದಿ. ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್ ದೇವರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಲಕ್ಕಿಮ್ಯಾನ್ ಸಿನಿಮಾ ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಪುನೀತ್ ಮೃತರಾಗಿ 11 ತಿಂಗಳು ಕಳೆದಿದ್ದು, ಅಪ್ಪು ಮೇಲಿನ ಅಭಿಮಾನಿಗಳ ಪ್ರೀತಿ ವಿವಿಧ ರೀತಿಯಲ್ಲಿ ವ್ಯಕ್ತವಾಗುತ್ತಲೇ ಇದೆ. ಇದೀಗ ಲಕ್ಕಿಮ್ಯಾನ್ ಬಿಡುಗಡೆಯ ಖುಷಿಯನ್ನು ಹಬ್ಬದಂತೆ ಆಚರಣೆ ಮಾಡುತ್ತಿದ್ದಾರೆ ಅಭಿಮಾನಿಗಳು.
ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರದಲ್ಲಿ ಲಕ್ಕಿಮ್ಯಾನ್ ಬಿಡುಗಡೆ ಸಂಭ್ರಮ ಜೋರಾಗಿದೆ. ಅಭಿಮಾನಿಗಳು ಬಿಗ್ ಸ್ಕ್ರೀನ್ನಲ್ಲಿ ಪವರ್ ಸ್ಟಾರ್ ಅನ್ನು ದೇವರ ರೂಪದಲ್ಲಿ ಕಂಡು ಹರ್ಷ ವ್ಯಕ್ತಪಡಿಸಿದ್ದಾರೆ. ಥಿಯೇಟರ್ ಎದುರು ಸಂಭ್ರಮಾಚರಿಸಿದ್ದಾರೆ.
ನಾಗೇಂದ್ರ ಪ್ರಸಾದ್ ನಿರ್ದೇಶನದ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರದ ಕೀ ರೋಲ್‌ನಲ್ಲಿ ದಿ.ಪುನೀತ್ ರಾಜ್‌ಕುಮಾರ್ ನಟಿಸಿದ್ದು, ಇದು ಅಪ್ಪು ಕೊನೆಯ ಸಿನಿಮಾ ಎನ್ನುವುದೇ ಬೇಸರದ ಸಂಗತಿ. ಚಿತ್ರದಲ್ಲಿನ ಪ್ರಭುದೇವ ಹಾಗೂ ಪುನೀತ್ ಡ್ಯಾನ್ಸ್ ಸಿನಿಮಾದ ಹೈಲೆಟ್ಸ್.
ಮುಂಬೈ, ಚೆನ್ನೈ, ದೆಹಲಿ, ಹೈದರಾಬಾದ್, ಅಹಮದಾಬಾದ್, ನೋಯ್ಡಾ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿಯೂ ಲಕ್ಕಿಮ್ಯಾನ್ ಚಿತ್ರ ತೆರೆ ಕಂಡಿದೆ. ತಮಿಳುನಾಡಿನ ಡೆಂಕಣಿ ಕೋಟೆ, ಹೊಸೂರು, ಕೇರಳದ ಸುಲ್ತಾನ್ ಬತ್ತೇರಿಯಲ್ಲೂ ಸಿನಿಮಾ ಪ್ರದರ್ಶನವಾಗಲಿದೆ. ಈ ಸಿನಿಮಾ ಬೇರೆ ಭಾಷೆಗಳಿಗೆ ಡಬ್ ಆಗಿಲ್ಲ. ಕನ್ನಡ ವರ್ಷನ್ನಲ್ಲೇ ಹೊರರಾಜ್ಯಗಳಲ್ಲಿಯೂ ಬಿಡುಗಡೆಯಾಗುತ್ತಿರುವುದು ವಿಶೇಷ.
ಇದನ್ನೂ ಓದಿ: ವಿಶ್ವಾದ್ಯಂತ ರಣ್ಬೀರ್-ಆಲಿಯಾ ಅಭಿನಯದ 'ಬ್ರಹ್ಮಾಸ್ತ್ರ' ಸಿನಿಮಾ ಬಿಡುಗಡೆ
ಚಿತ್ರದಲ್ಲಿ ನಾಗಭೂಷಣ್, ಸುಂದರ್ ರಾಜ್, ಸುಧಾ ಬೆಳವಾಡಿ, ಸಾಧುಕೋಕಿಲ, ರೋಶನಿ ಹೀಗೆ ದೊಡ್ಡ ತಾರಾಬಳಗವಿದೆ. ವಿ2 ವಿಜಯ್ ವಿಕ್ಕಿ ಮ್ಯೂಸಿಕ್‌ನಲ್ಲಿ ಈಗಾಗಲೇ ಸಿನಿಮಾ ಸಾಂಗ್ಸ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಛಾಯಾಗ್ರಾಹಕ ಜೀವ ಶಂಕರ್ ಸೊಗಸಾಗಿ ಚಿತ್ರ ಸೆರೆ ಹಿಡಿದಿದ್ದಾರೆ. ಪಿ.ಆರ್.ಮೀನಾಕ್ಷಿ ಸುಂದರಂ ಹಾಗೂ ಆರ್.ಸುಂದರ ಕಾಮರಾಜ್ ಚಿತ್ರ ನಿರ್ಮಿಸಿದ್ದಾರೆ.